
ಚಿಕ್ಕಮಗಳೂರು-ದೇಶದ ಮೂರನೇ ಅತಿದೊಡ್ಡ ಪಕ್ಷ ಬಿ.ಎಸ್.ಪಿ ಯಿಂದ ಮಾತ್ರ ಬಹು ಸಂಖ್ಯಾತ ವರ್ಗಕ್ಕೆ ಸರ್ವ ಸಮಾನ ಹಕ್ಕು ಅಧಿಕಾರ ನೀಡಲು ಹಾಗೂ ಸಂವಿಧಾನವನ್ನು ಯಥಾವತ್ತಾಗಿ ಜಾರಿಗೊಳಿಸಲು ಸಾಧ್ಯವಾಗಲಿದೆ ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಹೇಳಿದರು.
ತಾಲ್ಲೂಕಿನ ಇಂದಾವರ ಗ್ರಾಮದ ಅನ್ನಪೂರ್ಣ ವೃದ್ದಾಶ್ರಮದಲ್ಲಿ ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷೆ, ಮಾಜಿ ಮುಖ್ಯಮಂತ್ರಿ ಮಾಯಾವತಿಯವರ 70ನೇ ಜನ್ಮದಿನವನ್ನು ಸ್ವಚ್ಚತಾ ಕಾರ್ಯ ಹಾಗೂ ಹಿರಿಯರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಿ ಅರ್ಥಪೂರ್ಣವಾಗಿ ಬುಧವಾರ ಆಚರಿಸಿ ಮಾತನಾಡಿದರು.
ಉತ್ತರ ಪ್ರದೇಶದಲ್ಲಿ ನಾಲ್ಕು ಭಾರಿ ಮುಖ್ಯಮಂತ್ರಿಗಳಾಗಿ ಅಂಬೇಡ್ಕರ್ ಆಶಯದಂತೆ ಅಧಿಕಾರ ನಿರ್ವಹಿಸಿದ ಕೀರ್ತಿ ಮಾಯಾವತಿ ಅವರಿಗೆ ಸಲ್ಲುತ್ತದೆ. ಶೋಷಿತರು, ಬಡವರು, ನಿವೇಶನ ಹಾಗೂ ಸೌಲಭ್ಯ ವಂಚಿತರಿಗೆ ನಿವೇಶನ, ನೌಕರಿ, ವಸತಿ ಹಾಗೂ ಉಳುವವನಿಗೆ ಭೂಮಿ ವ್ಯವಸ್ಥೆ ಕಲ್ಪಿಸಿಕೊಟ್ಟು ಆಸಹಾಯಕರಿಗೆ ಆಸರೆಯಾಗಿದ್ದರು ಎಂದರು.
ಪ್ರಸ್ತುತ ದೇಶ ಮತ್ತು ರಾಜ್ಯವನ್ನು ಆಳುತ್ತಿರುವ ಎರಡು ರಾಷ್ಟ್ರೀಯ ಪಕ್ಷಗಳು ಬಹುಸಂಖ್ಯಾತರ ಜಾತಿ ಹೆಸರೇಳಿಕೊಂಡು ಅಧಿಕಾರ ಗಿಟ್ಟಿಸಿವೆ ಹೊರತು ಸಮಗ್ರವಾಗಿ ದೊರೆಯಬೇಕಾದ ಅಧಿಕಾರ ನೀಡಿಲ್ಲ.ದುಡಿಯುವ ವರ್ಗಕ್ಕೆ ನ್ಯಾಯಬದ್ಧ ಹಕ್ಕು, ಸುಸ್ಥಿರ ಜೀವನ ನೀಡದೇ ಸುಳ್ಳು ಹೇಳಿ, ಮತಪಡೆದು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಹೇಳಿದರು.
ದೇಶದಲ್ಲಿ ಹಿಂದುಳಿದ ವರ್ಗಗಳಿಗೆ ಸಂವಿಧಾನ ಜಾರಿಗೊಳಿಸಿ ಭವಿಷ್ಯದಲ್ಲಿ ಸದೃಢ ದೇಶ ನಿರ್ಮಿಸಲು ಕೇಂದ್ರದಲ್ಲಿ ಮಾಯಾವತಿ ಪ್ರಧಾನಿಯಾದರೆ ಮಾತ್ರ ಸಾಧ್ಯ. ಹೀಗಾಗಿ ಕಾರ್ಯಕರ್ತರು ಸ್ಥಳೀಯ ಮಟ್ಟ ದಿಂದ ಪಾರ್ಲಿಮೆಂಟ್ವರೆಗೂ ಶ್ರಮಿಸಬೇಕಿದ್ದು ಒಗ್ಗಟ್ಟಿನಿಂದ ಕೈಜೋಡಿಸಿ, ಆಡಳಿತ ಪಕ್ಷಕ್ಕೆ ಸರಿಯಾದ ಪಾಠ ಕಲಿಸಬೇಕಿದೆ ಎಂದರು.
ಬಿಎಸ್ಪಿ ಪಕ್ಷವನ್ನು ಅಂದಿನ ಕಾಲದಲ್ಲಿ ಕಾನ್ಸಿರಾಂ ಸ್ಥಾಪಿಸಿ ಕಾಶ್ಮೀರದಿಂದ ಕನ್ಯಾಕುಮಾರಿತನಕ ಸಂಚರಿಸಿ ಪಕ್ಷ ಸಂಘಟಿಸಿದ್ದರು. ನಂತರ ಮಾಯಾವತಿ ಅವರಲ್ಲಿನ ನಾಯಕತ್ವ ಗುರುತಿಸಿ ಭವಿಷ್ಯದ ನಾಯಕಿಯನ್ನಾಗಿ ಮಾಡಿ ಅಂಬೇಡ್ಕರ್ ಆಶಯವನ್ನು ಬಿಎಸ್ಪಿ ಮುಖಾಂತರ ರಾಷ್ಟ್ರಕ್ಕೆ ಪರಿಚಯಿಸಿದ ಕೀರ್ತಿ ಕಾನ್ಸಿರಾಂ ಅವರಿಗೆ ಸಲ್ಲಬೇಕು ಎಂದು ತಿಳಿಸಿದರು.
ಪ್ರಸ್ತುತ ಹಿಂದೂ ಧರ್ಮ ಹೆಸರೇಳಿ ಪರಿಶಿಷ್ಟರಿಗೆ ಅಧಿಕಾರದಿಂದ ದೂರತಳ್ಳಿ, ಅವರಲ್ಲಿ ಮೌಡ್ಯತೆ ಬಿತ್ತಿ ಹಿಂದಿಕ್ಕುವ ಜೊತೆಗೆ ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಶೂನ್ಯ ಸಾಧಿಸಿದೆ. ಆ ನಿಟ್ಟಿನಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಮಾಯಾವತಿ ಪ್ರಧಾನಿಯಾಗುವುದು ಅನಿವಾರ್ಯವಾಗಿದ್ದು ಎಲ್ಲರು ಒಕ್ಕೊರಲಿನಿಂದ ರಾಷ್ಟ್ರೀಯ ಅಧ್ಯಕ್ಷರ ಕೈಬಲಪಡಿಸಬೇಕಿದೆ ಎಂದರು.

ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ, ಉಳುವವನಿಗೆ ಸಾಗುವಳಿ ಚೀಟಿ, ಅಂಬೇಡ್ಕರ್ ಆವಾಜ್ ಯೋಜನೆಯಡಿ ವಸತಿ ಹಕ್ಕುಪತ್ರ, ಖಾಸಗೀ ವಲಯದಲ್ಲಿ ಮೀಸಲಾತಿ, ರಕ್ಷಣೆ ಮಾಯಾವತಿ ಕಲ್ಪಿಸಿದ್ದರು. ಇಂದಿನ ಯುವಸಮೂಹ ಬೇಡದ ಗ್ರಂಥಗಳನ್ನು ಓದುವ ಬದಲಾಗಿ ಅಂಬೇಡ್ಕರ್ ಚರಿತ್ರೆ ಅಭ್ಯಾಸಿಸಿ ಮುನ್ನೆಡೆದರೆ ಉಜ್ವಲ ಭವಿಷ್ಯ ನಿಮ್ಮದಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಸ್ಪಿ ಜಿಲ್ಲಾಧ್ಯಕ್ಷ ಪಿ.ಪರಮೇಶ್ವರ್, ರಾಷ್ಟ್ರದಲ್ಲಿ ಮಾಯಾವತಿಯ ವರನ್ನು ಪ್ರಧಾನಿಯಾಗಿಸಲು ಅಧಿಕಾರ ಬಲ ಬಹಳಷ್ಟಿದೆ. ಸ್ಥಳೀಯ ಜಿ.ಪಂ. ಹಾಗೂ ತಾ.ಪಂ. ಚುನಾವಣೆಯಲ್ಲಿ ಪಕ್ಷವನ್ನು ಸದೃಢಗೊಳಿಸಿ, ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಿದಾಗ ಮಾತ್ರ ರಾಷ್ಟ್ರೀಯ ಅಧ್ಯಕ್ಷರ ಜನ್ಮದಿನಕ್ಕೆ ನೈತಿಕ ಅರ್ಥ ಬರಲಿದೆ ಎಂದರು.
ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಪಿ.ವೇಲಾಯುಧನ್, ಜಿಲ್ಲಾ ಉಪಾಧ್ಯಕ್ಷೆ ಕೆ. ಎಸ್.ಮಂಜುಳಾ, ತಾಲ್ಲೂಕು ಅಧ್ಯಕ್ಷ ಹೆಚ್.ಕುಮಾರ್, ಪ್ರಧಾನ ಕಾರ್ಯದರ್ಶಿ ವಸಂತ್, ಖಜಾಂಚಿ ರತ್ನ, ಮುಖಂಡರುಗಳಾದ ವೆಂಕಟೇಶ್, ಕಿಟ್ಟು, ಗಿರೀಶ್, ವೃಧ್ದಾಶ್ರಮದ ವ್ಯವಸ್ಥಾಪಕ ಶಿವಣ್ಣ ಮತ್ತಿತರಿದ್ದರು.
—————————ಸುರೇಶ್