ಚಿಕ್ಕಮಗಳೂರು:ಹಿರೇಮಗಳೂರಿನಲ್ಲಿ ‘ಬುದ್ಧ’ ಪ್ರತಿಮೆಗೆ ಪೂಜೆ ಸಲ್ಲಿಸಿದ ಜೈನರು-ಹಳೇಬೀಡಿನ ಜೈನಗುತ್ತಿಯಲ್ಲಿ ಪ್ರತಿಷ್ಠಾ ಪನೆಗೊಳ್ಳಲಿರುವ ‘ಬುದ್ಧ’

ಚಿಕ್ಕಮಗಳೂರು:ಹೊಯ್ಸಳರ ಶಿಲ್ಪ ಕಲೆಯ ತವರು ಹಾಸನ ಜಿಲ್ಲೆಯ ಹಳೆಬೀಡು ಸಮೀಪದ ಜೈನಗುತ್ತಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ 24 ಅಡಿ ಎತ್ತರದ 64 ಟನ್ ತೂಕದ ಬೃಹತ್ ಬುದ್ಧ ಪ್ರತಿಮೆ ರಾಜಸ್ಥಾನದ ಜೈಪುರದಿಂದ ಶನಿವಾರ ನಗರ ಹೊರ ವಲಯಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ನಗರದ ಜೈನ ಸಮಾಜದ ಮುಖಂಡರು ಶ್ರದ್ಧಾ ಭಕ್ತಿಯಿಂದ ಬರಮಾಡಿಕೊಂಡು ಪೂಜೆ ಸಲ್ಲಿಸಿದರು.

2.5 ಕೋಟಿ ರೂ.ಗಳ ವೆಚ್ಚದಲ್ಲಿ ಜೈಪುರದಲ್ಲಿ ರಾಜಸ್ಥಾನ ಗ್ರಾನೈಟ್ ಏಕ ಶಿಲೆಯಲ್ಲಿ ಕೆತ್ತನೆಗೊಂಡಿರುವ ಬುದ್ಧ ಪ್ರತಿಮೆ ಮತ್ತು ಪ್ರತಿಮೆ ಜೋಡಿಸುವ ಪೀಠ ಹೊತ್ತ ಎರಡು ದೊಡ್ಡ ಟ್ರಕ್‌ಗಳು ವಾರದ ಹಿಂದೆ ಪ್ರಯಾಣ ಆರಂಭಿಸಿ,ಇಂದು ಕಡೂರು ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಬಂದವು.

ಹಿರೇಮಗಳೂರಿನಲ್ಲಿ ಕಾಯ್ದಿದ್ದ ಜೈನ ಸಮಾಜದ ಮುಖಂಡರು ಶ್ರದ್ಧಾ ಭಕ್ತಿಯಿಂದ ಪೂಜೆಯೊಂದಿಗೆ ಗೌರವ ಸಮರ್ಪಿಸಿ ಬೀಳ್ಕೊಟ್ಟರು.

ಜೈನ ಸಮಾಜದ ಮಾತೆಯರು ಪೂರ್ಣ ಕುಂಭ ಹೊತ್ತು ಮಂತ್ರ ಪಠಿಸಿ ಬುದ್ಧರಿಗೆ ಜೈಕಾರ ಹಾಕಿದರು. ಪ್ರತಿಮೆಗೆ ಹೂ ಮಾಲೆ ಹಾಕಿ ಪೂಜೆ ಸಲ್ಲಿಸಿ ಈಡುಗಾಯಿ ಸೇವೆ ಸಲ್ಲಿಸಿದರು.ಜೊತೆಗೆ ಅಲ್ಲಿ ಸಮಾವೇಶಗೊಂಡಿದ್ದ ಜನರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಈ ತಿಂಗಳ 26ರಿಂದ ನವಂಬರ್ 4ರವರೆಗೆ ಪಂಚ ಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವ ಹಳೆಬೀಡಿನ ಜೈನ ಗುತ್ತಿಯಲ್ಲಿ ನಡೆಯಲಿದ್ದು,ರಾಜ್ಯವಲ್ಲದೆ ದೇಶದ ನಾನಾ ಕಡೆಗಳಿಂದ ಜೈನ್ ಸಮುದಾಯದ ಮುನಿಗಳು,ಮುಖಂಡರು ಆಗಮಿಸಲಿದ್ದಾರೆ ಎಂದು ಜೈನ ಸಮಾಜದ ಅಡುಗೂರಿನ ನಾಗಚಂದ್ರ ಜೈನ್ ಸುದ್ದಿಗಾರರಿಗೆ ತಿಳಿಸಿದರು.

ಚಿಕ್ಕಮಗಳೂರು ಜೈನ್ ಸಮಾಜದ ಅಧ್ಯಕ್ಷೆ ಚಾರಿತ್ರ ಜಿನೇಂದ್ರ ಜೈನ್, ಜೈನ್ ಸಮಾಜದ ಮುಖಂಡರಾದ ಜಿನೇಂದ್ರ ಬಾಬು ಜೈನ್, ಮೂಗ್ತಿಹಳ್ಳಿಯ ಪದ್ಮಾನಂದ ಜೈನ್, ಅಡಗೂರು ಜೈನ್ ಸಮಾಜದ ಕೀರ್ತಿ ಜೈನ್, ಬ್ರಹ್ಮಪಾಲ್ ಜೈನ್ ಸೇರಿದಂತೆ ಅನೇಕ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

ಬುದ್ಧ ಪ್ರತಿಮೆ ಹೊತ್ತ ಟ್ರಕ್ ರಸ್ತೆಯಲ್ಲಿ ನಿಧಾನವಾಗಿ ಸಾಗುವಾಗ ಅನೇಕ ಜನರು ಕುತೂಹಲದಿಂದ ನೋಡಿ ಕೈ ಮುಗಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

Leave a Reply

Your email address will not be published. Required fields are marked *

× How can I help you?