ಚಿಕ್ಕಮಗಳೂರು-ಬುಕ್ಕಾಂಬುದಿ ತಪೋಕ್ಷೇತ್ರದಲ್ಲಿ ಜಂಗಮ ಗಣಾರಾಧನೆ-ಧರ್ಮಪ್ರಜ್ಞೆ ಮೂಡಿಸುವಲ್ಲಿ ಜಂಗಮರ ಪಾತ್ರ ಅಧಿಕ:ಕಾರ್ಜುವಳ್ಳಿ ಶ್ರೀಗಳು

ಚಿಕ್ಕಮಗಳೂರು-ಧರ್ಮ ಪ್ರಜ್ಞೆ ಮೂಡಿಸುವಲ್ಲಿ ಜಂಗಮರ ಪಾತ್ರ ಹೆಚ್ಚಿನದು.ತಿರ್ಕೊಂಡು ತಂದು ಕರ್ಕೊಂಡು ತಿನ್ನಬೇಕು ,ಎನ್ನುವ ಮಾತಿಗೆ ಅನ್ವರ್ಥ ಜಂಗಮರು ಎಂದು ಕಾರ್ಜುವಳ್ಳಿ ಮಠಾಧ್ಯಕ್ಷ ಶ್ರೀಷ.ಬ್ರ.ಸದಾಶಿವ ಶಿವಾಚಾರ್ಯ ಸ್ವಾಮೀಜಿ ನುಡಿದರು.

ತಪೋಕ್ಷೇತ್ರ ಬುಕ್ಕಾಂಬುದಿ ಬೆಟ್ಟದಲ್ಲಿ ಆಲೂರು ಕಾರ್ಜುವಳ್ಳಿ ಶ್ರೀಸಂಸ್ಥಾನ ಹಿರೇಮಠದ ವತಿಯಿಂದ ನಿನ್ನೆ ಆಯೋಜಿಸಿದ್ದ ‘ಜಂಗಮ ಗಣಾರಾಧನೆ’ ಧರ್ಮ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಜನಸಾಮಾನ್ಯರ ಜೊತೆ ಅತ್ಯಂತ ನಿಕಟವರ್ತಿ ಸಂಪರ್ಕ ಹೊಂದಿರುವ ಜಂಗಮರು ಧಾರ್ಮಿಕ ಸಂಸ್ಕಾರಗಳನ್ನು ನಡೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಬಹುತೇಕ ಗ್ರಾಮಗಳಲ್ಲಿ ಜಂಗಮರ ವಾಸ್ತವ್ಯ ಇದೆ. ಶಿವಾಚಾರ್ಯರಿಗಿಂತ ಜಂಗಮರು ಜನರಿಗೆ ಹತ್ತಿರವಿರುತ್ತಾರೆ. ಜಪ-ತಪ-ಧ್ಯಾನ-ಪೂಜೆ ಇನ್ನಿತರೆ ಧಾರ್ಮಿಕ ಸಂಪ್ರದಾಯಗಳನ್ನು ತಿಳಿಸಿಕೊಡುವಲ್ಲಿ ಇವರ ಪರಿಶ್ರಮ ಗಣನೀಯ. ಜವಾಬ್ದಾರಿ ಅರಿತು ಜನಸಮುದಾಯಕ್ಕೆ ನಿಜಧರ್ಮ ಸಾರವನ್ನು ಉಣಬಡಿಸುವಲ್ಲಿ ಹೆಚ್ಚಿನ ಮುತವರ್ಜಿವಹಿಸಬೇಕೆಂದು ಸ್ವಾಮೀಜಿ ಕರೆ ನೀಡಿದರು.

ಧರ್ಮ ಪ್ರವರ್ತಕರಾದ ಆದಿ ಜಗದ್ಗುರು ರೇಣುಕಾಚಾರ್ಯರು ‘ಸಿದ್ಧಾಂತ ಶಿಖಾಮಣಿ’ ಧರ್ಮಗ್ರಂಥದಲ್ಲಿ ಜಂಗಮ ಗಣರಾಧನೆ ಹೇಳಿದ್ದಾರೆ. ಧರ್ಮಪ್ರಜ್ಞೆ ಮೂಡಿಸುವ ಶಿವಯೋಗಿ ತೃಪ್ತನಾದರೆ ಸಾಕ್ಷಾತ್ ಪರಮಾತ್ಮನೆ ಸಂತೃಪ್ತನಾಗುತ್ತಾನೆ. ಅವನು ಸಂತೃಪ್ತನಾದರೆ ಅವನೊಳಗೆ ಅಡಗಿರುವ ಚರಾಚರ ಜೀವಿಗಳೂ ಸಂತೃಪ್ತಗೊಳ್ಳುತ್ತವೆoಬ ಮಾತು ಬರುತ್ತದೆ.

ಜಂಗಮರು ಜೋಳಿಗೆ ಹಿಡಿದು ಬಿಕ್ಷೆ ಬೇಡಿತಂದುದ್ದನ್ನು ಎಲ್ಲರೊಂದಿಗೆ ಹಂಚಿಕೊoಡು ಉಣ್ಣುವುದು ಸಂಪ್ರದಾಯ. ಇದು ದಾಸೋಹ ಸಂಸ್ಕೃತಿ. ಜೋಳಿಗೆಯನ್ನು ಗುರುಗಳು ಹಿಡಿಯುತ್ತಾರೆ. ಶಿವಯೋಗಿ ಜಂಗಮರಿಗೆ ಪ್ರಸಾದ ಉಣಬಡಿಸಿ, ವಸ್ತ್ರ, ವಿಭೂತಿ, ರುದ್ರಾಕ್ಷಿ, ಶಿವದಾರ, ಕಾಣಿಕೆ ಶಕ್ತ್ಯಾನುಸಾರ ನೀಡುವ ಆಚರಣೆಯೆ ಜಂಗಮ ಗಣರಾಧನೆ ಎಂದರು.

ಉಜ್ಜಯಿನಿ ಶ್ರೀಸಿದ್ದಲಿಂಗ ಜಗದ್ಗುರುಗಳ ಪುಣ್ಯಾರಾಧನೆ ಶ್ರೀಪೀಠದಲ್ಲಿ ಜಂಗಮ ಗಣರಾಧನೆಯೊಂದಿಗೆ ನಡೆದುಕೊಂಡು ಬರುತ್ತಿದೆ.ಅಂದು ಕಂಬಳಿಯನ್ನು ಹಾಸಿ ಅದರಲ್ಲಿ ಮೆತ್ತಿದ ಜಂಗಮರ ಪಾದಧೂಳಿಯನ್ನು ಸ್ವತಃ ಜಗದ್ಗುರುಗಳು ಕೊಡವಿ ಸ್ವಚ್ಛಗೊಳಿಸುವ ಪದ್ಧತಿ ಇದೆ. ಯಥಾಶಕ್ತಿ ಜಂಗಮ ಗಣರಾಧನೆ ಆಗಬೇಕೆಂಬ ಸಂದೇಶ ಉಜ್ಜಯಿನಿಪೀಠ ನೀಡುತ್ತಿದ್ದು ಪ್ರೇರಣೆಗೊಂಡು ಆ ಮಹಾತಪಸ್ವಿಗಳು ಅನುಷ್ಠಾನ ಮಾಡಿದ ಈ ಪವಿತ್ರತಾಣದಲ್ಲಿ ಕಳೆದ ಮೂರುವರ್ಷಗಳಿಂದ ‘ಜಂಗಮ ಗಣರಾಧನೆ’ಯನ್ನು ಕಾರ್ಜುವಳ್ಳಿ ಶ್ರೀಸಂಸ್ಥಾನ ಹಿರೇಮಠ ನಡೆಸಿಕೊಂಡು ಬಂದಿದೆ.

ಹುಣಸಘಟ್ಟ, ನಂದಿಪುರ, ಹಾರನಹಳ್ಳಿ ಶಿವಾಚಾರ್ಯರು ಪಾಲ್ಗೊಂಡು ಅರ್ಥಪೂರ್ಣ ಗೊಳಿಸಿದ್ದಾರೆಂದು ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿಯವರು ನುಡಿದರು.

ತರೀಕೆರೆ ಶಾಸಕ ಶ್ರೀನಿವಾಸ ಧರ್ಮ ಸಮಾರಂಭದಲ್ಲಿ ಪಾಲ್ಗೊಂಡು ಕಾರ್ಜುವಳ್ಳಿ ಶ್ರೀಗಳ ನೇತೃತ್ವದಲ್ಲಿ ಬುಕ್ಕಾಂಬುದಿ ತಪೋಕ್ಷೇತ್ರದಲ್ಲಿ ವಿಶಿಷ್ಟ ಆಚರಣೆ ನಡೆಯುತ್ತಿರುವುದು ಸಂತಸದ ಸಂಗತಿ. ಅಧಿಕೃತ ಆಹ್ವಾನ ಇಲ್ಲದಿದ್ದರೂ ಕಾರ್ಯಕರ್ತರ ಅಪೇಕ್ಷೆಯಂತೆ ಪೂಜ್ಯರ ಆಶೀರ್ವಾದಪಡೆದು ಪವಿತ್ರ ಕಾರ್ಯದಲ್ಲಿ ಪಾಲ್ಗೊಳ್ಳುವ ಸದುದ್ದೇಶದಿಂದ ಬಂದಿದ್ದು ಸಂತೋಷವನ್ನುoಟು ಮಾಡಿದೆ ಎಂದರು.

ಶತಮಾನಗಳ ಇತಿಹಾಸವಿರುವ ಪವಿತ್ರ ಪುಣ್ಯಕ್ಷೇತ್ರದ ಮಹಿಮೆ ಅಪಾರ. ಇದರ ಸರ್ವಾಂಗೀಣ ಅಭಿವೃದ್ಧಿಗೆ ಪೂರ್ಣ ಸಹಕಾರ ಸಹಭಾಗಿತ್ವ ನೀಡುವುದಾಗಿ ಶಾಸಕರು ಭರವಸೆಯಿತ್ತರು.

ಸಮಾರಂಭ ಉದ್ಘಾಟಿಸಿದ ಚಿಕ್ಕಮಗಳೂರು ಜಂಗಮಬಳಗದ ಸಂಚಾಲಕ ವೇ.ಮೂ. ಪ್ರಭುಲಿಂಗಶಾಸ್ತ್ರೀ ಮಾತನಾಡಿ ಜಂಗಮ ಜಗದೋದ್ಧಾರಕ. ಜಾತಿ, ಮತ, ಪಂಥ ಯಾವುದೇ ಬೇದಗಳಿಲ್ಲದೆ ಜನಸಮುದಾಯಕ್ಕೆ ಧಾರ್ಮಿಕ ಸಂಪ್ರದಾಯ ಪದ್ಧತಿಗಳ ಆಚರಣೆಗೆ ಜಂಗಮರು ನೇತೃತ್ವವಹಿಸಿ ಸಹಕರಿಸುತ್ತಿದ್ದಾರೆ. ಹುಟ್ಟಿನಿಂದ ಸಾವಿನವರೆಗೆ 16ವಿಧದ ಶೋಡಸ ಸಂಸ್ಕಾರ ನೀಡುವ ಮೂಲಕ ಸನಾತನ ಧರ್ಮಪಾಲನೆಯಲ್ಲಿ ಮಹತ್ವದ ಕೊಡುಗೆ ನೀಡುವವರನ್ನು ಗುರುತಿಸಿ ಗೌರವಿಸಿ ಪ್ರೇರಣೆ ನೀಡುವುದರ ಜೊತೆಗೆ ಅವರಿಗೆ ಜವಾಬ್ದಾರಿಯ ಅರಿವು ಮೂಡಿಸುವ ಮಹತ್ವದ ಕೆಲಸವನ್ನು ಕಾರ್ಜುವಳ್ಳಿ ಶ್ರೀಗಳು ಮಾಡುತ್ತಿದ್ದಾರೆಂದರು.

ಹುಣಸಘಟ್ಟ ಹಾಲುಸ್ವಾಮಿಮಠದ ಶ್ರೀಗುರುಮೂರ್ತಿ ಶಿವಾಚಾರ್ಯರು ದಿವ್ಯಸಾನಿಧ್ಯವಹಿಸಿ ಮಾತನಾಡಿ ದೇಹ ದಾಹಗಳನ್ನು ಬಿಟ್ಟು ಸಮಾಜಕ್ಕಾಗಿ ಸವೆಯುವವರನ್ನು ಸದಾ ಸ್ಮರಣೆಯಲ್ಲಿ ಇಟ್ಟುಕೊಳ್ಳಲಾಗುತ್ತದೆ. ಉಜ್ಜಯಿನಿ ಪೂಜ್ಯ ಜಗದ್ಗುರುಗಳು ಹಕ್ಕಬುಕ್ಕರ ಕಾಲದಲ್ಲಿ ಈ ಭಾಗದ ಮಹಿಳೆಯರಿಗೆ ಶಾಪ ವಿಮೋಚನೆಗಾಗಿ ಈ ದುರ್ಗಮವಾಗಿದ್ದ ಪ್ರದೇಶದಲ್ಲಿ 108ದಿನಗಳ ಕಠಿಣ ತಪೋನುಷ್ಠಾನ ಮಾಡಿದ ಪಾವನ ಕ್ಷೇತ್ರವಿದು. ಇಲ್ಲಿ ಶುದ್ಧಮನಸ್ಸಿನಿಂದ ಸದೃಢ ಸಂಕಲ್ಪ ಮಾಡಿದರೆ ಮಹಾಗುರುವಿನ ಆಶೀರ್ವಾದದಿಂದ ಸಾಕಾರಗೊಳ್ಳುತ್ತದೆ ಎಂಬುದು ತಮ್ಮ ಸ್ವಂತ ಅನುಭವ ಎಂದರು.

ನoದಿಪುರದ ಶ್ರೀಮರುಳಸಿದ್ಧೇಶ್ವರ ಸ್ವಾಮಿಮಠಾಧ್ಯಕ್ಷ ಶ್ರೀನಂದೀಶ್ವರ ಶಿವಾಚಾರ್ಯರು ಮತ್ತು ಹಾರನಹಳ್ಳಿ ರಾಮಲಿಂಗೇಶ್ವರ ಮಠಾಧ್ಯಕ್ಷ ಶ್ರೀಶಿವಾಯೋಗಿ ಶಿವಾಚಾರ್ಯರು ಮಾತನಾಡಿ ಧರ್ಮಪಾಲನೆಯಲ್ಲಿ ನಿಜವಾದ ಸತ್ವ ಮತ್ತು ಶಕ್ತಿ ಇದೆ. ಶಾಂತಿ-ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ನಿಜಧರ್ಮ ಪಾಲನೆ ಅಗತ್ಯ. ಜಂಗಮರು ಕ್ರಿಯಾಶೀಲವಾಗಿ ಸಮಾಜದಲ್ಲಿ ಧರ್ಮಾಚರಣೆಗೆ ಕಟ್ಟಿಬದ್ಧರಾಗಬೇಕು ಎಂದರು.

ಕರ್ನಾಟಕರಾಜ್ಯ ವೀರಶೈವ ಪುರೋಹಿತಸಂಘದ ಪ್ರಧಾನಕಾರ್ಯಧರ್ಶಿ ದೊಡ್ಡಗದ್ದವಳ್ಳಿಯ ವೇ.ಮೂ.ದೇವರಾಜಶಾಸ್ತ್ರಿ ಪ್ರಾಸ್ತಾವಿಸಿ ಗುರು-ಲಿಂಗ-ಜoಗಮ ವೀರಶೈವ ಧರ್ಮದ ಗೌರವಾನ್ವಿತ ಅಂಶಗಳು ಇದರ ಪ್ರಾಮುಖ್ಯತೆ ಅರಿತು ನಡೆದರೆ ಧರ್ಮಾಚರಣೆಗೆ ಶಕ್ತಿ ಬರುತ್ತದೆ. ಕಾರ್ಜುವಳ್ಳಿ ಪೂಜ್ಯರು ಸಿದ್ಧಾಂತ ಶಿಖಾಮಣಿ ಧರ್ಮಗ್ರಂಥದ ಸಾರಸತ್ವವನ್ನು ಮನೆ-ಮನಗಳಿಗೆ ತಲುಪಿಸುವಲ್ಲಿ ಪರಿಶ್ರಮಿಸುತ್ತಿದ್ದಾರೆ. ಜಂಗಮರಿಗೆ ತರಬೇತಿ, ಪ್ರೇರಣೆ, ಗೌರವ ತಂದುಕೊಡುವ ನಿಟ್ಟಿನಲ್ಲಿ ಜಂಗಮ ಗಣಾರಾಧನೆ ಮಹತ್ವಪೂರ್ಣ ಎಂದರು.

ಜನಪದ ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಮುಗಳಿಕಟ್ಟೆ ಲಕ್ಷ್ಮಿ ದೇವಮ್ಮ ಮಾತನಾಡಿ ಜನಪದ ಸಂಸ್ಕೃತಿಯಲ್ಲಿ ಸಹಜವಾಗಿಯೆ ಧರ್ಮದ ಆಚರಣೆ ಇದೆ. ಇತ್ತೀಚಿನ ದಿನಗಳಲ್ಲಿ ವಿದೇಶಿ ವ್ಯಾಮೋಹಕ್ಕೆ ತುತ್ತಾಗಿ ನಮ್ಮತನವನ್ನು ಮರೆಯುತ್ತಿದ್ದೇವೆ. ತಾವು ವಿದೇಶ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಅಲ್ಲಿಯ ಜನ ನಮ್ಮ ಜಾನಪದ ಕಲೆಯ ಬಗ್ಗೆ ವಿಶೇಷ ಆಸಕ್ತಿ ತೋರಿದ್ದು ಈ ಮಣ್ಣಿನ ಸಂಸ್ಕೃತಿಯ ಗಟ್ಟಿತನವನ್ನು ತೋರುತ್ತದೆ. ಮಠಮಂದಿರಗಳು ಜನಪದವನ್ನು ಪ್ರೋತ್ಸಾಹಿಸುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದರು.

ಬುಕ್ಕಾoಬುದಿ ಕ್ಷೇತ್ರದಲ್ಲಿ ದಾಸೋಹ ಮಂದಿರ ನಿರ್ಮಿಸುವಲ್ಲಿ ಹೆಚ್ಚಿನ ಪರಿಶ್ರಮವಹಿಸಿದ ಶಾಂಭವಿ ಮಹಿಳಾ ಮಂಡಳಿಯ ಪ್ರಮುಖರಾದ ಬಿ.ಎಸ್.ಭಾಗ್ಯ, ಬಿ.ವಿ.ಪ್ರತಿಭಾ, ಎಂ.ಎಸ್.ಶಾoತ, ಆಶಾ ಮತ್ತು ಅರ್ಚಕ ಸಚ್ಚಿನ್‌ರನ್ನು ಗೌರವಿಸಲಾಯಿತು.

ಶ್ರೀಮದ್ ಉಜ್ಜಯಿನಿ ಜಗದ್ಗುರು ಸಿದ್ದಲಿಂಗಶಿವಾಚಾರ್ಯ ಟ್ರಸ್ಟ್ ಕಾರ್ಯದರ್ಶಿ ಸುರೇಶ್, ಸದಸ್ಯ ಮಹಾದೇವಪ್ಪ, ಗ್ರಾಮದ ಮುಖಂಡ ಗುರುಮೂರ್ತಿ ಮತ್ತಿತರರಿಗೆ ಗುರುರಕ್ಷೆ ನೀಡಿ ಕಾರ್ಜುವಳ್ಳಿ ಶ್ರೀಗಳು ಆಶೀರ್ವದಿಸಿದರು.

ಕಾರ್ಜುವಳ್ಳಿ ಮಠದ ಆಡಳಿತಾಧಿಕಾರಿ ಶಿವಮೂರ್ತಿ ಸಿದ್ಧಾಪುರ ಸ್ವಾಗತಿಸಿ, ಯಶವಂತ ವಂದಿಸಿದರು. ಹಾಸನದ ಎಂ.ಆರ್.ಶ್ರೀಧರ್ ಪ್ರಾರ್ಥಿಸಿದ್ದು, ವೇ.ಮೂ.ಧನುಷ್ ಮತ್ತು ವೇ.ಮೂ.ದರ್ಶನ್ ವೇದಘೋಷ ಮಾಡಿದರು.ಮಂಡೂರು ಪೂರ್ಣಿಮಾ ಉಮೇಶ್ ನಿರೂಪಿಸಿದರು.

ಬೆಳಗ್ಗೆ ಶ್ರೀಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಂದ ಲೋಕ ಕಲ್ಯಾಣಾರ್ಥ ಇಷ್ಟಲಿಂಗಮಹಾಪೂಜೆ ನೆರವೇರಿತು. ಶ್ರೀಸಿದ್ಧಲಿಂಗಜಗದ್ಗುರುಗಳ ಮಂಗಲಮೂರ್ತಿಗೆ ಮಹಾರುದ್ರಾಭಿಷೇಕ ನಡೆಯಿತು. ಸಂಜೆ ಸದಾಶಿವಶಿವಾಚಾರ್ಯ ಸ್ವಾಮೀಜಿ ಮುಡಿಸಮರ್ಪಣೆ ಮಾಡಿ ಕ್ಷೇತ್ರದ ದೈವಗಳಿಗೆ ವಿಶೇಷ ಪೂಜೆ ನೆರವೇರಿಸಿದರು.

Leave a Reply

Your email address will not be published. Required fields are marked *

× How can I help you?