
ಚಿಕ್ಕಮಗಳೂರು-ದೇಶದಲ್ಲಿ ಸoಸ್ಕೃತಿಯ ಹೆಸರಿನಲ್ಲಿ ವಿಕೃತಿ ವಿಜೃಂಭಿಸಬಾರದು.ಸೈನ್ಯದೊಳಗೆಲ್ಲ ಸಂಸ್ಕೃತಿ ನಾಶಕರೆ ಸೇರಿದರೆ,ಪೊಲೀಸ್ ವ್ಯವಸ್ಥೆಯಲ್ಲಿ ಅನ್ಯಾಯ ಮಾಡುವವರೆ ಸೇರಿದರೆ,ಮತಾಂಧರುಗಳೆ ತೀರ್ಪು ಕೊಡುವ ಸ್ಥಾನಗಳಲ್ಲಿ ನಿಂತರೆ,ಭಾರತದ ತಾಲಿಬಾನೀಕರಣ ತಡವಾಗದು ಎಂದು ಶಾಸಕ ಸಿ.ಟಿ ರವಿ ಆತಂಕ ಹೊರಹಾಕಿದರು.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ, ಜಂಗಮಬಳಗ ಮತ್ತು ಶ್ರೀಪಾರ್ವತಿ ಮಹಿಳಾ ಮಂಡಳಿ ಚಿಕ್ಕೊಳಲೆ ಸದಾಶಿವಶಾಸ್ತ್ರೀ ಸಭಾಂಗಣದಲ್ಲಿ ಶ್ರೀಸುವರ್ಣಾದೇವಿ ಸಂಸ್ಮರಣಾ ಹಿನ್ನಲೆಯಲ್ಲಿ ಸಂಸ್ಕೃತಿ ರಕ್ಷಣೆಯಲ್ಲಿ ತೊಡಗಿರುವ ಸಾಧಕ ಮಹಿಳೆಯರಿಗೆ ಕೊಡಮಾಡುವ ‘ಮಹಿಳಾರತ್ನ’ ಪ್ರಶಸ್ತಿಯನ್ನು ಶ್ರೀದೇವಿ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಜಿ.ಸುಧಾಚಂದ್ರಮೌಳಿ ಮತ್ತು ಅಕ್ಕನಬಳಗದ ಕಾರ್ಯದರ್ಶಿ ಆಶಾ ಹೇಮಂತ ಕುಮಾರ್ ಅವರಿಗೆ ಪ್ರದಾನಿಸಿ ನಿನ್ನೆ ಅವರು ಮಾತನಾಡಿದರು.
ಒಳಿತನ್ನು ಎಲ್ಲೆಡೆಯಿಂದ ಸ್ವೀಕರಿಸುವ ಉದಾತ್ತ ಸಮಾಜ ನಮ್ಮದು.ಅಂಧ ಅನುಕರಣೆ, ಬೇಡದ ಆಚರಣೆ ಇಂದು ನಮ್ಮನ್ನು ಹೆಚ್ಚಾಗಿ ಆಕರ್ಷಿಸುತ್ತಿರುವುದು ಆತಂಕದಾಯಕ.ವ್ಯಕ್ತಿಗತ ಲಾಭ-ನಷ್ಟವೇ ಹೆಚ್ಚಾಗಿ ಸಮಾಜಹಿತ ಗಮನಿಸದಿರುವ ಸಂಗತಿ ಸುತ್ತಲೂ ಕಾಣುತ್ತಿದ್ದೇವೆ. ಶುಭಾಶಯಗಳನ್ನು ಕೋರುವುದು ತಪ್ಪಲ್ಲ. ಆದರೆ ದೀಪ ಆರಿಸುವುದು ಅಮಂಗಳಕರ. ತಂದೆ-ತಾಯಿಯರಿಗೆ, ಗುರು-ಹಿರಿಯರಿಗೆ ನಮಸ್ಕರಿಸುವುದು ನಮ್ಮ ಸಂಪ್ರದಾಯ. ಇದರಲ್ಲಿ ನಮ್ಮ ಅಹಂಕಾರ ಕಳೆದುಕೊಳ್ಳುವುದರ ಜೊತೆಗೆ ಆಶೀರ್ವಾದ ಪಡೆದಂತಾಗುತ್ತದೆ. ಎಳ್ಳುಬೆಲ್ಲ ಬೀರಿ ಒಳ್ಳೆಯ ಮಾತನಾಡಿ ಎನ್ನುತ್ತೇವೆ. ಬೇವುಬೆಲ್ಲ ಹಂಚಿ ಕಷ್ಟಸುಖ ಸಮಾನವಾಗಿ ಸ್ವೀಕರಿಸಬೇಕೆಂಬ ಸಂದೇಶ ನಮ್ಮ ಪದ್ಧತಿ. ಡಿಸೆಂಬರ್ 31ರ ಪರಿಪಾಠ ಮಾಧ್ಯಮಗಳಲ್ಲಿ ನೋಡಿದ್ದೇವೆ. ಕುಡಿದು ಕುಣಿದು ತೂರಾಡಿ ಮನೆಗೆ ಹೋಗಲು ಆಗದಸ್ಥಿತಿ ಇತ್ತು. ಒಂದೇ ದಿನ 480ಕೋಟಿ ರೂ. ಮದ್ಯದ ವಹಿವಾಟು ನಡೆದಿದೆ ಎಂಬ ಪತ್ರಿಕೆಯೊಂದು ವರದಿ ಉಲ್ಲೇಖಿಸಿದ ಸಿ.ಟಿ.ರವಿ, ಇದಕ್ಕೆ ಪರ್ಯಾಯವನ್ನು ಗಟ್ಟಿಗೊಳಿಸುವ ಮೂಲಕ ಒಳ್ಳೆಯ ಸಂಗತಿಗಳನ್ನು ವ್ಯಾಪಕಗೊಳಿಸಬೇಕು ಎಂದರು.
ಕೊಡಗಿನಲ್ಲಿ ಹಿಂದೆಲ್ಲ ಮನೆಗೊಬ್ಬಿಬ್ಬರು ಸೈನ್ಯದಲ್ಲಿರುತ್ತಿದ್ದರು. ಆದರೆ ಈಗ ಆ ಸ್ಥಿತಿ ಇಲ್ಲ.ಈಗೆಲ್ಲಾ ಕುಟುಂಬದಲ್ಲಿ ಇರುವವರೆ ಒಬ್ಬಿಬ್ಬರು ಮಕ್ಕಳು. ಮಕ್ಕಳು ಹುಟ್ಟುವ ಮೊದಲೇ ಏನಾಗಬೇಕೆಂಬ ವಿನ್ಯಾಸ ನಾವೇ ಸಿದ್ಧಪಡಿ ಸಿರುತ್ತೇವೆ.ಎಲ್ಲರೂ ಇಂಜಿನಿಯರ್, ವೈದೈರುಗಳೇ ಆದರೆ ಸೈನಿಕ, ರೈತರ ಅವಶ್ಯಕತೆ ಸಮಾಜಕ್ಕಿಲ್ಲವೆ ಎಂಬುದನ್ನು ಆಲೋಚಿಸಬೇಕು. ಸಮಾಜದಲ್ಲಿ ನಾವೆಲ್ಲ ಘಟಕಗಳು. ಮನೆ ಪ್ರತ್ಯೇಕವಾಗಿ ಉಳಿಯುವುದಿಲ್ಲ.ಮೈಮರೆತು ಕುಳಿತರೆ ಸಂಕಷ್ಟ ತಪ್ಪಿದ್ದಲ್ಲ ಎಂದು ಹೇಳಿದರು.
ವ್ಯಕ್ತಿಗತ ಲಾಭನಷ್ಟದ ಲೆಕ್ಕಚಾರದಲ್ಲಿ ಸಮಾಜಜೀವನ ದುರ್ಬಲಗೊಳ್ಳುತ್ತಿದೆ. ಸಂಸ್ಕೃತಿಯ ಬೇರುಗಳನ್ನು ಗಟ್ಟಿಗೊಳಿಸುವ ಕಾರ್ಯ ವ್ಯಾಪಕಗೊಳ್ಳಬೇಕು.ಸಮಾಜದಲ್ಲಿ ಸಕಾರಾತ್ಮಕವಾದ ಪರಿವರ್ತನೆ ತರುವ ಕೆಲಸ ವೈಯಕ್ತಿಕ ನೆಲೆಯಲ್ಲಿ ಸಣ್ಣ ಪ್ರಮಾಣದಲ್ಲಾದರೂ ಆಗಬೇಕು. ಸತ್ಯ ಮತ್ತು ಸೇವೆಯ ತಳಹದಿಯ ಜೀವನಪದ್ಧತಿ ನಮ್ಮದು. ಧರ್ಮಿಷ್ಠರಾದವರು ಜಗತ್ತಿಗೆ ಒಳಿತನ್ನೆ ಮಾಡುತ್ತಾರೆ. ಪಾಶ್ಚಾತ್ಯರು ಮಾತ್ರ ಮತಾಂಧರಾಗಲು ಸಾಧ್ಯ. ಒಳಿತನ್ನು ಗುರುತಿಸುವ ಪ್ರೇರೇಪಿಸುವ ಕಾರ್ಯ ಮಹಾತಾಯಿಯ ಹೆಸರಿನಲ್ಲಿ ನಿರಂತರವಾಗಿ ನಡೆಯುತ್ತಿರುವುದು ಮಾದರಿ ಎಂದರು.
ಅಭಿನoದಿಸಿ ಮಾತನಾಡಿದ ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರೀ ಗಮಕಿ-ಸಾಧ್ವಿ ಶ್ರೀಮತಿ ಸುವರ್ಣಾದೇವಿ ಸದಾಶಿವಶಾಸ್ತ್ರೀ ಅವರ ಹೆಸರಿನಲ್ಲಿ ಎಲೆಮರೆಕಾಯಿಯಂತೆ ಸಮಾಜಮುಖಿ ಕೆಲಸ ಮಾಡುವ ಮಹಿಳೆಯರನ್ನು ಕಳೆದ 10ವರ್ಷಗಳಿಂದ ಮಹಿಳಾರತ್ನ ಪುರಸ್ಕಾರದೊಂದಿಗೆ ಗುರುತಿಸಿ ಗೌರವಿಸಲಾಗುತ್ತಿದೆ. ಆಲ್ದೂರು, ಮುಗುಳುವಳ್ಳಿ, ಮಲ್ಲೇನಹಳ್ಳಿಗಳಲ್ಲಿ ಸ್ಥಳೀಯ ಮಹಿಳೆಯರನ್ನು ಒಗ್ಗೂಡಿಸಿ ಶ್ರೀರುದ್ರ, ವೇದ, ಮಂತ್ರ ಭಜನೆ ಭಕ್ತಿಗೀತೆ ಕಲಿಸುವ ಮೂಲಕ ಸುಧಾಮೌಳಿ ಸಂಸ್ಕೃತಿ ಪ್ರಸಾರ ಮಾಡುತ್ತಿದ್ದಾರೆ. ಮಹಿಳಾಬ್ಯಾಂಕ್ ಮತ್ತು ಟೌನ್ ಮಹಿಳಾಸಮಾಜದ ಕಾರ್ಯಕಾರಿ ಸದಸ್ಯರಾಗಿ ಚುನಾಯಿತರಾಗಿರುವ ಆಶಾ, ಪ್ರಭುಲಿಂಗಸ್ವಾಮಿ ಪ್ರೌಢಶಾಲಾ ಸಮಿತಿ, ಮಹಿಳಾಜಾಗೃತಿ ಸಂಘ, ಶ್ರೀಪಾರ್ವತಿ ಮಹಿಳಾಮಂಡಳಿ, ಅಕ್ಕಮಹಾದೇವಿ ಸಮಾಜದ ಮೂಲಕ ಸ್ತ್ರೀ ಸಬಲೀಕರಣದಲ್ಲಿ ಗಣನೀಯ ಸೇವೆ ಪರಿಗಣಿಸಿ ಪುರಸ್ಕಾರ ನೀಡಲಾಗುತ್ತಿದೆ ಎಂದರು.

ಕಾರ್ಜುವಳ್ಳಿ ಹಿರೇಮಠದ ಶ್ರೀಶ್ರೀಷ.ಬ್ರ.ಸದಾಶಿವ ಶಿವಾಚಾರ್ಯಸ್ವಾಮೀಜಿ ಸಾನಿಧ್ಯವಹಿಸಿ ಆಶೀರ್ವದಿಸಿದರು.
ಶ್ರೀದೇವಿ ಗುರುಕುಲದ ಸಂಸ್ಥಾಪಕ ವೇ.ಬ್ರ.ಡಾ.ದಯಾನoದಮೂರ್ತಿಶಾಸ್ತ್ರೀ ಪ್ರಶಸ್ತಿಪತ್ರ ವಾಚಿಸಿದರು.ಹಾಸನದ ಮಂಜುನಾಥ, ಆಲೂರಿನ ಯಶವಂತ, ಶ್ರೀಪಾರ್ವತಿ ಮಹಿಳಾಮಂಡಳಿ ಅಧ್ಯಕ್ಷೆ ಸುಮಿತ್ರಾಶಾಸ್ತ್ರೀ, ಕಾರ್ಯದರ್ಶಿ ಭವಾನಿ ವಿಜಯಾನಂದ, ವೀರಶೈವ ಲಿಂಗಾಯತ ಜಾಗೃತ ವೇದಿಕೆ ತಾಲ್ಲೂಕು ಮಹಿಳಾ ಘಟಕ ಅಧ್ಯಕ್ಷೆ ಗೀತಾಬಾಲಿ, ಜಂಗಮಬಳಗದ ಓoಕಾರಯ್ಯ, ಮಹಾಲಿಂಗಯ್ಯ, ವಿಶ್ರಾಂತ ಪ್ರಾಂಶುಪಾಲರಾದ ಷಡಕ್ಷರಸ್ವಾಮಿ ಮತ್ತು ದೇವಿಕಾ ಮತ್ತಿತರರು ಪಾಲ್ಗೊಂಡಿದ್ದರು.