ಚಿಕ್ಕಮಗಳೂರು-ರಾಷ್ಟ್ರೀಕೃತ ಬ್ಯಾಂಕುಗಳು ಕಾಫಿ ಬೆಳೆಗಾರರ ಭೂಮಿಯನ್ನು ಆನ್ ಲೈನ್ ಮೂಲಕ ಹರಾಜು ಪ್ರಕ್ರಿಯೆಗೆ ನಿಗಧಿಪಡಿಸಿರುವ ದಿನಾಂಕವನ್ನು ಕೂಡಲೆ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿವರೆಗೆ ಮುಂದೂಡಬೇಕೆಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಸೂಚಿಸಿದರು.
ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಿನ್ನೆ ಕಾಫಿ ಬೆಳೆಗಾರರ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳೊಂದಿನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದ ಚಿಕ್ಕಮಗಳೂರು, ಹಾಸನ, ಸಕಲೇಶಪುರ, ಮಡಿಕೇರಿ, ಕೊಡಗು ಮುಂತಾದ ಪ್ರದೇಶಗಳಲ್ಲಿ ಕಾಫಿ ಬೆಳೆಯುವ ರೈತರು, ಬೆಳೆಗಾರರಿಗೆ ಬ್ಯಾಂಕುಗಳು ಕೆಸಿಸಿ ಲೋನ್ ಮೂಲಕ ಕೃಷಿ ಸಾಲವನ್ನು, ಕೃಷಿ ಸಾಲದ ನೀತಿ ನಿಯಮದ ಆಧಾರದ ಮೇಲೆ ಬೆಳೆ ಸಾಲ ಮತ್ತು ಇತರೆ ಸಾಲವನ್ನು ನೀಡಿದ್ದು, ಅನಾದಿಕಾಲದಿಂದಲೂ ಬೆಳೆಗಾರರು ಬ್ಯಾಂಕಿನಲ್ಲಿ ಹೊಂದಾಣಿಕೆಯ ವ್ಯವಹಾರ ಮಾಡಿಕೊಂಡು ಬಂದಿದ್ದಾರೆ. ಇದೀಗ ಸರ್ಫೆಸಿ ಕಾಯಿದೆಯ ಮೂಲಕ ರಾಜ್ಯದ ರೈತರು ಮತ್ತು ಕಾಫಿ ಬೆಳೆಗಾರರಿಗೆ ನೋಟಿಸ್ ನೀಡಿ ಮನೆ ಮತ್ತು ಆಸ್ತಿಯನ್ನು ಆನ್ ಲೈನ್ ವ್ಯವಸ್ಥೆಯಲ್ಲಿ ಹರಾಜು ಮಾಡಲು ನಿರ್ಧರಿಸುವುದು ಖಂಡನೀಯ ಎಂದರು.
ಹಲವಾರು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿ, ಜಾಗತೀಕ ತಾಪಮಾನ, ಹವಾಮಾನ ವೈಪರೀತ್ಯದಿಂದಾಗಿ ಹಾಗೂ ಸತತವಾಗಿ ಸುರಿಯುವ ಭಾರಿ ಮಳೆಯಿಂದ ಶೀತದ ವಾತಾವರಣ ಹೆಚ್ಚಾಗಿ ಕಾಫಿ ಮತ್ತು ಇತರೆ ಬೆಳೆಗಳ ಇಳುವರಿ ಗಣನೀಯವಾಗಿ ಇಳಿಮುಖಯಾಗುತ್ತಿದೆ ಹಾಗೂ ಇತರೆ ಕಾರಣಗಳಿಂದ ಬೆಳೆಗಾರರು ತುಂಬಲಾರದ ನಷ್ಟ ಅನುಭವಿಸುತ್ತಿದ್ದಾರೆ.
ಸರ್ಫೆಸಿ ಕಾಯ್ದೆಯಿಂದಾಗಿ ಬೆಳೆಗಾರರಿಗೆ ಸಮಸ್ಯೆಗಳು ಉಂಟಾಗುತ್ತಿದ್ದು, ಈ ವಿಚಾರವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಚರ್ಚಿಸಿ ತೀರ್ಮಾನಿಸಲಾಗುತ್ತದೆ. ಕಾಫಿ ಬೆಳೆಗಾರರ ನಷ್ಟದ ಪರಿಸ್ಥಿತಿಯಲ್ಲಿ ಸಾಲ ನೀಡಿದ ರಾಷ್ಟ್ರೀಕೃತ ಬ್ಯಾಂಕುಗಳು ರೈತರ, ಬೆಳೆಗಾರರ ಭೂಮಿ ಹರಾಜು ಪ್ರಕ್ರಿಯೆ ಕೈಗೊಂಡರೆ ಅವರ ಜೀವನಾಧಾರಕ್ಕೆ ಸಮಸ್ಯೆ ಉಂಟಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕುಗಳು ಸದ್ಯ ನಿಗಿಧಿಪಡಿಸಿರುವ ಆನ್‌ಲೈನ್ ಹರಾಜು ಪ್ರಕ್ರಿಯೆಯನ್ನು ಮಾನವೀಯ ದೃಷ್ಠಿಯಿಂದ ಸ್ಥಗಿತಗೊಳಿಸಿ ಮುಂದಿನ 6 ತಿಂಗಳು ಅನಿರ್ಧಿಷ್ಟವಧಿಯವರೆಗೆ ಮುಂದೂಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಡಿ. ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ, ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಎಸ್. ಕೀರ್ತನಾ, ಲೀಡ್ ಬ್ಯಾಂಕ್ ಮ್ಯಾನೇಜರ್ ಸುರೇಶ್ ಮತ್ತು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಹಾಗೂ ಸೇರಿದಂತೆ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳು ಉಪಸ್ಥಿತರಿದ್ದರು.