ಮೂಡಿಗೆರೆ:ಮಲೆನಾಡಿನ ತೋಟಗಳಲ್ಲಿ ರೈತರು ಬೆಳೆದ ಕಾಫಿ,ಕಾಳುಮೆಣಸು, ಅಡಕೆ, ತೆಂಗು ಮತ್ತಿತರ ಫಸಲುಗಳನ್ನು ಜಮೀನು ಒತ್ತುವರಿ ನೆಪದಲ್ಲಿ ಖುಲ್ಲಾಗೊಳಿಸಲು ಮುಂದಾಗಿ ರೈತರ ಬೆಳೆಯನ್ನು ನಾಶಪಡಿಸುವುದೇ ಕಾಂಗ್ರೆಸ್ ಸರ್ಕಾರದ ಸಾಧನೆ ಯಾಗಿದೆ. ಜಿಲ್ಲೆಯಲ್ಲಿ ಐವರು ಕಾಂಗ್ರೆಸ್ ಶಾಸಕರಿದ್ದರೂ ರೈತರ ಪರ ನಿಲ್ಲುವ ಕಾಳಜಿ ತೋರುತ್ತಿಲ್ಲ ಎಂದು ಬಿಜೆಪಿ ಮಂಡಲ ವಕ್ತಾರ ವಿನಯ್ ಹಳೇ ಕೋಟೆ ದೂರಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು,ರೈತರು ಕೃಷಿ ಮಾಡಿಕೊಂಡಿರುವ ಒಂದೆರಡು ಎಕರೆ ಭೂಮಿಯನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಅರಣ್ಯ ಮತ್ತು ಕಂದಾಯ ಇಲಾಖೆ ಜಾಗವೆಂದು ಹೇಳಿ ಖುಲ್ಲಾಗೊಳಿಸಲು ಮುಂದಾಗುತ್ತಾರೆ.ಸರ್ಕಾರದ ಈ ರೈತ ವಿರೋಧಿ ದಂಧೆಯನ್ನು ಪ್ರಶ್ನಿಸಿದರೆ ಅರಣ್ಯ ರಕ್ಷಣೆ, ಕೋರ್ಟ್ ಆದೇಶ ಎನ್ನುತ್ತಾ ನುಣುಚಿಕೊಳ್ಳುತ್ತಾರೆ.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜ್ಯದ ಯಾವುದೇ ಭಾಗದ ರೈತರಿಗೂ ತೊಂದರೆ ಕೊಟ್ಟಿಲ್ಲ.ಬದಲು ರೈತರ ಹಿತ ಕಾಪಾಡಲಾಗುತ್ತಿತ್ತು.ಕಾಂಗ್ರೆಸ್ ಅಧಿಕಾರಕ್ಕೇರಿದಾಗ ರೈತರ ಮೇಲೆ ಸವಾರಿ ಮಾಡಲಾಗುತ್ತದೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ರೈತರ ಹಿತವನ್ನು ಕಡೆಗೆಣಿಸುತ್ತಾರೆ.ರೈತರು ಬೆಳೆ ಬೆಳೆಯುವವರೆಗೂ ಸುಮ್ಮನಾಗುವ ಅಧಿಕಾರಿಗಳು ಬೆಳೆ ಕೊಯ್ಲಿಗೆ ಬಂದಾಗ ಅರಣ್ಯ ಅಧವಾ ಕಂದಾಯ ಭೂಮಿ ಎಂದು ಹೇಳುತ್ತಾ ರೈತರಿಗೆ ಇನ್ನಿಲ್ಲದ ಭಯ ಮೂಡಿಸುತ್ತಾರೆ.ಸರ್ಕಾರ ಇಂತಹ ವರ್ತನೆ ನಿಲ್ಲಿಸದಿದ್ದರೆ ರೈತರು ದಂಗೆಯೇಳಲಿದ್ದಾರೆ ಎಂದು ಎಚ್ಚರಿಸಿದರು.
—————————–-ವಿಜಯಕುಮಾರ್, ಮೂಡಿಗೆರೆ