ಚಿಕ್ಕಮಗಳೂರು-ಬಾಬಾಬುಡನ್ ಗಿರಿ ವ್ಯಾಪ್ತಿಯ ಕಾಫಿಬೆಳೆಗಾರರ ಸಮಸ್ಯೆ ನಿವಾರಣೆಗೆ ಡಿ.ಕೆ ಶಿವಕುಮಾರ್ ರವರಿಗೆ ಮನವಿ

ಚಿಕ್ಕಮಗಳೂರು-ಜಿಲ್ಲೆಯ ಅತೀ ಎತ್ತರದ ಸ್ಥಳವಾಗಿರುವ ಐ.ಡಿ ಪೀಠ ಬಾಬಾಬುಡನ್ ಗಿರಿ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಕಾಫಿ ತೋಟ ಮತ್ತು ಕೃಷಿ ಭೂಮಿಗಳನ್ನು ಹೊಂದಿದ್ದು, ಆದರೆ ಈ ಭೂಮಿಗಳನ್ನು ಕೊಳ್ಳುವವರು ಬಂದರೂ ಕೂಡ ಮಾರಾಟ ಮಾಡಲು ಮತ್ತು ಬ್ಯಾಂಕ್, ಸೊಸೈಟಿ ಸಾಲ ಪಡೆಯಲು ಸಾಧ್ಯವಾಗದಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಟಿಸಿಎಲ್ ಹೊರಗುತ್ತಿಗೆ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಉಪ್ಪಳ್ಳಿ ಕೆ.ಭರತ್ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.

ಅವರು ಇತ್ತೀಚೆಗೆ ಶೃಂಗೇರಿಗೆ ಡಿ.ಕೆ.ಶಿವಕುಮಾರ್ ಆಗಮಿಸಿದ್ದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿ, ಕಳೆದ 13-14 ವರ್ಷಗಳಿಂದ ಇಲ್ಲಿನ ಕಾಫಿ ತೋಟದ ಮಾಲೀಕರು ಮತ್ತು ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರ ಗೋಳನ್ನು ಕೇಳುವವರು ಇಲ್ಲದಂತಾಗಿದೆ. ಕಳೆದ 2009 ರಲ್ಲಿ ಅಂದಿನ ಸ್ಥಳೀಯ ಶಾಸಕ ಸಿ.ಟಿ.ರವಿಯವರು ಈ ವ್ಯಾಪ್ತಿಯಲ್ಲಿ ಜಮೀನು ಮತ್ತು ಕಾಫಿ ತೋಟಗಳೆಲ್ಲ ಇನಾಂ ಭೂಮಿಯೆಂದು ಅಂದಿನ ಅವರ ಸರ್ಕಾರದಲ್ಲಿ ಯಾವುದೇ ರೀತಿಯಾದ ವ್ಯಾಪಾರ ವಹಿವಾಟು ಮಾಡಿದರೂ ಕೂಡ ನೋಂದಾವಣೆ ಆಗದಂತೆ ತಡೆ ಹಿಡಿದಿರುತ್ತಾರೆ.

ಬಿಜೆಪಿ ಸರ್ಕಾರ ರಾಜ್ಯದಲ್ಲಿ ಎರಡು ಬಾರಿ ಅಧಿಕಾರಕ್ಕೆ ಬಂದಿದ್ದರೂ ಕೂಡ ಈ ವ್ಯಾಪ್ತಿಯಲ್ಲಿ ಇನಾಂ ಭೂಮಿ ಇದಿಯೇ, ಇನಾಂ ಕೊಟ್ಟವರು ಯಾರು ಅಥವಾ ಇನಾಂ ಭೂಮಿಯನ್ನು ಪತ್ತೆ ಹಚ್ಚಲು ಯಾವುದಾದರು ಸಮಿತಿಯನ್ನು ರಚಿಸಿದ್ದಾರೆಯೇ ಇದಾವುದನ್ನು ಇಲ್ಲಿಯವರೆಗೆ ಮಾಡಿರುವುದಿಲ್ಲ.

ಭೂಮಿಯನ್ನು ಸಾವಿರಾರು ಜನಗಳು ತಮ್ಮ ಮಕ್ಕಳ ವಿದ್ಯಾಭ್ಯಾಸ, ಮದುವೆ ಅಥವಾ ಮನೆ ಕಟ್ಟುವುದು ಇನ್ಯಾವುದೇ ರೀತಿಯಾದ ವ್ಯವಹಾರ ವಹಿವಾಟುಗಳನ್ನು ನಡೆಸಲು ಆಗದೇ ತಮ್ಮ ತೊಳಲನ್ನು ಯಾರಲ್ಲಿ ತೋಡಿಕೊಳ್ಳುವುದು ಎಂಬುದು ತಿಳಿಯದೆ ದಿಕ್ಕು ತೋಚದಂತೆ ತ್ರಿಶಂಕು ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಆದ ಕಾರಣ ಈ ಕೂಡಲೇ ಐ.ಡಿ.ಪೀಠ ವ್ಯಾಪ್ತಿಗೆ ಇರುವ ಅಡಚಣೆಗಳನ್ನು ನ್ಯಾಯಾಲಯದಲ್ಲಿ ಇದ್ದರೂ ಕೂಡ ಅದನ್ನು ಸರ್ಕಾರ ಸೂಕ್ಷ್ಮತೆಯಿಂದ ಪರಿಗಣನೆಗೆ ತೆಗೆದುಕೊಂಡು ಬಗೆಹರಿಸಲು ಮುಂದಾಗಬೇಕೆoದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

× How can I help you?