ಚಿಕ್ಕಮಗಳೂರು-ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದ ಪರಿಶಿಷ್ಟ ಕುಟುಂಬಗಳಿಗೆ ಸೂರು ನಿರ್ಮಿಸಿಕೊಳ್ಳಲು ಸ್ಥಳ ಗುರುತಿಸಿ ಮಂಜೂರುಗೊಳಿಸಲು ಮುಂದಾಗಬೇಕು ಎಂದು ಆಗ್ರಹಿಸಿ ಮಂಗಳವಾರ ಬ್ಯಾಡರಹಳ್ಳಿ ಗ್ರಾಮಸ್ಥರು ಶಾಸಕ ಹೆಚ್.ಡಿ.ತಮ್ಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ದಸಂಸ ಮುಖಂಡ ಜಗದೀಶ್, ಬ್ಯಾಡರಹಳ್ಳಿ ಗ್ರಾಮದಲ್ಲಿ ಸುಮಾರು 80ಕ್ಕೂ ಹೆಚ್ಚು ದಲಿತ ಕುಟುಂಬಗಳು 150 ವರ್ಷಗಳಿಂದ ಕೂಲಿ ವೃತ್ತಿ ಮಾಡಿಕೊಂಡು ವಾಸಿಸುತ್ತಿದ್ದು ಜೀವನ ನಡೆಸಲು ಸಮರ್ಪಕವಾದ ನಿವೇಶನಗಳು ಇರುವುದಿಲ್ಲ ಎಂದು ಹೇಳಿದರು.
ಇದೀಗ ಕಡಿಮೆ ಜಾಗದಲ್ಲಿ ಮೂರ್ನಾಲ್ಕು ಕುಟುಂಬಗಳು ವಾಸಿಸುವಂಥ ದುಸ್ಥಿತಿ ನಿರ್ಮಾಣವಾಗದೆ. ಈ ಬಗ್ಗೆ ಪಿಳ್ಳೇನಹಳ್ಳಿ ಪಿಡಿಓ ಹಾಗೂ ಸಖರಾಯಪಟ್ಟಣ ರಾಜಸ್ವ ನಿರೀಕ್ಷಕರಿಗೆ ಕಳೆದ 10 ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ನಿವೇಶನ ಗುರುತಿಸಿ ಮಂಜೂರುಗೊಳಿಸಲು ಮನವಿ ಮಾಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಆಧುನಿಕ ಜಗತ್ತಿನಲ್ಲಿ ಬ್ಯಾಡರಹಳ್ಳಿ ದಲಿತ ಕುಟುಂಬಗಳು ಪ್ರಾಣಿಗಳಿಗಿಂತ ಕಠೋರವಾಗಿ ಜೀವನ ನಡೆಸುತ್ತಿವೆ. ಅಲ್ಲದೇ ಗ್ರಾಮದ ಕೇರಿಗಳಿಗೆ ಹೊರಗಿನವರು ಆಗಮಿಸಿದರೆ ಅತ್ಯಂತ ಕೀಳರಿಮೆ ದೃಷ್ಟಿಯಿಂದ ನೋಡಲಾಗುತ್ತಿದೆ. ಇದರಿಂದ ಅನೇಕ ಕುಟುಂಬಗಳು ಮಾನಸಿಕವಾಗಿ ಕುಗ್ಗುವಂತಾಗಿದೆ ಎಂದು ಹೇಳಿದರು.
ಭವಿಷ್ಯದ ಪೀಳಿಗೆಗೆ ಬ್ಯಾಡರಹಳ್ಳಿ ದಲಿತ ಕುಟುಂಬಗಳು ಜಾಗವನ್ನು ತ್ಯಜಿಸಿ ವಲಸೆ ಹೋಗುವ ಸಾಧ್ಯತೆಗಳಿರುವ ಕಾರಣ ಶಾಸಕರು, ಜಿಲ್ಲಾಡಳಿತ ಮುಖಾಂತರ ಪ್ರಯತ್ನಿಸಿ ನಿವೇಶನ ರಹಿತರಿಗೆ ಆಸರೆ ಒದಗಿಸಲು ಸಹಕರಿಸಬೇಕು ಎಂದು ಒತ್ತಾಯಿಸಿದರು.
ಕೆಲ ಮೂಲಗಳಿಂದ ಗ್ರಾಮಕ್ಕೆ ಹಲವು ಬಗೆಯ ಸರ್ಕಾರಿ ಜಮೀನುಗಳು ಸರ್ವೆ ನಂ.11ರಲ್ಲಿ ೧೮ ಗುಂಟೆ, 12ರಲ್ಲಿ 2.7 ಎಕರೆ,16 ರಲ್ಲಿ 13.15 ಎಕರೆ, 17ರಲ್ಲಿ5.19 ಎಕರೆ, 18ರಲ್ಲಿ 5.19 ಎಕರೆ, 19 ರಲ್ಲಿ 7.13 ಎಕರೆ, 20ರಲ್ಲಿ 10.23 ಎಕರೆ ಹಾಗೂ 22ರಲ್ಲಿ11.01 ಎಕರೆ ಸರ್ಕಾರಿ ಜಾಗವಿದೆ ಎಂದು ಹೇಳಿದರು.
ಹೀಗಾಗಿ 60ಎಕರೆಗೂ ಅಧಿಕ ಸರ್ಕಾರಿ ಭೂಮಿ ಗ್ರಾಮಕ್ಕೆ ಲಭ್ಯವಿದೆ. ಈ ಭೂಮಿಯನ್ನು ಅಕ್ರಮ ವಾಗಿ ಖಾತೆ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದಲ್ಲಿ ರದ್ದುಪಡಿಸಿ ಅತೀ ಅವಶ್ಯವಿರುವ ನಿವೇಶನ ರಹಿತ ದಲಿತ ಕುಟುಂಬಗಳಿಗೆ ವಾಸಿಸಲು ಜಾಗವನ್ನು ಗುರುತಿಸಿ ನಿವೇಶನ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಸೌಂದರ್ಯ ಜಗದೀಶ್, ದೌರ್ಜನ್ಯ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್ , ಬ್ಯಾಡರಹಳ್ಳಿ ಗ್ರಾಮಸ್ಥರಾದ ಅಶೋಕ್, ಕೆಂಚಯ್ಯ, ಈರ ಯ್ಯ, ನವೀನ್, ಬಸಮ್ಮ, ವನಜಾಕ್ಷಿ, ಕಾಂತಮಣಿ, ಪರಶುರಾಮ್, ಕಿರಣ್, ಆನಂದ್ ಕಲ್ಲೇಶ್ ಮತ್ತಿತರರಿದ್ದರು.
—————–ಸುರೇಶ್