ಚಿಕ್ಕಮಗಳೂರು-ದಿ,ಡಾ.ಮಧುಕರ್‌ ಶೆಟ್ಟಿ ಜನತೆಯ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ:ಎಸ್.ಪಿ ವಿಕ್ರಮ್ ಅಮಟೆ

ಚಿಕ್ಕಮಗಳೂರು-ಸಾಮಾಜಿಕ ಕಳಕಳಿ,ಅಸಹಾಯಕರಿಗೆ ಆಸರೆ,ಅನ್ಯಾಯವನ್ನು ಸಹಿಸದ ಹಾಗೂ ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಐಪಿಎಸ್ ಅಧಿಕಾರಿ ದಿ|| ಡಾ. ಮಧುಕರ್‌ಶೆಟ್ಟಿ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಮ್ ಅಮಟೆ ಹೇಳಿದರು.

ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಡಾ.ಮಧುಕರ್‌ಶೆಟ್ಟಿ ಯುವ ಬಳಗದಿಂದ ಏರ್ಪಡಿಸಿದ್ಧ ಡಾ. ಮಧುಕರ್‌ಶೆಟ್ಟಿಯ 6ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಶನಿವಾರ ಸಂಜೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಕರ್ತವ್ಯದ ವೇಳೆಯಲ್ಲಿ ಮಧುಕರ್‌ರವರ ದೈಹಿಕ ಮನೋಬಲಕ್ಕೆ ಸಾಟಿ ಇರಲಿಲ್ಲ. ಶಿಸ್ತು, ಸಂಯಮ ಹಾಗೂ ಸಮಯದ ಪಾಲನೆ ಅಧಿಕಾರಿಗಳನ್ನು ನಿಬ್ಬೆರಗಾಗಿಸಿತ್ತು. ತಾವು ಕೂಡಾ ಡಿವೈಎಸ್ಪಿಯಾಗಿ ಕೆಲಕಾಲ ಅವರೊಟ್ಟಿಗೆ ಕರ್ತವ್ಯದ ನೆನಪನ್ನು ಸ್ಮರಿಸಿದ ಅವರು ಕನ್ನಡ ನಾಡಿನಲ್ಲಿ ಮತ್ತೆ ಜನಿಸಿ ಪೊಲೀಸ್ ಇಲಾಖೆಯಲ್ಲೇ ಸೇವೆ ಸಲ್ಲಿಸುವಂತಾಗಲೀ ಎಂದು ಆಶಿಸಿದರು.

ದುರ್ಬಲರು ಅಥವಾ ಅಸಹಾಯಕರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರಿಂದ ಜನತೆಯ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಪೊಲೀಸ್ ಸಿಬ್ಬಂದಿಗಳು, ಜನಸಾಮಾನ್ಯರು ಕೂಡಾ ಅವರ ಶ್ಲಾಘನೀಯ ಕೆಲಸಕ್ಕೆ ಮಾರು ಹೋಗಿರುವ ಜೊತೆಗೆ ಅಭಿಮಾನಿ ಬಳಗವನ್ನು ಹುಟ್ಟುಹಾಕಿ ಸ್ಮರಿಸುವ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಕನ್ನಡಸೇನೆ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್ ಮಾತನಾಡಿ, ನೊಂದವರ ಪಾಲಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅಭಿಮುಖರಾದವರು ಮಧುಕರ್‌ಶೆಟ್ಟಿ. ಐಪಿಎಸ್ ಅಧಿಕಾರಿ ಎಂಬ ಗರ್ವ ಹೊಂದದೇ ಜನರಲ್ಲಿ ಸಾಮಾನ್ಯರಂತೆ ಬೆರೆಯುವ ಗುಣ ಹೊಂದಿದ್ದರು.ಅಲ್ಲದೇ ಆಟೋ ಚಾಲಕರಿಗೆ ಪರವಾನಗಿ ಸೇರಿದಂತೆ ಅನೇಕ ಸೇವೆಯನ್ನು ಸುಲಿಲತವಾಗಿ ಒದಗಿಸಿದ್ದರು ಎಂದು ಸ್ಮರಿಸಿದರು.

ಹಿಂದೆ ಜಿಲ್ಲಾಧಿಕಾರಿ ಹರ್ಷಗುಪ್ತ ಹಾಗೂ ಎಸ್ಪಿಯಾಗಿ ಮಧುಕರ್‌ಶೆಟ್ಟಿ ಕರ್ತವ್ಯ ನಿರ್ವಹಿಸುವ ವೇಳೆ ಮೂಡಿಗೆರೆ ಸಮೀಪ ಸಾರಗೋಡಿನಲ್ಲಿ ಬಲಾಡ್ಯರಿಂದ ಒತ್ತುವರಿ ಭೂಮಿ ತೆರವುಗೊಳಿಸಿ, ವಸತಿ ನಿವೇಶನ ರಹಿತರಿಗೆ ಆ ಸ್ಥಳದಲ್ಲಿ ಗುಪ್ತಶೆಟ್ಟಿಹಳ್ಳಿ ಎಂಬ ಹೊಸ ಗ್ರಾಮ ನಿರ್ಮಿಸಿ ಬಡವರ ಪಾಲಿನ ದಾರೀದೀಪರಾದ ಆದರ್ಶಪುರುಷ ಎಂದು ಬಣ್ಣಿಸಿದರು.

ಗುಪ್ತಹಳ್ಳಿ ಶೆಟ್ಟಿ ನಿವಾಸಿ ಬೈರಗದ್ದೆ ರಮೇಶ್ ಮಾತನಾಡಿ, ಐಪಿಎಸ್ ಎಂಬ ಶಕ್ತಿಯನ್ನು ಮೊದಲ ಬಾರಿಗೆ ತೋರಿದ ಅಧಿಕಾರಿ ಮಧುಕರ್‌ಶೆಟ್ಟಿರವರು. ಭೂಮಿ, ಬದುಕು ಕಳೆದುಕೊಂಡು ಸಾಯುವ ಸ್ಥಿತಿಯಲ್ಲಿದ್ಧ ಹಲವಾರು ಕುಟುಂಬಕ್ಕೆ ಖುದ್ದು ಭೇಟಿ ನೀಡಿ ಸಾಂತ್ವಾನ ಹೇಳುವ ಮೂಲಕ ಬದುಕು ರೂಪಿಸಿಕೊಟ್ಟವರನ್ನು ಇಂದಿಗೂ ಗ್ರಾಮದ ಪ್ರತಿ ಮನೆಗಳಲ್ಲಿ ಪೂಜಿಸಲಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಮಧುಕರ್‌ಶೆಟ್ಟಿ ಅಭಿಮಾನಿ ಬಳಗದ ಅಧ್ಯಕ್ಷ ಚೌಡಪ್ಪ, ಅತ್ಯಂತ ಕಡಿಮೆ ಅವಧಿಯಲ್ಲೇ ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸಿ ಜನಪರ ಕೆಲಸ ಕೈಗೊಂಡವರು ಮಧುಕರ್‌ಶೆಟ್ಟಿ ಎಂದ ಅವರು ದೌರ್ಜನ್ಯ ಕಂಡು ಬಂದಲ್ಲಿ ತ್ವರಿತಗತಿಯಲ್ಲಿ ತೆರಳಿ ಸ್ಪಂದಿಸುವ ಗುಣ ಹೊಂದಿದ್ದರು. ಇವರ ಬದುಕು ನಾಡಿನಾದ್ಯಂತ ತಿಳಿಸಲು ಪ್ರತಿವರ್ಷವು ಜನ್ಮದಿನ ಹಾಗೂ ಪುಣ್ಯಸರಣೆ ಆಚರಿಸಲಾಗುತ್ತಿದೆ ಎಂದರು.

ಮಧುಕರ್‌ಶೆಟ್ಟಿ ಜೀವನಚರಿತ್ರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ರೂಪಿಸಿದೆ.ಅಲ್ಲದೇ ಕರ್ತವ್ಯದಲ್ಲಿ ನಡೆದು ಬಂದ ದಾರಿಯನ್ನು ಇನ್ನಷ್ಟು ತಿಳಿಸಲು ಚಲನಚಿತ್ರದ ಮೂಲಕ ತೆರೆ ಕಾಣಿಸಿದರೆ ಭವಿಷ್ಯದ ಮಕ್ಕಳಿಗೆ ದಕ್ಷ ಅಧಿಕಾರಿಯ ಜೀವನ ಸ್ಪೂರ್ತಿ ನೀಡಬಹುದು ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಾಗೂ ನಿವೃತ್ತಿ ಹೊಂದಿದ ಹದಿನೈದು ಮಂದಿ ಸಾಧಕರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಅನಿಲ್‌ ಆನಂದ್, ಅಭಿಮಾನಿ ಬಳಗದ ಉಪಾಧ್ಯಕ್ಷ ಲೋಕೇಶ್‌ನಾಯ್ಕ್, ಪ್ರಧಾನ ಕಾರ್ಯದರ್ಶಿ ಮೋಹನ್, ಸದಸ್ಯರುಗಳಾದ ಡಿಂಪಲ್, ಚೈತ್ರ ಗೌಡ, ನವೀನಾ, ಪೊಲೀಸ್ ಅಧಿಕಾರಿ ಸುನೀತಾ, ಪಲ್ಲವಿ ಸಿ.ಟಿ.ರವಿ, ರೂಪನಾಯ್ಕ್ ಮತ್ತಿತರರಿದ್ದರು.

——–ಸುರೇಶ್

Leave a Reply

Your email address will not be published. Required fields are marked *

× How can I help you?