ಚಿಕ್ಕಮಗಳೂರು-ಪರಿಶಿಷ್ಟರ ಸೌಲಭ್ಯಗಳಿಗೆ ಮೀಸಲಿರಿಸಿರುವ ಹಣವನ್ನು ನಿಗಧಿತ ಅವಧಿಯಲ್ಲಿ ಕೂಡಲೇ ಬಿಡುಗಡೆಗೊಳಿಸಿ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ದ.ಸಂ.ಸ ಮುಖಂಡರುಗಳು ಜಿಲ್ಲಾಡಳಿತ ಮುಖಾಂತರ ಮುಖ್ಯಮಂತ್ರಿಗಳಿಗೆ ಶನಿವಾರ ಮನವಿ ಸಲ್ಲಿಸಿದರು.
ಈ ಸಂಬoಧ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದ ಪದಾಧಿಕಾರಿಗಳು, ಪರಿಶಿಷ್ಟ ಏಳಿಗೆಗಾಗಿ ಸೌಲಭ್ಯ ಒದಗಿಸಲು ಅಂಬೇಡ್ಕರ್, ಆದಿಜಾಂಬವ, ವಾಲ್ಮೀಕಿ ಹಾಗೂ ಬೋವಿ ನಿಗಮಗಳು ಅಸ್ಥಿತ್ವಲ್ಲಿದ್ದು ಪರಿಶಿಷ್ಟ ಅಭಿವೃದ್ದಿಗೆ ವಾರ್ಷಿಕವಾಗಿ ಕೋಟಿಗಟ್ಟಲೇ ಹಣ ಕಳೆದ ಒಂದು ವರ್ಷದಿಂದ ಫಲಾನುಭವಿಗಳಿಗೆ ಲಭಿಸಿಲ್ಲ ಎಂದರು.
ಬಳಿಕ ಮಾತನಾಡಿದ ದ.ಸಂ.ಸ ರಾಜ್ಯ ಸಮಿತಿ ಸದಸ್ಯ ಕೆ.ಸಿ.ವಸಂತ್‌ಕುಮಾರ್, ಜಿಲ್ಲೆಯಲ್ಲಿ ಕಳೆದ ಮೇ, ಜೂನ್ ಹಾಗೂ ಜುಲೈನಲ್ಲಿ ಸುಮಾರು 20 ಬೋರೆವೇಲ್ ಕೊರೆಯಲಾಗಿದೆ. ಆದರೆ ಹಿಂದಿನ ವರ್ಷಗಳ ಕೆಲಸ ನಿರ್ವಹಿಸುತ್ತಿರುವ ಏಜೆನ್ಸಿಗಳಿಗೆ ನವೆಂಬರ್ ತಿಂಗಳಿoದ ಹಣ ಬಿಡುಗಡೆಗೊಳಿಸಿಲ್ಲ ಎಂದು ಹೇಳಿದರು.
ಫಲಾನುಭವಿಗಳು ಬೋರೆವೆಲ್‌ಗಳಿಗೆ ಅಂತಿಮವಾಗಿ ವಿದ್ಯುತ್ ನೀಡುವ ಕಾಮಗಾರಿ ಕೆಲಸ ಅಪೂರ್ಣವಾಗಿದೆ. ಈ ವಿಚಾರವಾಗಿ ಏಜೆನ್ಸಿಗಳು ಹಾಗೂ ಫಲಾನುಭವಿಗಳಿಗೆ ಜಗಳ ಏರ್ಪಡುತ್ತಿದೆ. ಇದರಿಂದ ಬೇಸತ್ತಿರುವ ಏಜೆನ್ಸಿಗಳು ಈ ಕೆಲಸವನ್ನು ಕೈಗೊಳ್ಳಲು ಹಿಂದೇಟು ಹಾಕಿದ್ದು, ಫಲಾನುಭವಿಗಳು ಹಿಡಿಶಾಪ ಹಾಕುತ್ತಿದ್ದಾರೆ ಎಂದರು.
ಇನ್ನೊoದೆಡೆ ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಸರಾಗವಾಗಿ ವಾರ್ಷಿಕವಾಗಿ ಅನು ಮೋದನೆಗೊಂಡ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿವೆ. ಪರಿಶಿಷ್ಟರ ಅಭಿವೃದ್ಧಿ ನಿಗಮಗಳಿಗೆ 2 ವರ್ಷಗಳಿಂದ ನಿರಂತರವಾಗಿ ಅನುದಾನ ಬಿಡುಗಡೆಯಾಗದೆ ಬಾಕಿ ಉಳಿದಿವೆ ಎಂದು ಹೇಳಿದರು.
ಪರಿಶಿಷ್ಟರು ಭೂಮಿ ಹೊಂದುವ ಭೂ ಒಡೆತನ ಯೋಜನೆ 5 ವರ್ಷಗಳಿಂದ ಕಾರ್ಯಚಟುವಟಿಕೆ ನಡೆಯದೇ ನಿಂತಿದೆ. ಫಲಾನುಭವಿಗಳು ಭೂಮಿ ಸಿಗುವುದೆಂದು ಭೂ ಮಾಲೀಕರಲ್ಲಿ ಅಲ್ಪಸ್ವಲ್ಪವಿದ್ಧ ಹಣ ವನ್ನು ನೀಡಿ ಕರಾರು ಪತ್ರ ಮಾಡಿಕೊಂಡು ಜಾತಕ ಪಕ್ಷಿಯಂತೆ ನಿಗಮದ ಹಣಕ್ಕಾಗಿ ಕಾಯುತ್ತಿದ್ದು ಒಂದೆಡೆ ಕೊಟ್ಟ ಹಣವು ಇಲ್ಲ, ಭೂಮಿಯು ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ಹೊರಹಾಕಿದರು.
ಪರಿಶಿಷ್ಟ ಯೋಜನೆಗಳು ನಿಗಧಿತ ಸಮಯದಲ್ಲಿ ಫಲಾನುಭವಿ ಹಾಗೂ ಏಜೆನ್ಸಿಗಳಿಗೆ ಸಿಗದೇ ನೇರವಾಗಿ ಗ್ಯಾರಂಟಿ ಯೋಜನೆಗಳಿಗೆ ಉಪಯೋಗವಾಗುತ್ತಿದೆ ಎಂಬ ಸಂದೇಹ ವ್ಯಕ್ತವಾಗುತ್ತಿದೆ. ಹೀಗಾಗಿ ಪರಿಶಿಷ್ಟ ಹಣ ನಿಗಧಿತ ಸಮಯಕ್ಕೆ ಒದಗಿಸಿ, ಹೆಚ್ಚು ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಕೆ.ಸಿ.ವಸಂತ್‌ಕುಮಾರ್ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ದಸಂಸ ಮುಖಂಡರುಗಳಾದ ದೊಡ್ಡಯ್ಯ, ಜಯರಾಮಯ್ಯ, ಕೆಂಚಪ್ಪ, ವೀರಯ್ಯ, ಭೀಮಯ್ಯ, ಅಣ್ಣಯ್ಯ, ಮಂಜಯ್ಯ, ರಂಗಯ್ಯ, ಧರ್ಮೇಶ್ ಹಾಜರಿದ್ದರು.
——–ವರದಿ-ಸುರೇಶ್