
ಚಿಕ್ಕಮಗಳೂರು-ದಲಿತ ಸಮುದಾಯಕ್ಕೆ ಮೀಸಲಿರಿಸಿರುವ ಜಾಗವನ್ನು ಪ್ರವಾಸೋದ್ಯಮ ಇಲಾಖೆಗೆ ಮಂಜೂರು ಮಾಡಬಾರದು ಎಂದು ದಲಿತ ಸಂಘರ್ಷ ಸಮಿತಿ ಮುಖಂಡರುಗಳು ಗುರುವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ದಸಂಸ ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ ಎನ್.ವೆಂಕಟೇಶ್, ನರಸಿಂಹರಾಜಪುರ ತಾಲ್ಲೂಕಿನ ರಾವೂರು ಗ್ರಾಮದ ಸರ್ವೆ ನಂ.157, 158 ಮತ್ತು 159ರಲ್ಲಿ ದಸಂಸ ಅಭಿವೃದ್ದಿಗಾಗಿ ಹಿಂದಿನ ಜಿಲ್ಲಾಧಿಕಾರಿಗಳು 2010-11ನೇ ಸಾಲಿನಲ್ಲಿ ಜಮೀನು ಮಂಜೂರಾತಿಗಾಗಿ ಸರ್ವೆ ಕಾರ್ಯ ನಡೆಸಿದ್ದು, ಕಾಯ್ದಿರಿಸಲು ಹಿಂದೆಯು ಅರ್ಜಿ ಸಲ್ಲಿಸಲಾಗಿದೆ ಎಂದರು.
ಇದೀಗ ಮೀಸಲಿರಿಸಿರುವ ಜಾಗವನ್ನು ಪ್ರವಾಸೋದ್ಯಮ ಇಲಾಖೆಗೆ ಮಂಜೂರಾತಿಗೆ ಮುಂದಾಗಿದೆ. ಅಲ್ಲದೇ ತಹಶೀಲ್ದಾರ್‌ರಿಂದ ಉಪವಿಭಾಗಾಧಿಕಾರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂಬುದು ತಿಳಿದು ಬಂದಿದೆ.ಈ ಪ್ರದೇಶವು ಭದ್ರ ಅಭಯಾರಣ್ಯಕ್ಕೆ ಅತೀ ಸಮೀಪವಾಗಿದೆ. ವನ್ಯಜೀವಿಗಳ ಹಾವಳಿ ಈ ಭಾಗದಲ್ಲಿ ಹೆಚ್ಚಳವಿದೆ. ಇದರಿಂದ ಕಾಡುಪ್ರಾಣಿಗಳ ಹಾವಳಿಯಿಂದ ಸ್ವಚ್ಚಂಧ ವಿಹಾರಕ್ಕೆ ತೊಂದರೆಯಾಗಲಿದ್ದು ಈ ಪ್ರದೇಶದಲ್ಲಿ ಪ್ರವಾಸೋದ್ಯಮ ನಿಗಮದಿಂದ ರೆಸಾರ್ಟ್ ನಿರ್ಮಿಸಿ ಮೋಜುಮಸ್ತಿ ಹೆಚ್ಚಾದರೆ ವನ್ಯ ಮೃಗಗಳು ಆಹುತಿಯಾಗುತ್ತವೆ ಎಂದು ಹೇಳಿದರು.
ಜಾಗವು ನ.ರಾ.ಪುರ ಪಟ್ಟಣಕ್ಕೆ ಸಮೀಪವಿದಲ್ಲಿರುವ ಕಾರಣ ಗ್ರಾ.ಪಂ. ವ್ಯಾಪ್ತಿಯಲ್ಲಿನ ನಿವೇಶನ ರಹಿತರಿಗೆ ಕಾಯ್ದಿರಿಸಲು ಅಧಿಕಾರಿಗಳು ಜನಪ್ರತಿನಿಧಿಗಳು ವಿಚಾರಿಸಿದರೆ ಸ್ಥಳವಿಲ್ಲ ಎನ್ನುತ್ತಾರೆ. ಆದರೆ ಮೋಜು ಮಸ್ತಿಗಾಗಿ ಪ್ರವಾಸೋದ್ಯಮಕ್ಕೆ ಮಂಜೂರಾತಿ ಮಾಡಲು ಮುಂದಾಗಿರುವ ಕಾರಣ ಬಡವರು, ದಲಿತರು ಹಾಗೂ ನಿವೇಶನ ರಹಿತರಿಗೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದರು.

ಆದ್ದರಿoದ ದಲಿತ ಸಮುದಾಯಕ್ಕೆ ಮೀಸಲಿರಿಸಿರುವ ಜಾಗವನ್ನು ಪ್ರವಾಸೋದ್ಯಮಕ್ಕೆ ಮಂಜೂರುಗೊಳಿಸದೇ ಅರ್ಹ ಫಲಾನುಭವಿಗಳಿಗೆ ವಿತರಿಸಬೇಕು. ರಾಜಕೀಯ ಒತ್ತಡಕ್ಕೆ ಮಣಿದು ಅಧಿಕಾರಿಗಳು ಪ್ರವಾಸೋದ್ಯಮಕ್ಕಾಗಿ ಜಾಗವನ್ನು ಮಂಜೂರು ಮಾಡಿದರೆ ದಸಂಸ ಉಗ್ರ ಮತ್ತು ಕಾನೂನಾತ್ಮಕವಾಗಿ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ದಸಂಸ ರಾಜ್ಯ ಮಹಿಳಾ ಸಂಘಟನಾ ಸಂಚಾಲಕಿ ಎಂ.ಡಿ.ಭವಾನಿ, ಜಿಲ್ಲಾ ಸಂಘಟನಾ ಸಂಚಾಲಕರಾದ ರಾಜೇಶ್, ಅಬ್ದಲ್ ರೆಹಮಾನ್, ತಾಲ್ಲೂಕು ಸಂಘಟನಾ ಸಂಚಾಲಕ ರಾಜು ಹಾಜರಿದ್ದರು.
—–ಸುರೇಶ್