ಚಿಕ್ಕಮಗಳೂರು-ಇತಿಹಾಸ ತಿಳಿಯುವಲ್ಲಿ ಶಾಸನಗಳ ಪಾತ್ರ ಮಹತ್ವವಾದದ್ದು, ಸುಮಾರು 899 ವರ್ಷಗಳ ಹಳೆಯ ಗಂಗರ ಆಳ್ವಿಕೆಯ ಶಾಸನ ನಮ್ಮ ಜಿಲ್ಲೆಯಲ್ಲಿ ದೊರಕಿರುವುದು ಜಿಲ್ಲೆಯ ಹೆಮ್ಮೆ ಎಂದು ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಹೇಳಿದರು.
ನಗರದ ತೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರು ಮನೆ ಹಳ್ಳಿಯಲ್ಲಿ ದೊರೆತ ಗಂಗರ ಕಾಲದ ಗಂಗಕಲ್ಲು ಶಾಸನವನ್ನು ವೀಕ್ಷಿಸಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ನಮ್ಮ ದೇಶದ, ನಮ್ಮ ನಾಡಿನ ಇತಿಹಾಸವನ್ನು ಕೇವಲ ಪಾಶ್ಚಾತ್ಯ ವಿದ್ವಾಂಸರು ರಚಿಸಿದ ಕೃತಿಗಳಿಂದ ನಾವು ಓದುತ್ತೇವೆ. ಅದು ಕೇವಲ ಕಾಲ್ಪನಿಕ ಸತ್ಯ ಎಂಬುದು ನಮ್ಮ ಶಾಸನಗಳ ಅಧ್ಯಯನದಿಂದ ಮಾತ್ರ ತಿಳಿಯಲು ಸಾಧ್ಯ. ಇತಿಹಾಸದ ಮೂಲಕ ನಮ್ಮ ಪೂರ್ವಜರ ಆಡಳಿತ, ಸಂಸ್ಕೃತಿ, ಸಾಹಿತ್ಯ, ಕಲೆ, ವಾಸ್ತುಶಿಲ್ಪ, ಜೀವನ ಶೈಲಿಯನ್ನು ತಿಳಿಯಲು ಸಹಕಾರಿಯಾಗುತ್ತವೆ. ಇಂತಹ ಇತಿಹಾಸವನ್ನು ಹೊಂದಿರುವ ಶಾಸನಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ನಮ್ಮ ಜಿಲ್ಲೆಯ ತೇಗೂರು ಗ್ರಾಮ ಪಂಚಾಯಿತಿಯ ಮೂರು ಮನೆ ಹಳ್ಳಿ ಗ್ರಾಮದಲ್ಲಿ ದೊರೆತಿರುವ ಗಂಗರ ಕಾಲದ ಗಂಗಕಲ್ಲು ಶಾಸನ ನಮ್ಮ ಜಿಲ್ಲೆಯಲ್ಲಿ ಸಿಕ್ಕಿರುವುದು ನಮ್ಮ ಪುಣ್ಯ ಇಂತಹ ಯಾವುದೇ ಇತಿಹಾಸ ತಿಳಿಸುವ ಶಾಸನಗಳು, ಶಿಲೆಗಳು, ವೀರಗಲ್ಲುಗಳು ದೊರೆತಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವುಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಮಂಜುಳ ಹುಲ್ಲಹಳ್ಳಿ ಮಾತನಾಡಿ ಪ್ರತಿಯೊಂದು ಶಾಸನಗಳ ಅಧ್ಯಯನವು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಪ್ರಸ್ತುತ ದೊರಕಿರುವ ಶಾಸನದ ಮೂಲಕ ಗಂಗರ ಆಳ್ವಿಕೆಯ ನಿಖರ ಮಾಹಿತಿ ತಿಳಿಯಲು ಸಹಕಾರಿಯಾಗಿದೆ. ಕರ್ನಾಟಕದಲ್ಲಿರುವ ಸಾಮಾನ್ಯ ಜನರಿಗೆ ಈ ನಾಡಿನ ಶಾಸನಗಳ ಪ್ರಕಾರ ಹಾಗೂ ಅವುಗಳ ಮಹತ್ವವನ್ನು ಸಂಕ್ಷಿಪ್ತವಾಗಿ ವಿವರಿಸುವ ಮೂಲಕ ನಿಖರವಾದ ಮಾಹಿತಿಯನ್ನು ಒದಗಿಸುವಲ್ಲಿ ಶಾಸನಗಳು ಸಹಾಯಕವಾಗುತ್ತದೆ. ಅಲ್ಲದೆ ಶಾಸನಗಳಿಗೆ ಸಂಬಂಧಿಸಿದಂತೆ ಅಧ್ಯಯನ ಮಾಡುವವರಿಗೆ ಸಹಾಯಕವಾಗುತ್ತದೆ ಎಂದ ಅವರು,ತಮ್ಮ ಕೃಷಿ ಭೂಮಿ ಅಥವಾ ಭೂ ಅಗೆತದ ಸಮಯದಲ್ಲಿ ದೊರಕುವ ಇತಿಹಾಸ ಸಂಬಂಧಿತ ಯಾವುದೇ ವಸ್ತುಗಳನ್ನು ನಿರ್ಭೀತಿಯಿಂದ ಅಧಿಕಾರಿಗಳ ಗಮನಕ್ಕೆ ತಂದು ಅವುಗಳ ಸಂರಕ್ಷಣೆಗೆ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಈ ಶಾಸನವನ್ನು ಗುರುತಿಸಿ ಇಲಾಖೆಗೆ ಒಪ್ಪಿಸಿದ ಮೂರು ಮನೆ ಹಳ್ಳಿ ಗ್ರಾಮದ ನಿವಾಸಿ ದ್ರಾಕ್ಷಯಣ್ಣಮ್ಮ ಹಾಗೂ ಶಾಸನದ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸಿ ಇದರ ಸಂರಕ್ಷಣೆಗೆ ಸಹಕರಿಸಿದ ಜಾನ್ ಸಚಿನ್ ಅವರನ್ನು ಅಧಿಕಾರಿಗಳು ಹಾಗೂ ಗ್ರಾಮಸ್ಥರು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಸಿಬ್ಬಂದಿಗಳು, ಮೂರು ಮನೆ ಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.