ಚಿಕ್ಕಮಗಳೂರು:ಚುನಾವಣೆ ಪೂರ್ವದಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನ ಮಾಡಲಾಗಿದೆ.ವಾರ್ಷಿಕ 59 ಸಾವಿರ ಕೋಟಿ ರೂಗಳನ್ನು ವ್ಯಯ ಮಾಡುತ್ತಿರುವುದರಿಂದ ಅಭಿವೃದ್ಧಿಗೆ ಸರ್ಕಾರದಲ್ಲಿ ಹಣ ಇಲ್ಲ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಈಗ ಅಭಿವೃದ್ಧಿಗೆ ಹಣ ಮೀಸಲಿಡುವ ಮೂಲಕ ಉತ್ತರ ನೀಡಲಾಗಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.
ಅವರು ಇಂದು ಲಕ್ಯಾ ಹೋಬಳಿ ಕಳಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೂತನ ಆಂಬುಲೆನ್ಸ್ ಬಿಡುಗಡೆ ಮಾಡಿ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಶೋಷಿತರು, ಬಡವರು ಸೇರಿದಂತೆ ಎಲ್ಲಾ ವರ್ಗದ ಜನರ ಬದುಕಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಈ ಸಮುದಾಯವನ್ನು ಸಮಾಜದ ಮುನ್ನಲೆಗೆ ತರಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ.
ಕಳಸಾಪುರ ಭಾಗದ ಮೂರು ದೇವಾಲಯಗಳ ಅಭಿವೃದ್ಧಿಗೆ ಸರ್ಕಾರದಿಂದ ಹಣ ಮಂಜೂರು ಮಾಡಲಾಗಿದೆ.30 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಗೆ ಹಣ ಬಿಡುಗಡೆಮಾಡಲಾಗಿದ್ದು, ಜೊತೆಗೆ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಕಾಳಜಿ ವಹಿಸಿ, ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ನೀಡಬೇಕೆಂದು ಗುರಿ ಹೊಂದಲಾಗಿದೆ ಎಂದು ಹೇಳಿದರು.
1280 ಕೋಟಿ ರೂ ವೆಚ್ಚದಲ್ಲಿ ಭದ್ರಾಉಪಕಣಿವೆ ಯೋಜನೆ ಹಾಗೂ ರಣಘಟ್ಟ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಅತೀ ಶ್ರೀಘ್ರದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ನೀರಾವರಿ ಯೋಜನೆಗಳನ್ನು ಜಾರಿ ಮಾಡಲಾಗುವುದು ನಮಗೆ ಬೇಕಾದ ರಾಜಕಾರಣ ಮಾಡದೆ ರೈತರಿಗಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಭಾಗದ ಜನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಅವಶ್ಯಕತೆ ಇದೆ ಎಂದು ಚುನಾವಣಾ ಪೂರ್ವದಿಂದಲೂ ಹೇಳುತ್ತಿದ್ದು,ತಾಲ್ಲೂಕಿಗೆ ಮೂರು ಅಂಬ್ಯೂಲೆನ್ಸ್ಗಳನ್ನು ಸರ್ಕಾರ ಮಂಜೂರು ಮಾಡಿದ್ದು, ಕಳಸಾಪುರ, ನಿಡಘಟ್ಟ ಮತ್ತು ಕೈಮರಕ್ಕೆ ತಲಾ ಒಂದೊಂದರಂತೆ ನೀಡಲಾಗಿದೆ ಎಂದರು.
ಉತ್ತಮವಾದ ಆರೋಗ್ಯ ಇದ್ದರೆ, ಏನು ಬೇಕಾದರೂ ಸಾಧಿಸಬಹುದು. ಈ ನಿಟ್ಟಿನಲ್ಲಿ ಆಕಸ್ಮಿಕವಾಗಿ ಆಗುವ ಆರೋಗ್ಯದ ತೊಂದರೆಗಳಿಗೆ ತುರ್ತು ಚಿಕಿತ್ಸೆಗಾಗಿ ನಗರಕ್ಕೆ ಕರೆದೊಯ್ಯಲು ಅಂಬುಲೆನ್ಸ್ಗಳನ್ನು ನೀಡುವ ಮೂಲಕ ನಾಗರೀಕರ ಆರೋಗ್ಯಕ್ಕೆ ಆದ್ಯತೆ ನೀಡಲಾಗಿದೆ.
ಶಾಸಕರು ಮಾಚೇನಹಳ್ಳಿ ಗೌರಿ ಕೆರೆಗೆ ಭಾಗಿನ ಅರ್ಪಿಸಿ ಕಳಸಾಪುರಕೆರೆ, ತಿಮ್ಮರಾಯನಕೆರೆ, ಈಶ್ವರಹಳ್ಳಿಕೆರೆ, ಮಾಚೇನಹಳ್ಳಿ ಕೆರೆಗಳು ತುಂಬಿ ಹರಿದಿದ್ದು, ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಬೀರಿದೆ.ಎತ್ತಿನಹೊಳೆ ಯೋಜನೆಯನ್ನು ಜಾರಿ ಮಾಡಿದ ಪರಿಣಾಮ ಬಯಲು ಭಾಗದ ಬಹುತೇಕ ಕೆರೆಗಳು ತುಂಬಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಶ್ರೀದೊಡ್ಡಮ್ಮ ದೇವಿ, ಶ್ರೀಕರಿಯಮ್ಮ ದೇವಿ, ನೂತನ ದೇವಾಲಯದ ಗುದ್ದಲಿ ಪೂಜೆ ನೇರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಳಸಾಪುರ ಗ್ರಾ.ಪಂ ಅಧ್ಯಕ್ಷೆ ರಾಧಮ್ಮ ವಹಿಸಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಥ್ ಬಾಬು, ತಾಲ್ಲೂಕು ಆರೋಗ್ಯಾ ಧಿಕಾರಿ ಡಾ. ಸೀಮಾ, ಡಾ. ಕಾರ್ತಿಕ್ ಗ್ರಾಮಸ್ಥರುಗಳಾದ ಕೆಂಗೇಗೌಡ, ಲೋಕೇಶ್, ಶ್ರೀಧರ್, ಹರ್ಷದ್ ಮತ್ತಿರರು ಉಪಸ್ಥಿತರಿದ್ದರು.