ಚಿಕ್ಕಮಗಳೂರು-ಚಿಕ್ಕಮಗಳೂರು ರೈಲ್ವೆ ನಿಲ್ದಾಣದಿಂದ ರಾತ್ರಿ ಪಾಳಯದಲ್ಲಿ ರಾಜಧಾನಿ ಬೆಂಗಳೂರಿಗೆ ನೂತನವಾಗಿ ರೈಲು ಸಂಚಾರ ಆರಂಭಿಸಬೇಕು ಎಂದು ಚಿಕ್ಕಮಗಳೂರು ರೈಲ್ವೆ ಬಳಕೆದಾರರ ಒಕ್ಕೂಟ ಮಂಗಳವಾರ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿಗೆ ಮನವಿ ಸಲ್ಲಿಸಿತು.
ಬಳಿಕ ಮಾತನಾಡಿದ ಒಕ್ಕೂಟದ ಸುಮಂತ್ ನೆಮ್ಮಾರ್, ರಾಜ್ಯದಲ್ಲೇ ಚಿಕ್ಕಮಗಳೂರು ಜಿಲ್ಲೆ ಅತ್ಯಂತ ದೊಡ್ಡ ಪ್ರವಾಸಿ ತಾಣವಾಗಿದೆ. ಪ್ರತಿನಿತ್ಯವು ಸಾವಿರಾರು ಪ್ರವಾಸಿಗರು ಜಿಲ್ಲೆಯ ಪ್ರಖ್ಯಾತ ತಾಣಗಳಿಗೆ ಭೇಟಿ ನೀಡುತ್ತಾರೆ. ಹಾಗಾಗಿ ಪ್ರವಾಸಿಗರಿಗೆ ಅನುಕೂಲವಾಗಲು ನಿಟ್ಟಿನಲ್ಲಿ ರೈಲಿನ ವ್ಯವಸ್ಥೆ ಇರುವುದಿಲ್ಲ ಎಂದು ಹೇಳಿದರು.
ನಗರದಿಂದ ಪ್ರತಿನಿತ್ಯ ರಾತ್ರಿ 12ಕ್ಕೂ ಅಧಿಕ ಸಾಮಾನ್ಯ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, 3ರಾಜಹಂಸ, 3 ನಾನ್ಎಸಿ ಸ್ಲೀಪರ್ ಹಾಗೂ ೨2 ವೋಲ್ವೋ ಬಸ್ಸುಗಳು ಜೊತೆಗೆ 6 ಖಾಸಗಿ ನಾನ್ಎಸಿ ಸ್ಲೀಪರ್ ಬಸ್ಸುಗಳು ಬೆಂಗಳೂರಿಗೆ ತೆರಳುತ್ತದೆ. ಈ ಎಲ್ಲಾ ಬಸ್ಸುಗಳು ಪ್ರತಿನಿತ್ಯ ಕನಿಷ್ಠ 70ಪ್ರತಿಶತ ಪ್ರಯಾಣಿಕರು ಹಾಗೂ ವಾರಾಂತ್ಯದಲ್ಲಿ ಶೇ. 100ರಷ್ಟು ಪ್ರಯಾಣಿಕರಿಂದ ಭರ್ತಿಯಾಗುತ್ತದೆ ಎಂದರು.
ಈ ಎಲ್ಲಾ ಬಸ್ಸುಗಳನ್ನು ಸೇರಿಸಿ ಪ್ರತಿನಿತ್ಯ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ರಾತ್ರಿವೇಳೆ ಕನಿಷ್ಠ 600ಕ್ಕೂ ಅಧಿಕ ಹಾಗೂ ವಾರಾಂತ್ಯದಲ್ಲಿ 1100ಕ್ಕೂ ಅಧಿಕ ಜನ ಬಸ್ಸುಗಳಲ್ಲಿ ತೆರಳುತ್ತಿದ್ದಾರೆ. ಜೊತೆಗೆ ವಾರಾಂತ್ಯದಲ್ಲಿ ಕನಿಷ್ಠ 5 ಸಾವಿರಕ್ಕೂ ಅಧಿಕ ಜನ ಪ್ರವಾಸಿಗರು ಬೆಂಗಳೂರಿನಿoದ ಖಾಸಗೀ ವಾಹನಗಳಲ್ಲಿ ಚಿಕ್ಕಮಗಳೂರಿಗೆ ಆಗಮಿಸುತ್ತಿದ್ದಾರೆ.
ಆ ನಿಟ್ಟಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಓಡಾಟ ಮಾಡುವ ಪ್ರಯಾಣಿಕರಿಗೆ ಅನುಕೂಲವಾಗುವ ಸಲುವಾಗಿ ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿoದ ಚಿಕ್ಕಮಗಳೂರಿಗೆ ಪ್ರತಿನಿತ್ಯ ರಾತ್ರಿ ವೇಳೆ ಹೊಸ ರೈಲು ಸಂಚಾರವನ್ನು ಆರಂಭ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಸಂತೋಷ್ ಕೋಟ್ಯಾನ್, ರಾಜೇಶ್, ಎಸ್ಡಿಎಂ ಮಂಜು, ಶಶಿ ಆಲ್ದೂರು ಹಾಜರಿದ್ದರು.
—————-–ಸುರೇಶ್