ಚಿಕ್ಕಮಗಳೂರು-ಮುತ್ತೋಡಿ ಅರಣ್ಯ ಪ್ರದೇಶಕ್ಕೆ ಹುಲಿ ಬಿಟ್ಟ ಅರಣ್ಯ ಇಲಾಖೆ-ಮತ್ತೆ ಮಾನವರೊಂದಿಗೆ ಸಂಘರ್ಷ ಏರ್ಪಡುವ ಸಾಧ್ಯತೆ- ಸ್ಥಳಾಂತರಕ್ಕೆ ಒತ್ತಾಯ

ಚಿಕ್ಕಮಗಳೂರು-ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗದಲ್ಲಿ ಸೆರೆಹಿಡಿದ ಮಾನವರೊಂದಿಗೆ ಸಂಘರ್ಷ ಹೊಂದಿದ್ದ ಹುಲಿಯನ್ನು ಮುತ್ತೋಡಿ ಅರಣ್ಯ ಪ್ರದೇಶಕ್ಕೆ ಬಿಟ್ಟಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕಾಫಿ ಬೆಳೆಗಾರ ಹಾಗೂ ಸಾಮಾಜಿಕ ಕಾರ್ಯಕರ್ತ ಹೊಲದಗದ್ದೆ ಗಿರೀಶ್ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು,ಕೆಲವು ಪರಿಸರವಾದಿಗಳು ಹಾಗೂ ಅಧಿಕಾರಿಗಳ ಏಕ ಪಕ್ಷೀಯ ತೀರ್ಮಾನದಿಂದ ಹುಲಿಯನ್ನು ಮುತ್ತೋಡಿ ಅಭಯಾರಣ್ಯಕ್ಕೆ ಬಿಡಲಾಗಿದೆ. ಹುಲಿಯನ್ನು ಅಭಯಾರಣ್ಯಕ್ಕೆ ಬಿಡುವಾಗ ಸ್ಥಳೀಯ ಗ್ರಾಮಸ್ಥರಿಗೆ ಯಾವುದೇ ಮಾಹಿತಿ ನೀಡಿಲ್ಲ. ಜೊತೆಗೆ ಜನಪ್ರತಿನಿಧಿಗಳಿಗೂ ಮಾಹಿತಿ ಕೊಟ್ಟಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಮನಸ್ಸಿಗೆ ತೋಚಿದಂತೆ ನಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಕಾಡಂಚಿನ ಜನ ಆತಂಕದಲ್ಲೇ ಬದುಕುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೇಲಿನ ಹುಲುವತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹುಲಿಯನ್ನು ಬಿಡಲಾಗಿದೆ. ಈಗಾಗಲೇ ಹುಲಿ ದಾಳಿಯಿಂದಾಗಿ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಹಸುಗಳು ಮೃತಪಟ್ಟಿವೆ. ಮುಂದಿನ ದಿನಗಳಲ್ಲಿ ಹುಲಿ ಮನುಷ್ಯರ ಮೇಲೆಯೂ ದಾಳಿ ನಡೆಸುವ ಆತಂಕ ಸೃಷ್ಟಿಯಾಗಿದೆ ಎಂದು ತಿಳಿಸಿದ್ದಾರೆ.

ಮಾನವರೊಂದಿಗೆ ಸಂಘರ್ಷ ಹೊಂದಿದ್ದ ಹುಲಿಯನ್ನು ಯಾವ ಉದ್ದೇಶಕ್ಕಾಗಿ ಭದ್ರಾ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು. ಹುಲಿಯನ್ನು ಬಿಡಲು ಅನುಮತಿ ಕೊಟ್ಟವರು ಯಾರು. ಹುಲಿಗೆ ರೇಡಿಯೋ ಕಾಲರ್ ಅಳವಡಿಕೆ ಮಾಡಿದವರು ಯಾರು ಎಂಬುದನ್ನು ಕೂಡಲೇ ಸ್ಪಷ್ಟಪಡಿಸಬೇಕು. ಜೊತೆಗೆ ಹುಲಿ ಯನ್ನು ಸೆರೆ ಹಿಡಿದು ಬೇರೆ ಕಡೆ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಕಳೆದ ಮೂರು ನಾಲ್ಕು ವರ್ಷಗಳಿಂದ ಕಾಫಿ ತೋಟಗಳಲ್ಲಿ ಆನೆ ಮತ್ತು ಕಾಡುಕೋಣಗಳ ದಾಳಿ ವಿಪರೀತವಾಗಿದೆ. ಇದರಿಂದಾಗಿ ಬಾರಿ ಪ್ರಮಾಣದಲ್ಲಿ ಬೆಳೆ ಹಾನಿಯಾಗುತ್ತಿದೆ. ಉಪಟಳ ನೀಡುತ್ತಿರುವ ಆನೆಗಳನ್ನು ಸೆರೆಹಿಡಿದು ಬೇರೆ ಸ್ಥಳಾಂತರಿಸುವoತೆ ಹಲವು ಬಾರಿ ಮನವಿ ಮಾಡಿದರು ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

ಆನೆ ದಾಳಿಯಿಂದ ಹೆದರಿದ ಕಾರ್ಮಿಕರು ಕಾಫಿ ತೋಟಕ್ಕೆ ಕೆಲಸಕ್ಕೆ ಬರುತ್ತಿಲ್ಲ. ಇದೀಗ ಮಾನವರೊಂದಿಗೆ ಸಂಘರ್ಷ ಹೊಂದಿದ್ದ ಹುಲಿಯನ್ನು ಈ ಭಾಗದಲ್ಲಿ ಬಿಡಲಾಗಿದೆ ಎಂದು ಗೊತ್ತಾದಲ್ಲಿ ಕಾರ್ಮಿಕರು ಯಾವುದೇ ಕಾರಣಕ್ಕೂ ಕೆಲಸಕ್ಕೆ ಬರುವುದಿಲ್ಲ. ಇದರಿಂದಾಗಿ ಬೆಳೆಗಾರರು ಸಂಪೂರ್ಣವಾಗಿ ಬೆಳೆ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಕಳೆದ5 ವರ್ಷಗಳ ಹಿಂದೆ ಮುತ್ತೋಡಿ ಅರಣ್ಯ ವ್ಯಾಪ್ತಿ ಪಂಡರವಳ್ಳಿ ಗ್ರಾಮದಲ್ಲಿ ನರಭಕ್ಷಕ ಹುಲಿಯೊಂದು ಮಹಿಳೆ ಮೇಲೆ ದಾಳಿ ಮಾಡಿ ಮಹಿಳೆ ಸಾವನ್ನಪ್ಪಿರುವುದು ಜನ ಇನ್ನೂ ಮರೆತಿಲ್ಲ ಭಯ ಬೀತರಾಗಿದ್ದಾರೆ. ಆ ಹುಲಿಯನ್ನು ಗ್ರಾಮಸ್ಥರುಗಳು ಒತ್ತಡದಿಂದ ಬೆಳಗಾಂ ಸಮೀಪದ ಅರಣ್ಯಕ್ಕೆ ಸ್ಥಳಾಂತರಿಸಲಾಯಿತು ಈಗ ಮತ್ತೆ ಹುಲಿಯನ್ನು ತಂದು ಬಿಟ್ಟಿರುವುದು ಎಷ್ಟು ಸರಿ. ಒಂದು ಮುಖ್ಯ ವಿಚಾರ ಏನೆಂದರೆ ಮುತ್ತೂಡಿ ಅಭಯಾರಣ್ಯ ಸೋಲಾ ಅರಣ್ಯ ಇಲ್ಲಿ ಬೇರೆಡೆ ಇಂದ ಬಿಟ್ಟ ಪ್ರಾಣಿಗಳು ಬದುಕುವುದು ಕಷ್ಟ ಏಕೆಂದರೆ ಈ ಪರಿಸರಕ್ಕೆ ಹೊಂದುವುದಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿದೆ.

ಒಂದೆಡೆ ಹುಲಿ ಯೋಜನೆ ಮೀಸಲು ಅರಣ್ಯ ಪ್ರದೇಶ ಡೀಮ್ಡ್ ಫಾರೆಸ್ಟ್ ಇನ್ನು ಮುಂತಾದ ಕಾರಣಗಳಿಂದ ಸ್ಥಳೀಯರನ್ನು ಒಕ್ಕಲಿಬ್ಬಿಸುವ ಹುನ್ನಾರ ಇನ್ನೊಂದು ಗುಂಪು ಮಾಡುತ್ತಿದೆ ಎನ್ನುವ ಸಂಶಯ ಮೂಡುತ್ತಿದೆ ಎಂದು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

× How can I help you?