ಚಿಕ್ಕಮಗಳೂರು-ಶಿಕ್ಷಣ ಪಠ್ಯಕ್ಕಷ್ಟೇ ಸೀಮಿತವಾಗದೆ ವಿದ್ಯಾರ್ಥಿಗಳನ್ನು ಸಮಾಜದ ಹಿತಕ್ಕಾಗಿ ಅಣಿಗೊಳಿಸುವಂತಹ ಕೆಲಸ ಮಾಡಬೇಕು ಶಾಸಕ ಎಚ್.ಡಿ.ತಮ್ಮಯ್ಯ ಕರೆ ನೀಡಿದರು.
ಐಡಿಎಸ್‌ಜಿ ಸರ್ಕಾರಿ ಕಾಲೇಜಿನ 2024-25ನೆಯ ಸಾಲಿನ ಸಾಂಸ್ಕೃತಿಕ-ಕ್ರೀಡಾ, ಎನ್.ಎಸ್.ಎಸ್, ಎನ್.ಸಿ.ಸಿ, ಯುವ ರೆಡ್‌ಕ್ರಾಸ್ ಚಟುವಟಿಕೆಗಳನ್ನು ಕಾಲೇಜಿನ ಕುವೆಂಪು ವೇದಿಕೆಯಲ್ಲಿ ಇಂದು ಬೆಳಗ್ಗೆ ಉದ್ಘಾಟಿಸಿ ಅವರು ಮಾತ ನಾಡಿದರು.
ನಮ್ಮ ಶಿಕ್ಷಣ ಪಠ್ಯ-ಪದವಿ ಸರ್ಟೀಫಿಕೆಟ್‌ಗೆ ಸೀಮಿತವಾಗಬಾರದು.ಸಮಾಜಸೇವೆಗೆ ಲೋಕಹಿತಕ್ಕೆ ನಮ್ಮನ್ನು ಅರ್ಪಿಸಿಕೊಳ್ಳಲು ಪ್ರೇರಣೆ ನೀಡಬೇಕು.ಸಮಾನತೆ,ಸಹಬಾಳ್ವೆ,ಸಹಕಾರ,ಸಹಾನುಭೂತಿ ಮತ್ತಿತರ ಸದ್ಗುಣಗಳನ್ನು ಬೆಳೆಸುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಹುಟ್ಟು ಹಾಕಬೇಕು.ಕಾಲೇಜಿನ ವಿವಿಧ ಚಟುಟಿಕೆಗಳು ಒಳ್ಳೆಯ ಕಾರ್ಯಗಳಿಗೆ ಪೂರಕ ವಾತಾವರಣ ನಿರ್ಮಿಸುತ್ತದೆ ಎಂದರು.
ಓದಿನ ಜೊತೆಗೆ ಒಂದಿಲ್ಲೊoದು ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ.ಸಾಂಸ್ಕೃತಿಕ ಚಟುವಟಿಕೆಗಳು ನಮ್ಮನ್ನು ಮಾನಸಿಕವಾಗಿ ಸದೃಢಗೊಳಿಸುತ್ತವೆ.ಕ್ರೀಡೆ ದೈಹಿಕ ಸಾಮರ್ಥ್ಯ ಹೆಚ್ಚಿಸುತ್ತದೆ.1965ರಲ್ಲಿ ಆರಂಭಗೊoಡ ಎನ್.ಎಸ್.ಎಸ್ ರಾಷ್ಟ್ರದ ಬಗ್ಗೆ ಅಭಿಮಾನ, ಭಕ್ತಿ, ಪ್ರೀತಿ, ಮೂಡಿಸುವುದರ ಜೊತೆಗೆ ಸೇವಾ ಮನೋಭಾವವನ್ನು ವಿಕಾಸಗೊಳಿಸುತ್ತವೆ. ಎನ್.ಸಿ.ಸಿ ಶಿಸ್ತಿನ ತರಬೇತಿ ನೀಡಿದರೆ,ಯುವ ರೆಡ್‌ಕ್ರಾಸ್ ಸಾಹಸ, ಆರೋಗ್ಯ ರಕ್ತದಾನ ಮತ್ತಿತರ ಚಟುವಟಿಕೆಗಳಿಗೆ ಇಂಬು ನೀಡುತ್ತದೆ ಎಂದು ಹೇಳಿದರು.
ವಿದ್ಯಾರ್ಥಿ ಯುವಜನರ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಅವರಿಂದ ಮಹತ್ವದ ಯಶಸ್ಸನ್ನು ನಿರೀಕ್ಷಿಸಬಹುದು.ಗುರುವಿಗೆ ನಮ್ಮ ಸಮಾಜದಲ್ಲಿ ಅತ್ಯಂತ ಗೌರವದ ಸ್ಥಾನ ನೀಡಲಾಗಿದೆ.ನಾನು ನನ್ನದು ಎನ್ನುವುದನ್ನು ಬಿಟ್ಟು ನಾವು ಎಂಬ ವಿಶಾಲ ಮನೋಭಾವ ಬೆಳೆಸಿಕೊಂಡಾಗ ಸಮಾಜದಲ್ಲಿ ಒಳ್ಳೆಯ ವಾತಾವರಣ ಸೃಷ್ಟಿಯಾಗುತ್ತದೆ ಎಂದ ಶಾಸಕ ತಮ್ಮಯ್ಯ,ಗುರಿ ಮುಟ್ಟಲು ಗುರುವಿನ ನೆರವು ಅಗತ್ಯ ಎಂದು ತಿಳಿಸಿದರು.
ಶಾಸಕರನ್ನು ಅಭಿನಂದಿಸಿ ಮಾತನಾಡಿದ ಹಿರಿಯ ಉಪನ್ಯಾಸಕ ಪ್ರೊ.ಲಕ್ಷ್ಮೀಕಾಂತ ಕಳೆದಬಾರಿ 12ಬೇಡಿಕೆಗಳನ್ನು ಕಾಲೇಜಿನ ಪರವಾಗಿ ಜನಪ್ರತಿನಿಧಿಗಳಿಗೆ ನೀಡಿದ್ದು ಅದರಲ್ಲಿ ಪ್ರಮುಖವಾದ ಮೂರು ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. 2ಕೋಟಿರೂ. ವೆಚ್ಚದಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣ, 20ಲಕ್ಷರೂ.ಅಂದಾಜಿನಲ್ಲಿ ವಿದ್ಯಾರ್ಥಿಗಳ ಶೌಚಾಲಯ ನಿರ್ಮಾಣಗೊಳ್ಳುತ್ತಿದೆ. ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡರ 6ಲಕ್ಷರೂ.ಗಳ ಅನುದಾನದಲ್ಲಿ ಕುಡಿಯುವ ನೀರು ವ್ಯವಸ್ಥೆಯಾಗುತ್ತಿದೆ. ಜಿಲ್ಲೆಯಲ್ಲೆ ದೊಡ್ಡ ಕಾಲೇಜು ಆಗಿದ್ದು ಇಲ್ಲಿಯ ಬೇಡಿಕೆಯ ಬಗ್ಗೆ ಹೆಚ್ಚಿನ ಪ್ರಯತ್ನ ನಿರೀಕ್ಷಿಸುವುದಾಗಿ ನುಡಿದರು.
ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ದೂರದರ್ಶನ ವಾಹಿನಿಯ ಜನಪ್ರಿಯ ಕಲಾವಿದ ಕಂಬದರoಗಯ್ಯ ಮಾತನಾಡಿ, ‘ಏನಾದರೂ ಆಗು ಮೊದಲು ಮಾನವನಾಗು..’ ಎಂಬ ನಾಣ್ನುಡಿಯಂತೆ ಬದುಕಬೇಕು.ಕಾಲೇಜು ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ರೂಢಿಸಿಕೊಂಡು ಸಮಾಜಕ್ಕೆ ಉಪಯುಕ್ತರಾಗಿ ಬದುಕಬೇಕೆಂದರು.
ಕುವೆoಪು ವಿ.ವಿ. ಎನ್ ಎಸ್ ಎಸ್ ಸಂಯೋಜನಾಧಿಕಾರಿ ಡಾ.ಶುಭಮರವಂತೆ ಉಪನ್ಯಾಸ ನೀಡಿ, ವಿದ್ಯಾರ್ಥಿಗಳ ಮನಸ್ಸನ್ನು ಅರ್ಥಮಾಡಿಕೊಂಡು ಅವರೊಡನೆ ಒಳ್ಳೆಯ ಬಾಂಧವ್ಯ ಉಪನ್ಯಾಸಕರು ಹೊಂದಬೇಕು. ಇದರಿoದ ವಿದ್ಯಾರ್ಥಿಗಳ ಸೃಜನಶೀಲತೆ ಹೆಚ್ಚಿಸಬಹುದು. ಜಾನಪದ ಸೊಗಡನ್ನು ಅರಿತಾಗ ಮನಸ್ಸು ಮುದಗೊಳ್ಳುತ್ತದೆ. ಜಾನಪದವೇ ಸಾಹಿತ್ಯ ಮತ್ತು ಸಂಸ್ಕೃತಿಯ ಜೀವಾಳ. ವಿದ್ಯಾರ್ಥಿಗಳು ಸಕರಾತ್ಮಕ ಮನೋಭಾವ ಬೆಳೆಸಿಕೊಳ್ಳ ಬೇಕೆಂದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಆರ್.ಎ.ಪುಷ್ಪಭಾರತಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ 3000ಹೆಚ್ಚು ವಿದ್ಯಾರ್ಥಿಗಳಿಲ್ಲಿ ಕಲಿಯುತ್ತಿದ್ದು ಅನೇಕರು ಉತ್ತಮ ಸಾಧನೆ ಮಾಡಿದ್ದಾರೆ. ವಿ.ವಿ.ಮಟ್ಟದಲ್ಲಿ ರ‍್ಯಾಂಕ್ ಪಡೆಯುವುದರ ಜೊತೆಗೆ ವಿವಿಧ ಆಟೋಟ ಸ್ಪರ್ಧೆಗಳಲ್ಲೂ ಸಾಧನೆ ತೋರುವ ಮೂಲಕ ಹೆಮ್ಮೆ ಮೂಡಿಸಿದ್ದಾರೆಂದರು.
ಕಾಲೇಜಿನ ಸಾಂಸ್ಕೃತಿಕ ವೇದಿಕೆ ಸಂಚಾಲಕ ಎಸ್.ಸೋಮಶೇಖರ್ ಸ್ವಾಗತಿಸಿ, ಯುವರೆಡ್‌ಕ್ರಾಸ್ ಸಂಚಾಲಕ ಡಾ.ಎಂ.ಲೋಕೇಶ್ ವಂದಿಸಿದರು. ಕ್ರೀಡಾವಿಭಾಗದ ಸಂಚಾಲಕ ಕುಮಾರಸ್ವಾಮಿ, ಎನ್.ಸಿ.ಸಿ ಅಧಿಕಾರಿ ಕಾಂತರಾಜು,
ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಸತೀಶ್, ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರಾದ ಬಿ.ತಿಪ್ಪೇರುದ್ರಪ್ಪ, ರಾಜಶೇಖರ್ ಮತ್ತಿತರರು ವೇದಿಕೆಯಲ್ಲಿದ್ದರು.ಕಾರ್ತೀಕ ಮತ್ತು ತಂಡದವರು ಪ್ರಾರ್ಥಿಸಿದರು.
——————-ಪಿ.ಎನ್.ಬಿ