ಚಿಕ್ಕಮಗಳೂರು-ಸಹಕಾರಿ ಸಂಸ್ಥೆಯಲ್ಲಿ ರಾಜಕೀಯವನ್ನು ಬೆರೆಸದೇ,ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಅಧಿಕಾರದ ಹುದ್ದೆ ಅಲಂಕರಿಸುವ ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿ ಸಬೇಕು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಹೌಸಿಂಗ್ ಬೋರ್ಡ್ ಸಮೀಪದ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟದ ಜನತಾ ಬಜಾರ್‌ನ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡ ಟಿ.ಕೆ.ಜಯರಾಜ್ ಅರಸ್ ಅವರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.
ಜನತಾ ಬಜಾರ್ ಶಾಖೆ ಅನೇಕ ವರ್ಷಗಳ ಹಿಂದೆ ಆಜಾದ್‌ಪಾರ್ಕ್ ವೃತ್ತದ ಸಮೀಪ ಕಚೇರಿ ಹೊಂದಿತ್ತು. ಆ ಕಾಲದಲ್ಲಿ ಸರದಿಸಾಲಿನಲ್ಲಿ ನಿಂತು ಲೇಖಕ್ ಪುಸ್ತಕಗಳನ್ನು ಖರೀದಿಸಬೇಕಿತ್ತು. ಇಂದು ಕಚೇರಿ ಹೌಸಿಂಗ್ ಬೋರ್ಡ್ನಲ್ಲಿ ಕಚೇರಿ ಆರಂಭಿಸಿದೆ.ಮುಂದೆ ಬಜಾರ್‌ನಲ್ಲಿ ಇನ್ನಿತರೆ ವಸ್ತುಗಳನ್ನು ಮಾರಾಟದ ವ್ಯವಸ್ಥೆ ಕಲ್ಪಿಸಿದರೆ ಸಂಪೂರ್ಣ ಸಹಕಾರವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಜನತಾ ಬಜಾರ್ ಒಂದು ಕಾಲದಲ್ಲಿ ಧರ್ಮೇಗೌಡರು ಅಧ್ಯಕ್ಷರಾದ ವೇಳೆಯಲ್ಲಿ ವೈಭವದಿಂದ ಮುನ್ನೆಡೆದಿತ್ತು.ಅಲ್ಲದೇ ಹೌಸಿಂಗ್ ಬೋರ್ಡ್ ಸಮೀಪ ಸುಮಾರು 2 ಎಕರೆ ಜಾಗವನ್ನು ಉಳಿಸಿರುವ ಕೊಡುಗೆ ಅವರಿಗೆ ಸಲ್ಲುತ್ತದೆ ಎಂದ ಅವರು ಆ ಸ್ಥಳದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿ ಸಹಕಾರಿ ರತ್ನ ಎಸ್. ಎಲ್.ಧರ್ಮೇಗೌಡರ ಹೆಸರನ್ನು ನಾಮಕರಣಗೊಳಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನೂತನ ಅಧ್ಯಕ್ಷ ಟಿ.ಕೆ.ಜಯರಾಜ್ ಅರಸ್ ಮಾತನಾಡಿ, ಜನತಾ ಬಜಾರಿನ ನಿರ್ದೇಶಕರ ಹಾಗೂ ಶಾಸಕರ ಸಂಪೂರ್ಣ ಸಹಕಾರದಿಂದ ಸಂಘವನ್ನು ಲಾಭದಾಯಕದತ್ತ ಕೊಂಡೊಯ್ಯಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಅಲ್ಲದೇ ಧರ್ಮೇಗೌಡರ ಉಳಿಸಿಕೊಟ್ಟಿರುವ ಜಾಗವನ್ನು ಬಜಾರಿನ ಉತ್ತಮ ಕಾರ್ಯಕ್ಕೆ ಬಳಕೆ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ.ಎಂ.ಎಫ್. ನಿರ್ದೇಶಕ ಸುನಲ್‌ಧರ್ಮೇಗೌಡ, ಸಿಡಿಎ ಅಧ್ಯಕ್ಷ ಮೊಹಮ್ಮದ್ ನಯಾಜ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ|| ಡಿ.ಎಲ್.ವಿಜಯ್‌ಕುಮಾರ್, ವಕ್ತಾರ ಹೆಚ್.ಹೆಚ್.ದೇವ ರಾಜ್, ಜಿಲ್ಲಾ ವಕ್ಪ್ ಮಂಡಳಿ ಅಧ್ಯಕ್ಷ ಶಾಹೀದ್ ಮಹಮ್ಮದ್ ರಜ್ವಿ, ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ. ಎಲ್. ಮೂರ್ತಿ, ಬಜಾರಿನ ಉಪಾಧ್ಯಕ್ಷ ಪುಟ್ಟೇಗೌಡ, ಚುನಾವಣಾಧಿಕಾರಿ ಕೆ.ವಿ.ಕಲ್ಲೇಶಪ್ಪ, ನಿರ್ದೇಶಕರು ಗಳಾದ ಮಂಜುನಾಥ್, ಮಲ್ಲೇದೇವರ ಪ್ಪ, ಕುಸುಮ, ಶಂಕರಮೂರ್ತಿ, ಮಲ್ಲೇಶಯ್ಯ, ಉಮೇಶ್, ಲೋಕೇಶ್, ಸುಧಾಪೈ, ಶೋಭಾ, ಓಂಕಾರ ಮೂರ್ತಿ, ಕಾರ್ಯದರ್ಶಿ ಚಿದಾನಂದ್ ಮತ್ತಿತರರು ಹಾಜರಿದ್ದರು.
———–-ಸುರೇಶ್