ಚಿಕ್ಕಮಗಳೂರು-ತಾಲ್ಲೂಕಿನಲ್ಲಿ ಸರ್ಕಾರ ಜವಳಿ ಪಾರ್ಕ್ ಯೋಜನೆಗೆ ಗುರುತಿಸಿರುವ ಜಾಗವನ್ನು ತಡೆಹಿಡಿಯಬೇಕು ಎಂದು ದಲಿತ ಸಂಘರ್ಷ ಸಮಿತಿ ಮುಖಂಡರುಗಳು ಕಂದಾಯ ಇಲಾಖೆ ರಾಜ್ಯ ಪ್ರಧಾನ ಕಾರ್ಯದರ್ಶಿಗೆ ಅಪರ ಜಿಲ್ಲಾಧಿಕಾರಿ ನಾರಾಯಣಕನಕರಡ್ಡಿ ಮುಖಾಂತರ ಸೋಮವಾರ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ,ತಾಲ್ಲೂಕಿನ ಲಕ್ಯಾ ಹೋಬಳಿಯ ಹಿರೇಗೌಜ ಗ್ರಾಮದ ಸರ್ವೆ ನಂ.111 ರಲ್ಲಿ ಜವಳಿ ಪಾರ್ಕ್ 15 ಎಕರೆ ಜಾಗವನ್ನು ನಿಗಧಿಪಡಿಸಿ ಆದೇಶಿಸಿರುವುದು ಸರಿ. ಆದರೆ ಆ ಜಾಗದಲ್ಲಿ ಹಿರೇಗೌಜದ ಸುತ್ತಮುತ್ತಲಿನ ದಲಿತ ಕುಟುಂಬಗಳು ಮೂರು ದಶಕಗಳಿಂದ ಭೂಸಾಗುವಳಿ ಮಾಡಿಕೊಂಡಿವೆ ಎಂದರು.
ದಲಿತರನ್ನು ಭೂಮಿಯಿಂದ ವಂಚಿತರನ್ನಾಗಿ ಮಾಡುವ ಉದ್ದೇಶದಿಂದ ಕೆಲವು ಕಾಣದ ಕೈಗಳು ಸಂಚು ರೂಪಿಸಿ ಆ ಸ್ಥಳವನ್ನೇ ಗುರುತು ಮಾಡಿದೆ. ಜವಳಿ ಪಾರ್ಕ್ ನಿರ್ಮಾಣಗೊಂಡರೆ ಉದ್ಯೋಗ ಸಿಗಲಿದೆ ಎಂಬ ಸುಳ್ಳು ವದಂತಿ ಹಬ್ಬಿಸಿ ದಲಿತರ ಭೂಮಿಯನ್ನು ಕಬಳಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.
ಆ ಪ್ರದೇಶದ ಸುತ್ತಮುತ್ತಲಿನಲ್ಲಿ ಅನೇಕ ಸರ್ಕಾರಿ ಸ್ವೌಮ್ಯದ ಜಾಗವಿದೆ ಆದರೂ ಅವುಗಳನ್ನು ಗುರುತಿಸದೇ, ಭೂಮಿಯನ್ನೇ ನಂಬಿಕೊoಡ ಬದುಕು ಸಾಗಿಸುತ್ತಿರುವ ದಲಿತರ ಕುಟುಂಬಗಳ ಭೂಮಿಗಳನ್ನು ಕಿತ್ತುಕೊಳ್ಳುವ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ದೂರಿದರು.
ಕೂಡಲೇ ಸರ್ಕಾರ ಹಿರೇಗೌಜ ಗ್ರಾಮದ ಜಾಗದಲ್ಲಿ ನಿರ್ಮಿಸುತ್ತಿರುವ ಜವಳಿ ಪಾರ್ಕ್ ಯೋಜನೆಯನ್ನು ತಡೆಹಿಡಿಯಬೇಕು.ಒಂದು ವೇಳೆ ದಲಿತರ ಭೂಮಿ ಕಬಳಿಸಲು ಯತ್ನಿಸಿದರೆ ದಸಂಸ ರೈತರೊಂದಿಗೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ದ.ಸಂ.ಸ ಜಿಲ್ಲಾ ಸಂಘಟನಾ ಸಂಚಾಲಕರಾದ ಮಂಜಯ್ಯ, ಯು.ಬಿ.ರಮೇಶ್, ಮುಖಂಡರುಗಳಾದ ಆರ್.ಶೇಖರ್, ಸೋಮಶೇಖರ್, ಎನ್.ಆರ್.ಪುರ ಶಿವಣ್ಣ ಮತ್ತಿತರರಿದ್ದರು.
——————-ಸುರೇಶ್