ಚಿಕ್ಕಮಗಳೂರು-ಪವಿತ್ರ ವಿದ್ಯಾಕೇಂದ್ರಗಳು ಜಾತಿ, ಧರ್ಮವನ್ನು ಮೀರಿರುವ ಕ್ಷೇತ್ರ. ಮುಗ್ದ ಮಕ್ಕಳ ಮನಸ್ಸಿನಲ್ಲಿ ಧಾರ್ಮಿಕ ಭಾವನೆ ಕೆರಳಿಸುವ ಅಥವಾ ಮತೀಯ ವಿಷಯಗಳನ್ನು ಬಿತ್ತದಂತೆ ವಿಶ್ವಮಾನವರಾಗಿಸುವ ಸಂದೇಶ ಬೋಧಿಸಬೇಕು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಜ್ಞಾನರಶ್ಮಿ ಆಂಗ್ಲಮಾಧ್ಯಮ ಶಾಲೆಯ 21ನೇ ಶಾಲಾ ವಾರ್ಷಿ ಕೋತ್ಸವ ಕಾರ್ಯಕ್ರಮದಲ್ಲಿ ಮಂಗಳವಾರ ಪಾಲ್ಗೊಂಡು ಅವರು ಮಾತನಾಡಿದರು.
ಪಠ್ಯದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಕಲೆ, ಸಂಗೀತ, ಭಕ್ತಿಗೀತೆ ಹಾಗೂ ಭಾವಗೀತೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು. ಪಠ್ಯವು ಮನಸ್ಸಿನ ಶಕ್ತಿ ವೃದ್ದಿಸಿದರೆ, ಕ್ರೀಡಾಕೂಟವು ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ಹೆಚ್ಚಿಸಿ ಆತ್ಮಾಬಲ ತುಂಬಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಲ್ಲಿ ಕಲಿಕೆ ಹಾಗೂ ಗ್ರಹಿಸುವ ಶಕ್ತಿ ಇರಲಿದೆ. ಇವುಗಳನ್ನು ಗುರುತಿಸುವ ಕಾರ್ಯ ಶಿಕ್ಷಕರು ಪ್ರಾಮಾಣಿಕವಾಗಿ ಮಾಡಬೇಕು. ಪಾಲಕರು ಎಳೆವಯಸ್ಸಿನಲ್ಲೇ ಸಂಸ್ಕಾರ, ಸಂಪ್ರದಾಯ ಬೋಧಿಸಿದರೆ ಭವಿಷ್ಯದಲ್ಲಿ ದೇಶದ ಸತ್ಪ್ರಜೆಗಳಾಗುವ ಹಾಗೂ ಬುದ್ಧಿವಂತ ನಾಗರೀಕರಾಗಿ ಜೀವಿಸಲು ಸಾಧ್ಯ ಎಂದು ಹೇಳಿದರು.
ಮಕ್ಕಳು ಬಾಲ್ಯದಲ್ಲೇ ಗುರುಗಳು, ಪಾಲಕರು ಹಾಗೂ ದೇಶವನ್ನು ಗೌರವಿಸುವ ಗುಣ ಹೊಂದಬೇಕು. ಹಂತ ಹಂತವಾಗಿ ವಿದ್ಯಾಭ್ಯಾಸದ ಬಳಿಕ ಸಮಾಜಕ್ಕೆ ಮಾದರಿ ಪ್ರಜೆಗಳಾಗಬೇಕು. ವೃದ್ದಾಪ್ಯದಲ್ಲಿ ತಂದೆ- ತಾಯಿಯರಿಗೆ ಆಸರೆಯಾಗಿ ಬದುಕಿದರೆ ಪ್ರತಿಯೊಬ್ಬರು ಜೀವನ ಸಾರ್ಥಕ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಗುಣಮಟ್ಟ ಶಿಕ್ಷಣವು ಮಕ್ಕಳಿಗೆ ಒದಗಿಸುವುದು ಸವಾಲಾಗಿದೆ. ಆ ನಿಟ್ಟಿನಲ್ಲಿ ಜ್ಞಾನರಶ್ಮಿ ಶಾಲೆ ಬಡವ, ಮಧ್ಯಮ ವರ್ಗದ ಮಕ್ಕಳಿಗೆ ಅತ್ಯಂತ ಕಡಿಮೆ ದರದಲ್ಲಿ ಗುಣಮಟ್ಟದ ಶಿಕ್ಷಣ ನೀಡಿ ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ವಿಷಯ. ಮುಂದೆ ಇನ್ನಷ್ಟು ಹೆಚ್ಚು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸುವಂತಾಗಲೀ ಎಂದು ಆಶಿಸಿದರು.
ಬ್ರಹ್ಮಕುಮಾರೀಸ್ ಸಂಸ್ಥೆ ಜಿಲ್ಲಾ ಸಂಚಾಲಕಿ ಭಾಗ್ಯ ಮಾತನಾಡಿ ಮಕ್ಕಳನ್ನು ಸನ್ನಡತೆ, ಸಂಸ್ಕಾರಕ್ಕೆ ಒಳಪಡಿಸುವುದು ಸುಲಭದ ಮಾತಲ್ಲ. ಪಾಲಕರ ನಂತರ ಶಿಕ್ಷಕರು ಮಹತ್ತರ ಜವಾಬ್ದಾರಿ ವಹಿಸುತ್ತಾರೆ. ಹೀಗಾಗಿ ಮುಂದಿನ ಭವ್ಯಭಾರತದ ಪ್ರಜೆಗಳಾದ ಮಕ್ಕಳಿಗೆ ಸಾಮಾಜಿಕ ಮೌಲ್ಯ ಅಳವಡಿಸಿ ಮಕ್ಕಳ ಮನಸ್ಸಿನ ಹಸಿ ಮಣ್ಣನ್ನು ಗಟ್ಟಿಕೊಳಿಸಬೇಕು ಎಂದು ಹೇಳಿದರು.
ಇತ್ತೀಚೆಗೆ ಮನುಷ್ಯ ಅಧಿಕಾರ, ಐಶರಾಮಿ ಜೀವನದ ನಡುವೆ ಖಿನ್ನತೆ, ಜಿಗುಪ್ಸೆ, ನಿರಾಸೆಗಳಿಂದ ಸ್ಥಿರತೆ ಕಳೆದುಕೊಂಡಿದ್ದಾನೆ. ಹಾಗಾಗಿ ಮಾನಸಿಕ ನೆಮ್ಮದಿ, ಶಾಂತಿಗಾಗಿ ಯೋಗ, ಆಧ್ಯಾತ್ಮಕ ಚಿಂತನೆ ಮೈಗೂಡಿಸಿಕೊಳ್ಳಬೇಕು. ಕೇವಲ ದುಡಿಮೆಗಾಗಿ ಬದುಕದೇ ವೈಯಕ್ತಿಕ ಜೀವನಕ್ಕೆ ಕೆಲವು ಸಮಯ ಕಾಯ್ದಿರಿಸಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಸಿ.ರವೀಶ್ ಮಾತನಾಡಿ, ವಿದ್ಯಾಭ್ಯಾಸದಲ್ಲಿ ಜ್ಞಾನ ಸಂಪಾದಿಸಲು ನಿರಂತರ ಪರಿಶ್ರಮ, ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಶಿಕ್ಷಕರು ಬೋಧಿಸುವ ವಿಷಯಗಳಲ್ಲಿ ಪರಿಣಿತರಾಗಿ ಮುನ್ನೆಡೆದರೆ ಹಂತ ಹಂತವಾಗಿ ಶೈಕ್ಷಣಿಕವಾಗಿ ಬೆಳವಣಿಗೆ ಹೊಂದಲು ಸಹಕಾರಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜ್ಞಾನರಶ್ಮಿ ಶಾಲೆ ಪ್ರಾಂಶುಪಾಲೆ ಹೆಚ್.ಪಾಲಾಕ್ಷಮ್ಮ ಸತತ ಇಪ್ಪತ್ತೊಂದು ವರ್ಷಗಳಿಂದ ಮಕ್ಕಳ ಸಾಮಾಜಿಕ, ಶೈಕ್ಷಣಿಕ ಬೆಳವಣಿಗಾಗಿ ಕಡಿಮೆ ವೆಚ್ಚದಲ್ಲಿ ಶಿಕ್ಷಣ ಬೋಧಿಸಲಾಗುತ್ತಿದ್ದು ಹಾಲಿ ಶಾಸಕರು ಸೇರಿದಂತೆ ಸ್ಥಳೀಯ ಜನಪ್ರತಿಧಿಗಳು ಬಹಳಷ್ಟು ಸಹಕಾರ ನೀಡಿ ಪ್ರೋತ್ಸಾಹಿಸಿರುವುದು ಸಂತಸದ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಹಿರಿಯ ಅಭಿಯಂತ ಹೆಚ್.ಕರುಣೇಶಪ್ಪ, ನಗರಸಭಾ ಸದಸ್ಯರಾದ ಸೈಯದ್ ಜಾವೀದ್, ಜೆ.ರಾಜು, ಡಿ.ಯು.ಎಸ್.ಎಂ.ಎ. ಅಧ್ಯಕ್ಷ ನರೇಂದ್ರ ಪೈ, ಭೂಮಿಕಾಟಿವಿ ಸಂಪಾದಕ ಅನಿಲ್ ಆನಂದ್, ರೋಟರಿ ಕ್ಲಬ್ ಅಧ್ಯಕ್ಷ ಎಂ. ಎಲ್.ಸುಜಿತ್, ಜ್ಞಾನರಶ್ಮಿ ಶಾಲೆ ಕಾರ್ಯದರ್ಶಿ ನಂದಕು ಮಾರ್, ಆಡಳಿತಾಧಿಕಾರಿಎನ್.ಪಿ.ಲಿಖಿತ್, ಪಶು ವೈದ್ಯಕೀಯ ಇಲಾಖೆ ಡಾ|| ಕೆ.ಆರ್.ರಶ್ಮಿ ಮತ್ತಿತರರಿದ್ದರು.
——–ಸುರೇಶ್