ಚಿಕ್ಕಮಗಳೂರು/ಕಳಸ-ಮೂಲನಿವಾಸಿ ದಲಿತ ಸಮುದಾಯಕ್ಕೆ ನಿವೇಶನ,ಸ್ಮಶಾನ ಹಾಗೂ ಸಮುದಾಯ ಭವನಕ್ಕೆ ಜಾಗವನ್ನು ಕಾಯ್ದಿರಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಶಿರಸ್ತೇದಾರ್ ಹೇಮಂತ್‌ಕುಮಾರ್‌ಗೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಪಿ.ಟಿ.ಚಂದ್ರಶೇಖರ್ ಕಳಸ ತಾಲ್ಲೂಕಿನ ಮಾವಿನಕೆರೆ ಗ್ರಾಮದಲ್ಲಿ ಒಟ್ಟು 30 ಎಕರೆ ಗೋಮಾಳದಲ್ಲಿ 10 ಎಕರೆ ಜಾಗವನ್ನು ನಿವೇಶನ ರಹಿತರಿಗೆ ಸೂರು ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಕಳಸದ ಖಾಸಗೀ ವ್ಯಕ್ತಿಯೊಬ್ಬರು ಸಮುದಾಯಕ್ಕೆ ಮೀಸಲಿರಿಸಿದ್ಧ ಜಾಗವನ್ನು ದಲಿತ ಜನಾಂಗದ್ದಲ್ಲ ಎಂದು ಹೇಳಿ ಚೌಂಡರಿಯನ್ನು ಕಿತ್ತು ಹಾಕಿದ್ದಾರೆ.ಅಲ್ಲದೇ ಅರಣ್ಯ ಇಲಾಖೆ ಅಧಿಕಾರಿಗಳನ್ನು ಮುಂದಿರಿಸಿ ನಿವೇಶನಕ್ಕೆ ಬೇಲಿ ಹಾಕದಂತೆ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.
ಈ ಸಂಬoಧ ಅರಣ್ಯ ಇಲಾಖೆಗೆ ವಿಚಾರಿಸಿದರೆ ಜಾಗವು ಇಲಾಖೆಗೆ ಸಂಬoಧಿಸಿದೆ.ನೀವು ಮೂಲ ದಲಿತರು ಎಂಬುದಕ್ಕೆ ಸಾಕ್ಷಿ ತೋರಿಸಿ ಎಂದು ಉಡಾಫೆ ಉತ್ತರ ನೀಡುತ್ತಿದ್ದು ಇದನ್ನು ಮೀರಿ ಮುನ್ನೆಡೆದರೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಬೆದರಿಕೆವೊಡ್ಡಲಾಗುತ್ತಿದೆ ಎಂದರು.
ಕೊಪ್ಪ ತಾಲ್ಲೂಕಿನ ಕೆಳಕುಳಿ ಗ್ರಾಮದ ಸಣ್ಣಪ್ಪ ಮತ್ತು ಜ್ಯೋತಿ ಎಂಬುವವರಿಗೆ ತಲಾ 2ಎಕರೆ ಜಾಗ ಮಂಜೂರಾಗಿ ಅನೇಕ ವರ್ಷಗಳಿಂದ ಬೆಳೆ ಬೆಳೆಯುತ್ತಿದ್ದಾರೆ. ಆದರೀಗ ಅರಣ್ಯ ಇಲಾಖೆ ಏಕಾಏಕಿ ಧಾವಿಸಿ ಜೆಸಿಬಿಯಿಂದ ಜಮೀನಿಗೆ ತೊಟ್ಟಿಲು ಗುಂಡಿಗಳನ್ನು ಹೊಡೆಸಿದ್ದಾರೆ. ವಿಚಾರಿಸಿದರೆ ಈ ಜಮೀನು ಸರ್ಕಾರಿ ಜಾಗವೆಂದು ಹೇಳಿ ತಹಶೀಲ್ದಾರ್ ಬಳಿ ವಿಚಾರಿಸಿಕೊಳ್ಳಿ ಎನ್ನುತ್ತಿದ್ದಾರೆ.
ಹೀಗಾಗಿ ಕೂಡಲೇ ಕೆಳಕುಳಿ ಗ್ರಾಮದಲ್ಲಿ ಜಮೀನನ್ನು ಸ್ಥಳ ಪರಿಶೀಲಿಸಿ, ಮತ್ತೊಮ್ಮೆ ಸರ್ವೆ ನಡೆಸಿ ಚಕ್ಕುಬಂಧಿ ಗುರುತಿಸಿ ನೊಂದ ಕುಟುಂಬಗಳಿಗೆ ಪಕ್ಕಾಪೋಡಿ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಸಂಸ ಸಹ ಸಂಚಾಲಕ ಅಶೋಕ್ ರಾಜರತ್ನಂ, ಕಳಸ ವಿಭಾಗ ಸಂಚಾಲಕ ಹೂವಯ್ಯ, ಮುಖಂಡರಾದ ಮಂಜುನಾಥ್, ನಂದೀಶ್, ಅಶೋಕ್ ಮತ್ತಿತರರಿದ್ದರು.
———ಸುರೇಶ್