ಚಿಕ್ಕಮಗಳೂರು-ಕನ್ನಡಿಗರಿಂದಲೇ ಕನ್ನಡ ಭಾಷೆ ನಿರ್ಲಕ್ಷಕ್ಕೆ ಒಳಗಾಗಿದೆ-ಡಾ.ಶ್ರೀಪತಿ ಹಳಗುಂದ

ಚಿಕ್ಕಮಗಳೂರು-ಕನ್ನಡಿಗರಿಂದಲೇ ಕನ್ನಡ ಭಾಷೆ ನಿರ್ಲಕ್ಷಕ್ಕೆ ಒಳಗಾಗಿದ್ದು ಕನ್ನಡಿಗರು ಇಂಗ್ಲಿಷ್ ವ್ಯಾಮೋಹದ ಮಡಿವಂತಿಕೆ ಬಿಟ್ಟು ಹೊರಬಂದಾಗ ಮಾತ್ರ ಕನ್ನಡದ ಬೆಳವಣಿಗೆ ಸಾಧ್ಯ ಎಂದು ಖ್ಯಾತವಾಗ್ಮಿ ಮತ್ತು ಲೇಖಕ ಡಾ. ಶ್ರೀಪತಿ ಹಳಗುಂದ ಹೇಳಿದ್ದಾರೆ.

ಚಿಕ್ಕಮಗಳೂರಿನ ಲಯನ್ಸ್ ಸಂಸ್ಥೆ, ಸಿವಿಲ್ ಇಂಜಿನಿಯರಿoಗ್ ಸಂಘ, ಮತ್ತು ಎಂ.ಇ.ಎಸ್ ವಿದ್ಯಾ ಸಂಸ್ಥೆ ಸಹಯೋಗದಲ್ಲಿ ಎಂ.ಇ.ಎಸ್ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಮಧುಮೇಹ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಕನ್ನಡಿಗರು ಇಂಗ್ಲೀಷ್ ವ್ಯಾಮೋಹಕ್ಕೆ ಬಲಿ ಆಗುತ್ತಿರುವ ಪರಿಣಾಮ ಕನ್ನಡ ಮಾತನಾಡಲು ಕನ್ನಡಿಗರಲ್ಲೇ ಕೇಳಿರಿಮೆ ಇದ್ದು ಪರಭಾಷಿಕರಿಂದ ಕನ್ನಡ ಭಾಷೆಯನ್ನು ಕೊಲ್ಲುವ ಹುನ್ನಾರ ನಡೆದಿದೆ ಎಂದರು.

ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದ್ದು ಪೆನ್ನು ಪೇಪರ್ ಇಲ್ಲದ ಕಾಲದಲ್ಲೇ ನಮ್ಮ ಪೂರ್ವಜರು ಕನ್ನಡ ಭಾಷೆಯನ್ನು ಕಟ್ಟಿ ಬೆಳೆಸಿದ್ದಾರೆ.ಸದ್ಯ ಅನ್ಯ ಭಾಷೆಗಳ ಹಾವಳಿಯಿಂದ ಕನ್ನಡ ಭಾಷೆಯ ರಕ್ಷಣೆಯೇ ಒಂದು ಸವಾಲಾಗಿ ಪರಿಣಮಿಸಿದೆ. ಕನ್ನಡ ಭಾಷೆ ಎಂಬುದು ಕೇವಲ ಸಂವಾಹನ ಅಲ್ಲ ಅದೊಂದು ಸಂಸ್ಕೃತಿ, ಎಷ್ಟೇ ಭಾಷೆಗಳಿದ್ದರೂ ಕನ್ನಡ ಯಾವತ್ತಿಗೂ ಸಾಯುವುದಿಲ್ಲ. ಇಂತಹ ಇತಿಹಾಸವುಳ್ಳ ಕನ್ನಡ ಭಾಷೆಯನ್ನು ಬಳಸಿ ಬೆಳೆಸುವ ಜವಾಬ್ದಾರಿ ಕನ್ನಡಿಗರ ಮೇಲಿದೆ ಎಂದು ತಿಳಿಸಿದರು.

ಮಕ್ಕಳಲ್ಲಿ ಇತ್ತೀಚೆಗೆ ಕಂಡುಬರುವ ಮಧುಮೇಹ ಕುರಿತು ಖ್ಯಾತ ಮಕ್ಕಳ ತಜ್ಞ ಎಂಎಸ್ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡರು ಮಾತನಾಡಿ, ಮಕ್ಕಳಲ್ಲಿ ಹೆಚ್ಚುತ್ತಿರುವ ಮಧುಮೇಹ ರೋಗಕ್ಕೆ ಬೀದಿ ಬದಿಯ ತಿಂಡಿ ತಿನಿಸುಗಳ ಸೇವನೆ ಹಾಗು ಮಕ್ಕಳಲ್ಲಿ ಚಟುವಟಿಕೆ ಇಲ್ಲದಿರುವುದೇ ಕಾರಣ ಎಂದು ತಿಳಿಸಿದರು.

ವಿಶ್ವದಲ್ಲಿರುವ 7000ಭಾಷೆಗಳಲ್ಲಿ ಕನ್ನಡ ಭಾಷೆ 40ನೇ ಸ್ಥಾನದಲ್ಲಿದೆ. ಅತ್ಯಂತ ಪ್ರಮುಖ ಭಾಷೆಗಳಲ್ಲಿ ಕನ್ನಡ ಭಾಷೆಯು ಕೂಡ ಒಂದಾಗಿದ್ದು ಕನ್ನಡ ಪ್ರತ್ಯೇಕ ಲಿಪಿಯನ್ನು ಹೊಂದಿದೆ. ಇದರ ಜೊತೆಗೆ 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವುದು ಕನ್ನಡ ಭಾಷೆಗೆ ಹೆಗ್ಗಳಿಕೆ ಇದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ಸ್ ಕ್ಲಬ್ ಅಧ್ಯಕ್ಷ ಕೆ. ಪುಷ್ಪರಾಜ್ ಮಾತನಾಡಿ, ಕರ್ನಾಟಕದಲ್ಲಿ ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ಒಂದು ಹಬ್ಬವಾಗಿ ಆಚರಿಸುತ್ತಿದ್ದು ಇಂತಹ ಸನ್ನಿವೇಶದಲ್ಲಿ ಕನ್ನಡ ನಾಡು ನುಡಿ ನೆಲ ಜಲ ಭಾಷೆಯ ರಕ್ಷಣೆ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.

ಲಯನ್ಸ್ ಸಂಸ್ಥೆಯ ಪ್ರಾಂತೀಯ ಅಧ್ಯಕ್ಷ ಗೋಪಾಲಗೌಡ ಮಾತನಾಡಿ, ಸೇವೆ ಮಾಡುವ ಸಂಘಟನೆಗಳಲ್ಲಿ ವಿಶ್ವದಲ್ಲೇ ಲಯನ್ಸ್ ಕ್ಲಬ್ ಅಗ್ರಸ್ಥಾನದಲ್ಲಿದ್ದು ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜಮುಖಿ ಕೆಲಸ ಮಾಡಬೇಕೆಂಬ ಮನೋಭಾವ ಉಳ್ಳವರು ಲಯನ್ ಸಂಸ್ಥೆಯನ್ನು ಸೇರಬೇಕೆಂದರು.

ಮಲೆನಾಡು ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಡಿ.ಎಲ್. ವಿಜಯಕುಮಾರ್ ಮಾತನಾಡಿ, ಚಿಕ್ಕಮಗಳೂರು ಲಯನ್ಸ್ ಸಂಸ್ಥೆ ಮತ್ತು ಸಿವಿಲ್ ಇಂಜಿನಿಯರಿoಗ್ ಸಂಘ ಕನ್ನಡ ರಾಜ್ಯೋತ್ಸವದ ಆಚರಣೆ ಜೊತೆಗೆ ಮಧುಮೇಹದ ಬಗ್ಗೆ ಮಾಹಿತಿ ನೀಡಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ನಮ್ಮ ಕಾಲೇಜಿನಲ್ಲಿ ಹಮ್ಮಿಕೊಂಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯಕ್ರಮ ಎಂದರು.

ಲಯನ್ಸ್ ವಲಯ ಅಧ್ಯಕ್ಷ ಬಿ.ಎನ್. ವೆಂಕಟೇಶ್ ಲಯನ್ಸ್ ಕಾರ್ಯದರ್ಶಿ ಗೋಪಿಕೃಷ್ಣ, ಖಜಾಂಚಿ ಎಂ ಎಂ ಗಿರೀಶ್ ವೇದಿಕೆಯಲ್ಲಿ ಇದ್ದರು.

ಚಿಕ್ಕಮಗಳೂರು ಜಿಲ್ಲಾ ಸಿವಿಲ್ ಇಂಜಿನಿಯರಿoಗ್ ಸಂಘ ಅಧ್ಯಕ್ಷ ಜಿ ರಮೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಸಿವಿಲ್ ಇಂಜಿನಿಯರಿoಗ್ ಸಂಘದ ಉಪಾಧ್ಯಕ್ಷ ಟಿ ನಾರಾಯಣಸ್ವಾಮಿ, ಪೂರ್ವಧ್ಯಕ್ಷ ಗಣೇಶ್, ಲಯನ್ಸ್ ಕ್ಲಬ್‌ನ ಹಿರಿಯ ಸದಸ್ಯರಾದ ಎಂ. ಆರ್. ಕೇಶವಮೂರ್ತಿ ಲಯನ್ಸ್ ಪ್ರೋ. ಜಗದೀಶಪ್ಪ ಲಯನ್ಸ್ ಎಸ್. ಆರ್. ವೈಧ್ಯ, ಲಯನ್ಸ್ ಮಾಜಿ ಅಧ್ಯಕ್ಷ ಸಿ.ಪಿ. ಸುರೇಶ್, ಉಪಾಧ್ಯಕ್ಷ ಸಿ. ಎನ್. ಕುಮಾರ್ ಮಾಜಿ ಖಜಾಂಚಿ ಬಾಲಕೃಷ್ಣ, ಲಯನ್ಸ್ ಕ್ಲಬ್‌ನ ನಜ್ಮಾಆಲಿ, ಲಯನ್ಸ್ ಜಿ. ಶಂಕರ್ ಕುಮಾರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಲೋಕೇಶ್ ಮತ್ತು ಕೌಸರ್ ಪಾತಿಮ ಅವರನ್ನು ಸನ್ಮಾನಿಸಲಾಯಿತು.ಇಂಜಿನಿಯರ್ ಸಂಘದ ಭಾರ್ಗವ ವಂದಿಸಿದರು.

Leave a Reply

Your email address will not be published. Required fields are marked *

× How can I help you?