ಚಿಕ್ಕಮಗಳೂರು-ಕನ್ನಡ ನಾಡಿನಲ್ಲಿ ಜನಿಸಿದ ಪ್ರತಿಯೊಬ್ಬರು ನಾಡಿನ ಪರಂಪರೆ ಮತ್ತು ಭಾಷಾಭಿಮಾನ ಬಗ್ಗೆ ವಿಶೇಷ ಅಭಿಮಾನ ಹಾಗೂ ಗೌರವ ಹೊಂದುವುದನ್ನು ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಕ್ರಿಶ್ಚಿಯನ್ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಆರ್.ಕಾರ್ತೀಕ್ ಹೇಳಿದರು.
ನಗರದ ಜಿಲ್ಲಾ ಕ್ರಿಶ್ಚಿಯನ್ ರಕ್ಷಣಾ ವೇದಿಕೆ ವತಿಯಿಂದ ಸುವರ್ಣ ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕರ ಸಂಘದ ಕಚೇರಿಯಲ್ಲಿ 69ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ನಾಡಿನಲ್ಲಿ ಅನೇಕ ಭಾಷೆಗಳು ಪ್ರಚಲಿತದಲ್ಲಿವೆ.ಮಾತೃಭಾಷೆ ಹೊರತಾಗಿ ಜೀವನ ಹಾಗೂ ವ್ಯವಹಾರಿಕ ಭಾಷೆಯಾಗಿರುವ ಕನ್ನಡವನ್ನು ಬಿಗಿದಪ್ಪಿಕೊಳ್ಳಬೇಕು.ನೆರೆ ರಾಜ್ಯ ಅಥವಾ ವಿದೇಶಕ್ಕೆ ತೆರಳಿದರೂ ಕೂಡಾ ತಾನೊಬ್ಬ ಕನ್ನಡಿಗ ಎಂಬುದನ್ನು ಹೆಮ್ಮೆಯಿಂದ ಪರಿಚಯಿಸಬೇಕು ಎಂದು ಹೇಳಿದರು.
ಕ್ರಿಶ್ಚಿಯನ್ ಧರ್ಮದಲ್ಲಿ ಮಾತೃಭಾಷೆ ಬೇರೆಯಾದರೂ, ಕನ್ನಡಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು.ದೈನಂದಿನ ಚಟುವಟಿಕೆಯಲ್ಲಿ ಹೆಚ್ಚಾಗಿ ಕನ್ನಡವನ್ನು ಬಳಸಿ,ಬೆಳೆಸಿದಾಗ ಮಾತ್ರ ನಾಡಿನ ಇತಿಹಾಸವನ್ನು ಉಳಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕ್ರಿಶ್ಚಿಯನ್ ರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಪುನೀತ್, ಮಹಿಳಾ ಅಧ್ಯಕ್ಷೆ ಮಂಜುಳಾ, ಪದಾಧಿಕಾರಿಗಳಾದ ವಿಜಯ್, ಆನಂದ್, ರೋಬಿನ್, ಚಂದ್ರು, ಬೈರೇಶ್, ಸುಂದರ್ ಬಾಬು, ರವಿ ಏಂಜಲ್ಸ್ ಮತ್ತಿತರರಿದ್ದರು.