ಚಿಕ್ಕಮಗಳೂರು-ಬೆಳಗಾವಿಯ ವಿಕಾಸಸೌಧದಲ್ಲಿ ಜನಪ್ರತಿನಿಧಿಗಳ ಮೇಲೆ ಹಲ್ಲೆಗೆ ಮುಂದಾಗಿ ಗೂಂಡಾವರ್ತನೆ ತೋರಿರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಕನ್ನಡ ಸೇನೆ ಮುಖಂಡರುಗಳು ಸೋಮವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಅಧಿವೇಶನ ನಡೆದ ಘಟನೆಯಲ್ಲಿ ಜನಪ್ರತಿನಿಧಿಗಳಿಗೆ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಶೀಘ್ರವೇ ರಕ್ಷಣೆ ಒದಗಿಸದಿದೇ ವೈಪಲ್ಯತೆ ತೋರಿರುವುದು ಎದ್ದು ಕಾಣುತ್ತಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸಭೆಯಲ್ಲಿ ಜನಸಾಮಾನ್ಯರು, ರೈತರಿಗೆ ಅನುಕೂಲವಾಗುವ ವಿಚಾರಗಳ ಬಗ್ಗೆ ಪೂರಕವಾಗಿ ಚರ್ಚಿಸುವ ಬದಲು ಅನಾವಶ್ಯಕ ಚರ್ಚೆಯಲ್ಲಿ ತೊಡಗಿ ಕಾಲಹರಣ ಮಾಡಿರುವ ಹಿನ್ನೆಲೆ ರಾಜ್ಯ ಸರ್ಕಾರಕ್ಕೆ ಸಾರ್ವಜನಿಕರ ತೆರಿಗೆ ಕೋಟಿಗಟ್ಟಲೇ ಹಣ ನಷ್ಟ ಉಂಟಾಗುತ್ತಿದೆ ಎಂದು ತಿಳಿಸಿದರು.
ಚಳಿಗಾಲದ ಅಧಿವೇಶನ ಹಿನ್ನೆಲೆ ವಿಕಾಸಸೌಧದಲ್ಲಿ ಅತ್ಯಂತ ಸೂಕ್ತ ಭದ್ರತೆ ಹೊಂದಿರುತ್ತದೆ. ಈ ನಡುವೆ ಕೆಲವರು ದಿಡೀರನೇ ಜನಪ್ರತಿನಿಧಿಗಳ ಮೇಲೆ ಹಲ್ಲೆಗೆ ಮುಂದಾಗಿ ಗೂಂಡಾವರ್ತನೆ ತೋರಿದ್ದು ಅಂಥವರನ್ನು ಕೂಡಲೇ ಗಡಿಪಾರು ಮಾಡದಿದ್ದರೆ ಜನಸಾಮಾನ್ಯರ ಗೋಳು ಕೇಳುವವರಾರು ಎಂದು ಪ್ರಶ್ನಿಸಿದರು.
ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನಪರ ಕಾಳಜಿ ವಹಿಸಬೇಕು. ಸ್ವಪಕ್ಷ ಅಥವಾ ವಿರೋಧ ಪಕ್ಷದ ಮಾತಿಗೆ ತಲೆಕೊಡದೇ ಜನಪರ ಕೆಲಸ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ರೀತಿಯ ಪ್ರಕರಣಗಳು ಉದ್ಬವಿಸದಂತೆ ಮುನ್ನೆಚ್ಚರಿಕೆ ವಹಿಸದಿದ್ದರೆ ರಾಜ್ಯಾದ್ಯಂತ ಕನ್ನಡಸೇನೆ ದಂಗೆ ಏಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದೇ ವೇಳೆ ವಿಕಾಸಸೌದದಲ್ಲಿ ಗೂಂಡಾವರ್ತನೆ ತೋರಿರುವವರ ವಿರುದ್ಧ ಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಮ್ ಅಮಟೆ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡಸೇನೆ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ವಕ್ತಾರ ಹುಣಸೇಮಕ್ಕಿ ಲಕ್ಷ್ಮಣ್ , ಮುಖಂಡರುಗಳಾದ ಸತೀಶ್, ಪಾಪಣ್ಣ, ಅನ್ವರ್, ಪಾಲಾಕ್ಷ, ಚೈತ್ರ ಗೌಡ, ಸೌಮ್ಯ ಮತ್ತಿತರರಿದ್ದರು.
———-ಸುರೇಶ್