ಚಿಕ್ಕಮಗಳೂರು-ದೈನಂದಿನ ಕಾಯಕದಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರೊಂದಿಗೆ ಕನ್ನಡದಲ್ಲೇ ವ್ಯವಹರಿಸಿ ಭಾಷಾಭಿಮಾನ ಮೂಡಿಸುತ್ತಿರುವ ಆಟೋ ಚಾಲಕರನ್ನು ಸದಾ ಗೌರವದಿಂದ ಕಾಣುವುದನ್ನು ರೂಢಿಸಿಕೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜ್ ಹೇಳಿದರು.
ನಗರದ ಅಂಬೇಡ್ಕರ್ ರಸ್ತೆ ಸಮೀಪದ ಕನ್ನಡಸೇನೆ ಆಟೋ ನಿಲ್ದಾಣದಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಅನೇಕ ಧರ್ಮದವರು ಆಟೋ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಮಾತೃಭಾಷೆಯoತೆ ಕನ್ನಡವನ್ನು ಕುಟುಂಬದಲ್ಲಿ ಹಾಗೂ ವೃತ್ತಿಯಲ್ಲಿ ಅಳವಡಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಆ ನಿಟ್ಟಿನಲ್ಲಿ ಆಟೋ ಚಾಲಕರು ಕನ್ನಡದ ತೇರನ್ನು ಎಳೆಯುವ ಭಾಷಾಭಿಮಾನಿಗಳು ಎಂದು ಬಣ್ಣಿಸಿದರು.
ಇತ್ತೀಚೆಗೆ ಸರ್ಕಾರಿ ಬಸ್ ನಿಲ್ದಾಣ ಸಮೀಪ ಆಟೋ ಚಾಲಕರಿಗೆ ಅನುಕೂಲವಾಗಲು ನಗರಸಭಾ ಅನುದಾನದಿಂದ ಆಟೋ ನಿಲ್ದಾಣವನ್ನು ನಿರ್ಮಿಸಿ ಚಾಲಕರಿಗೆ ಅನುಕೂಲ ಕಲ್ಪಿಸಿದೆ. ಇದನ್ನು ಹೊರತಾಗಿ ನಿಲ್ದಾಣಕ್ಕೆ ಸಣ್ಣಪುಟ್ಟ ಕೆಲಸಗಳು ಬಾಕಿಯಿದ್ದು ಸದ್ಯದಲ್ಲೇ ಪೂರ್ಣಗೊಳಿಸಲು ಮುಂದಾಗುತ್ತೇವೆ ಎಂದರು.
ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ, ಜಾತಿ, ಮತ ಹಾಗೂ ಪಂಥವನ್ನು ಮೀರಿ ನಿಂತಿರುವ ಕರ್ನಾಟಕ ರಾಜ್ಯ ನಮ್ಮದು. ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿರುವ ಕನ್ನಡಿಗರು ಶಾಂತಿಪ್ರಿಯರೆoದೇ ಪ್ರಸಿದ್ಧರಾದವರು. ನಾಡು, ನುಡಿಗೆ ಧಕ್ಕೆಯಾದರೆ ಧೈರ್ಯವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಕನ್ನಡದ ಕ್ರಾಂತಿ, ಕಂಪು ಹಾಗೂ ಭಾಷಾಭಿಮಾನಕ್ಕೆ ಒತ್ತು ಕೊಡುವವರು ಆಟೋಚಾಲಕರು.ಪ್ರತಿ ರಾಜ್ಯೋತ್ಸವದಲ್ಲಿ ಕನ್ನಡಧ್ವಜವನ್ನು ರಾರಾಜಿಸುವಂತೆ ಮಾಡುವ ಆಟೋ ಚಾಲಕರ ಸೇವೆ ಅವಿಸ್ಮರಣೀಯ. ಈ ನಡುವೆ ಚಾಲಕರಿಗೆ ಸಮಸ್ಯೆಗಳು ಎದುರಾ್ದರೆ ಕನ್ನಡಸೇನೆ ಸದಾ ಜೊತೆಗಿರಲಿದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕನ್ನಡಸೇನೆ ಆಟೋ ಸಂಘದ ಅಧ್ಯಕ್ಷ ಶಾಹೀದ್, ಉಪಾಧ್ಯಕ್ಷ ಸತೀಶ್, ದೌರ್ಜನ್ಯ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್ , ಕನ್ನಡ ಸೇನೆ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಮುಖಂ ಡರುಗಳಾದ ಶಂಕರೇಗೌಡ, ಜಗದೀಶ್, ಅಂಗಡಿ ಮಾಲೀಕ ವರದರಾಜ್, ಆಟೋ ಚಾಲಕರಾದ ಇಜಾಜ್, ನಿಸಾರ್ ಮತ್ತಿತರರಿದ್ದರು.