ಚಿಕ್ಕಮಗಳೂರು-ಜನಸಾಮಾನ್ಯರ ಬದುಕನ್ನು ಹಸನುಗೊಳಿಸುವಲ್ಲಿ ಕಟ್ಟಡ ಕಾರ್ಮಿಕರ ಪಾತ್ರ ಬಹಳಷ್ಟಿದೆ.ಆ ನಿಟ್ಟಿನಲ್ಲಿ ಕಾರ್ಮಿಕರ ಭದ್ರತೆ ದೃಷ್ಟಿಯಿಂದ ರಾಜ್ಯಸರ್ಕಾರ ಅಗತ್ಯ ಮೂಲ ಭೂತ ಸೌಕರ್ಯಗಳನ್ನು ಒದಗಿಸಿ ಬೆನ್ನುಲುಬಾಗಿ ನಿಂತಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಕಾರ್ಮಿಕ ಭವನದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಬುಧವಾರ ವೆಲ್ಡರ್, ಮ್ಯಾಸಸ್ ಹಾಗೂ ಎಲೆಕ್ಟ್ರಿಷಿಯನ್-ಕಟ್ಟಡ ಕಾರ್ಮಿಕರಿಗೆ ಉಚಿತ ಸಲಕರಣೆಗಳ ಕಿಟ್ ವಿತರಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಶ್ರಮಿಕರಾಗಿ ದುಡಿಯುವ ಕಾರ್ಮಿಕ ವರ್ಗಕ್ಕೆ ಕೊಂಚವು ಸಮಸ್ಯೆಯಾಗದಂತೆ ಪಿಂ ಚಣಿ, ವೈದ್ಯಕೀಯ ಸೌಲಭ್ಯ, ಸಹಾಯಧನ, ಕುಟುಂಬದ ಮಕ್ಕಳಿಗೆ ಶಿಕ್ಷಣ ಹಾಗೂ ಆರೋಗ್ಯ ತಪಾಸಣೆಯಂಥ ಶಿಬಿರ ಆಯೋಜಿಸಿ ಕಾರ್ಮಿಕರ ಕುಟುಂಬವನ್ನು ನೆಮ್ಮದಿಯಿಂದಿರಿಸಲು ಸರ್ಕಾರ ಕಾರ್ಯಪ್ರವೃತ್ತ ವಾಗಿದೆ ಎಂದರು.
ಪ್ರಸ್ತುತ ರಾಜ್ಯಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸುತ್ತಿದೆ. ಉಚಿತ ಗ್ಯಾರಂಟಿ ಭಾಗ್ಯಗಳ ಜೊತೆಗೆ ಪ್ರತಿ ತಾಲ್ಲೂಕಿಗೆ ಕೋಟ್ಯಾಂತರ ರೂ. ಅನುದಾನ ಹಾಗೂ ಉಚಿತ ಸಲಕರಣೆಗಳನ್ನು ವಿತರಿಸಿ ಕಾರ್ಮಿಕರನ್ನು ಆರ್ಥಿಕವಾಗಿ ಸದೃಢಗೊಳಿಸುವಲ್ಲಿ ಮುಂದಾಗುತ್ತಿದೆ ಎಂದ ಅವರು ಕಾರ್ಮಿಕರ ಮದುವೆ ಅಥವಾ ಇನ್ನಿತರೆ ಸವಲತ್ತಿಗೆ ಸ್ಪಂದಿಸುತ್ತಿದೆ ಎಂದು ತಿಳಿಸಿದರು.
ಭವಿಷ್ಯದಲ್ಲಿ ಕಾರ್ಮಿಕರ ಮಕ್ಕಳು ಕಾರ್ಮಿಕರಾಗಬಾರದೆಂಬ ದೃಷ್ಟಿಯಿಂದ ಗುಣಮಟ್ಟದ ವಿದ್ಯಾಭ್ಯಾಸ ವನ್ನು ಸರ್ಕಾರ ಒದಗಿಸುತ್ತಿದೆ. ಆ ನಿಟ್ಟಿನಲ್ಲಿ ಪಾಲಕರು ಇಲಾಖೆಗಳ ಸೌಲಭ್ಯಗಳನ್ನು ಸದುಪಯೋಗಪಡಿಸಿ ಕೊಂಡು ಮಕ್ಕಳಿಗೆ ವಿದ್ಯಾರ್ಜನೆಗೆ ಮುಂದಾದರೆ ಮುಂದೊoದು ದಿನ ಕಾರ್ಮಿಕ ಇಲಾಖೆಗಳಲ್ಲಿ ಅಧಿಕಾರಿಗಳಾಗಿ ನೇಮಕವಾಗಬಹುದು ಎಂದು ಹೇಳಿದರು.
ಶೋಷಿತರ ಪರ ಧ್ವನಿಗೂಡಿಸುವ ಮಹಾಪುರುಷರಂತೆ ಇಂದಿನ ಕಾಲಘಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರು, ಶೋಷಿತರು ಹಾಗೂ ದೀನದಲಿತರ ಶ್ರೇಯೋಭಿವೃಧ್ದಿಗೆ ಶ್ರಮಿಸುವ ಮೂಲಕ ನಾಡಿನ ಏಕೈಕ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸುತ್ತಿದ್ದಾರೆ ಎಂದರು.
ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನoದಸ್ವಾಮಿ ಮಾತನಾಡಿ ಕಾರ್ಮಿಕರು ಬದುಕಿನಲ್ಲಿ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಏಳಿಗೆ ಹೊಂದುವ ದೃಷ್ಟಿಯಿಂದ ಅನೇಕ ಸವಲತ್ತು ಒದಗಿಸುತ್ತಿದೆ.ಆದರೆ ಕೆಲವು ಮಂದಿ ಕಾಟಾಚಾರಕ್ಕೆ ಮಾತನಾಡುವುದು ಸರಿಯಲ್ಲ. ಇಲಾಖೆಯಿಂದ ದೊರೆಯುವಂತಹ ಸೌಲಭ್ಯ ಪಡೆದುಕೊಂಡಿದಕ್ಕೆ ಕೃತಜ್ಞತೆ ಸಲ್ಲಿಸಬೇಕು ಎಂದರು.
ಜಿಲ್ಲೆಯಲ್ಲಿನ ಕಾರ್ಮಿಕರಿಗೆ ಪಂಚ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಲಭ್ಯವಾಗುತ್ತಿದೆ. ಗ್ರಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ, ಶಕ್ತಿ ಯೋಜನೆ ಹಾಗೂ ಉಚಿತ ಅಕ್ಕಿ ವಿತರಿಸಲಾಗುತ್ತಿದ್ದು ಸಣ್ಣ ಪುಟ್ಟ ಬದಲಾವಣೆ ಹೊರತಾಗಿ ಸಂಪೂರ್ಣ ಗ್ಯಾರಂಟಿ ಮುಂದಿನ ಅವಧಿವರೆಗೂ ವಿಸ್ತರಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತ ರವಿಕುಮಾರ್, ಕೇಂದ್ರ ಸರ್ಕಾರ ಶ್ರಮಿಕ ವರ್ಗಕ್ಕೆ ಅನುಕೂಲ ಹಾಗೂ ಜೀವನ ಭದ್ರತೆ ಒದಗಿ ಸಲು ಕಾರ್ಮಿಕ ಇಲಾಖೆ ಸ್ಥಾಪಿಸಿ ಸಹಕರಿಸುತ್ತಿದೆ ಎಂದರು.
ಇದೇ ವೇಳೆ ಕಾರ್ಮಿಕ ಇಲಾಖೆಯಲ್ಲಿ ನೊಂದಣೀಯಾಗಿದ್ದ ಸುಮಾರು 200ಕ್ಕೂ ಹೆಚ್ಚು ಕಟ್ಟಡ ಕಾರ್ಮಿಕ ಫಲಾನುಭವಿಗಳಿಗೆ ಉಚಿತ ಸಲಕರಣೆಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಕಾರ್ಮಿಕ ನಿರೀಕ್ಷಕರಾದ ಹೆಚ್.ಕೆ.ಪ್ರಭಾಕರ್, ಪ್ರವೀಣ್, ಬಾಲಕಾರ್ಮಿಕ ಯೋಜನಾ ನಿರ್ದೇಶಕ ಪ್ರವೀಣ್‌ಕುಮಾರ್, ಸಿಬ್ಬಂದಿಗಳಾದ ರಾಘವೇಂದ್ರ ಹಾಗೂ ಕಟ್ಟಡ ಕಾರ್ಮಿಕರು ಉಪಸ್ಥಿತರಿದ್ದರು.
—————-–ಸುರೇಶ್