ಚಿಕ್ಕಮಗಳೂರು-ಕಾರ್ತೀಕ ದೇವರ ಮಾಸ, ಜ್ಞಾನದ ಸಂದೇಶ ನೀಡುತ್ತದೆ.ದೀಪಾವಳಿ ಸಂತೋಷ ಸಂಭ್ರಮದ ಜನಪ್ರಿಯ ಅರ್ಥಪೂರ್ಣ ಹಬ್ಬ ಎಂದು ಸಮಾಜಿಕ ಕಾರ್ಯಕರ್ತೆ ಮಂಗಳಾ ಎಚ್.ಡಿ.ತಮ್ಮಯ್ಯ ನುಡಿದರು.
ಶ್ರೀ ಪಾರ್ವತಿ ಮಹಿಳಾ ಮಂಡಳಿಯು ಚಿಕ್ಕೊಳಲೆ ಸದಾಶಿವಶಾಸ್ತ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕಾರ್ತೀಕ ಸಂಭ್ರಮ’ ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಅವರು ಮಾತನಾಡಿದರು.
ದೀಪೋತ್ಸವ, ತುಳಸಿಹಬ್ಬ, ಲಕ್ಷ್ಮಿ ಪೂಜೆ ಕಾರ್ತೀಕಮಾಸದಲ್ಲಿ ಬರುತ್ತದೆ. ಈ ಮಾಸದಲ್ಲಿ ಮದುವೆ, ಗೃಹಪ್ರವೇಶ ಸೇರಿದಂತೆ ಶುಭಕಾರ‍್ಯಗಳು ನಡೆದರೆ ಶ್ರೇಯಸ್ಸು ಎಂಬ ನಂಬಿಕೆ ಇದೆ. ಎಲ್ಲ ದೇವಾಲಯಗಳಲ್ಲಿ ವಿಶೇಷಪೂಜೆ, ಅಲಂಕಾರ, ಅಭಿಷೇಕ, ದೀಪಾರಾಧನೆ, ಗಾಯನ, ನಾಟಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ. ವಿಶೇಷವಾಗಿ ಶಿವ ದೇವಾಲಯಗಳಲ್ಲಿ ಮಾಸಪೂರ್ಣ ಕಾರ್ಯಕ್ರಮಗಳಿರುತ್ತವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಂದಿರಗಳಿಗೆ ಭೇಟಿ ನೀಡಿ ಆನಂದಿಸುವ ಸಂದರ್ಭವಿದು ಎಂದರು.
ದೀಪಾವಳಿ ಬೆಳಕಿನ ಹಬ್ಬ. ದೇಶಾದ್ಯಂತ ಬೇರೆ ಬೇರೆ ರಾಜ್ಯಗಳು ಹಾಗೂ ಸಮೂದಾಯಗಳು-ಧರ್ಮಗಳು ತಮ್ಮದೇ ಆದ ರೀತಿಯಲ್ಲಿ ಸಂಭ್ರಮಿಸುವ ಪದ್ಧತಿ ಇದೆ. ಶ್ರೀರಾಮ 14ವರ್ಷ ವನವಾಸ ಮುಗಿಸಿ ಹಿಂತಿರುಗಿದಾಗ ಪ್ರಜೆಗಳು ಮಣ್ಣಿನ ಹಣತೆಗಳನ್ನು ಹಚ್ಚಿ ಪಟಾಕಿ ಸಿಡಿಸಿ, ತಳಿರು ತೋರಣದೊಂದಿಗೆ ಬರಮಾಡಿಕೊಂಡು ಸಂಭ್ರಮಿಸಿದ ದಿನವಿದು.ಶ್ರೀವಿಷ್ಣು ವಾಮನ ಅವತಾರ ತಾಳಿ ಬಲಿಚಕ್ರವರ್ತಿಯನ್ನು ವಧಿಸಿದ ದಿನವಿದು. ಕೆಲವರಿಗೆ ಹೊಸ ಲೆಕ್ಕ ಆರಂಭಿಸುವ ಆರ್ಥಿಕ ಚಟುವಟಿಕೆಯ ಆರಂಭಿಕ ದಿನವೂ ಆಗಿದೆ ಎಂದು ಮಂಗಳಾ ವಿವರಿಸಿದರು.
ಮಲೆನಾಡು ಪ್ರಾಂತ್ಯದಲ್ಲಿ ದೀಪಾವಳಿ ಹೆಚ್ಚು ಜನಪ್ರಿಯ ಶ್ರದ್ಧೆಯ ಹಬ್ಬವಾಗಿದೆ. ಬೆಟ್ಟದಲ್ಲಿ ನೆಲೆಸಿರುವ ಶ್ರೀ ದೇವಿರಮ್ಮ ತಾಯಿಯನ್ನು ದರ್ಶಿಸುವ, ಅಲ್ಲಿ ರಾತ್ರಿ ಬೆಳಗುವ ದೀಪವನ್ನು ಕಣ್ತುಂಬಿಕೊoಡು ಆರತಿ ಬೆಳಗುವ ಅದೃಷ್ಟ ನಮ್ಮದಾಗಿದೆ ಎಂದ ಮಂಗಳಾ, ದೀಪ ಮನೆ-ಮನಗಳನ್ನು ಬೆಳಗಿ ಉಲ್ಲಾಸಗೊಳಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪಾರ್ವತಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಮಿತ್ರಾಶಾಸ್ತ್ರೀ ಮಾತನಾಡಿ, ದೀಪ ಜ್ಞಾನದ ಸಂಕೇತ. ಭಾರತೀಯ ಸಂಸ್ಕೃತಿಯಲ್ಲಿ ಕಾರ್ತೀಕಮಾಸ ಬಹಳಷ್ಟು ಮಹತ್ವವಿದೆ. ಮಠ, ಮಂದಿರ, ಮನೆ-ಮನಗಳಲ್ಲಿ ದೀಪ ಹಚ್ಚಿ ದೇವತಾರಾಧನೆ ಮಾಡುತ್ತಾರೆ. ಹೊರಗಿನ ಕತ್ತಲೆ ಕಳೆಯಲು ಸೂರ್ಯ ಇರುವಂತೆ ನಮ್ಮ ಅಜ್ಞಾನ ಕಳೆಯಲು ಗುರುದೇವ ಇರಬೇಕೆಂದ ಸುಮಿತ್ರಾ, ದೀಪ ಬೆಳಗುವುದರಿಂದ ಐಶ್ವರ್ಯ , ಸಂಪತ್ತು, ಆರೋಗ್ಯ ಸ್ಥಿರವಾಗಿರುತ್ತದೆ ಎಂದು ತಿಳಿಸಿದರು.
ಜ್ಯೋತಿ ಬೆಳಗಿ ಸಮಾರಂಭ ಉದ್ಘಾಟಿಸಿದ ಹಿರಿಯಸದಸ್ಯೆ ಸಿದ್ಧವೀರಮ್ಮ ಶುಭ ಹಾರೈಸಿದರು.ಉಪಾಧ್ಯಕ್ಷೆ ಶೈಲಾಬಸವರಾಜು ಶ್ರೀರೇಣುಕಗೀತೆ ಹಾಡಿದರು.
ಶ್ರೀಲಕ್ಷ್ಮಿ ಗೀತಗಾಯನ ಸ್ಪರ್ಧಾ ವಿಜೇತರಿಗೆ ಪುಪ್ಪಾಕುಮಾರಸ್ವಾಮಿ ಬಹುಮಾನ ವಿತರಿಸಿದರು.ತೀರ್ಪುಗಾರರಾಗಿದ್ದ ನೇತ್ರಾಮಹೇಶ್ ಮತ್ತು ರುಕ್ಮಿಣಿಹರೀಶ್‌ರನ್ನು, ಹಿರಿಯಸದಸ್ಯೆ ಪಾರ್ವತಮ್ಮರುದ್ರಪ್ಪ ಅವರನ್ನು ಗೌರವಿಸಲಾಯಿತು.
ಕಾರ್ಯದರ್ಶಿ ಭವಾನಿ ವಿಜಯಾನಂದ ಪ್ರಾಸ್ತಾವಿಸಿ ಆಚಾರ್ಯಗೀತೆ ಹಾಗೂ ಸಾಹಿತ್ಯ ಪ್ರವರ್ಧನೆಗೆ ಆರಂಭಗೊoಡ ಪಾರ್ವತಿ ಮಹಿಳಾಮಂಡಳಿ 8ನೆಯ ವರ್ಷದಲ್ಲಿ ಮುನ್ನಡೆದಿದೆ ಎಂದರು.ಉಪಾಧ್ಯಕ್ಷೆ ಮಂಜುಳಾಮಹೇಶ್ ವಿವಿಧ ಆಟೋಟಸ್ಪರ್ಧೆಗಳನ್ನು ನಡೆಸಿದರು.
ಸಹಕರ‍್ಯದರ್ಶಿ ಪಾರ್ವತಿಬಸವರಾಜು ಸ್ವಾಗತಿಸಿ, ಮಂಜುಳಾಶಶಿಕುಮಾರ್ ನಿರೂಪಿಸಿ, ಅನಿತಾ ಹೇಮಶ್ಚಂದ್ರ ವಂದಿಸಿದರು.
ಆಶಾಹೇಮಂತ್ ಅತಿಥಿ ಪರಿಚಯಿಸಿದರು.ಶ್ಯಾಮಲಾರಮೇಶ್ ಮತ್ತು ರೇಖಾಪ್ರಸನ್ನ ತಂಡ ಕನ್ನಡಗೀತೆ ಹಾಡಿದರು. ಪುಷ್ಪಾ ಪ್ರಾರ್ಥಿಸಿ, ಶೈಲಜಾಬಸರಾಜು ವೇದಘೋಷ ಮಾಡಿದರು.