ಚಿಕ್ಕಮಗಳೂರು-ಕವಿಹೃದಯ ಹೊಂದಿರುವ ಸಾಹಿತಿಗಳು ಕಾವ್ಯ ರಚನೆಗೆ ಮುನ್ನ ನಿರಂತರ ಕಲಿಕೆ, ಗುರುಗಳ ಮಾರ್ಗದರ್ಶನ ಪಡೆದು ಓದುಗರರಿಗೆ ಮೆಚ್ಚಿಸುವಂಥ ರೀತಿಯಲ್ಲಿ ಕಾವ್ಯಗಳ ನ್ನು ಸೃಷ್ಟಿಸಿ ಉಣಬಡಿಸಬೇಕು ಎಂದು ಹಿರಿಯ ಕವಿಯತ್ರಿ ಮತ್ತು ಕಥೆಗಾರ್ತಿ ಸವಿತಾ ನಾಗಭೂಷಣ್ ಹೇಳಿದರು.
ನಗರದ ಆಶಾಕಿರಣ ಪಾಠಶಾಲೆ ಸಮೀಪದ ಕನ್ನಡ ಭವನದಲ್ಲಿ ಬೆಂಗಳೂರು ರಂಗಮoಡಲ, ಅವಧಿ ಸಂಸ್ಥೆ ಹಾಗೂ ಜಿಲ್ಲಾ ಕಸಾಪ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ಧ ಕಾವ್ಯ ಸಂಸ್ಕೃತಿ ಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಕಾವ್ಯ ಲೋಕದಲ್ಲಿ ಆಳವಾದ ಪಾಂಡಿತ್ಯ ಅವಶ್ಯಕ. ನಿರಂತರ ಅಧ್ಯಯನದಿಂದ ಮಾತ್ರ ಸರ್ವಶ್ರೇಷ್ಟ ಕವಿಗಳಾಗಲು ಸಾಧ್ಯ. ಚಿಕ್ಕಮಗಳೂರು ಜಗದಕವಿ ಕುವೆಂಪುರವರಿಗೆ ಜನ್ಮವಿತ್ತ ಭೂಮಿ. ಈ ನೆಲದಲ್ಲಿ ಕವಿ ಮನಸ್ಸು ಹೊಂದಿರುವ ಅನೇಕರು ನಿರಂತರ ಕಾವ್ಯ ರಚನೆಯಲ್ಲಿ ತೊಡಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಕಾವ್ಯಗಳನ್ನು ಸೃಷ್ಟಿಸಲು ಬಹಳಷ್ಟು ಅಧ್ಯಯನವಿರಬೇಕು. ಪ್ರತಿದಿನವು ಜನಮೆಚ್ಚಿದ ಕಾವ್ಯಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸುಮ್ಮನೆ ಬಿಡುವಿನ ವೇಳೆಯಲ್ಲಿ ಕಾವ್ಯಗಳನ್ನು ರಚಿಸಿದರೆ ಸಾಧನೆ ಮಾಡಲು ಸಾಧ್ಯವಿಲ್ಲ. ಕಠಿಣ ಪರಿಶ್ರಮ ಹಾಗೂ ನಿರಂತರ ಪ್ರಯತ್ನದಿಂದ ಮಾತ್ರ ಸಾಹಿತ್ಯವನ್ನು ಪ್ರೀತಿಯಿಂದ ಅಪ್ಪಿಕೊಳ್ಳಲು ಸಾಧ್ಯ ಎಂದರು.
ಇoದಿನ ಯುವಕವಿಗಳು ಮನೆಯಂಗಳದಲ್ಲಿ ಕುವೆಂಪು, ಬೇಂದ್ರೆ ಸೇರಿದಂತೆ ಅನೇಕರು ರಚಿಸಿರುವ ಕಾವ್ಯಗಳ ಗ್ರಂಥವಿರಿಸಿ ನಿರಂತರ ಅಭ್ಯಾಸಿಸಬೇಕು. ಜೊತೆಗೆ ಜೀವನುದ್ದಕ್ಕೂ ಉತ್ತಮ ಕವಿತೆಗಳನ್ನು ಓದುವಲ್ಲಿ ಹೆಜ್ಜೆ ಹಾಕಬೇಕು ಎಂದ ಅವರು ತಾಯಿಯ ಎದೆಹಾಲು ಮಕ್ಕಳಿಗೆ ಶಕ್ತಿಯುತವಾದಂತೆ, ಮಾತೃಭಾಷೆ ಯಿಂದ ಪ್ರತಿ ಸಾಹಿತ್ಯಾಸಕ್ತರು ನೆಲೆಯೂರಲು ಸಾಧ್ಯವೆಂಬುದನ್ನು ಅರಿಯಬೇಕು ಎಂದು ತಿಳಿಸಿದರು.
ರಾಮನಗರ ಕಾವ್ಯ ಸಂಸ್ಕೃತಿ ಯಾನದ ಅಧ್ಯಕ್ಷ ಡಾ.ಬೈರಮಂಡಲ ರಾಮೇಗೌಡ ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿ, ಕವಿತೆಗಳನ್ನು ರಚಿಸುವ ಕಲೆ ಎಲ್ಲರಲ್ಲೂ ಅಡಗಿರುತ್ತದೆ. ಅನಾವರಣಗೊಳಿಸುವ ಕಾರ್ಯವಾಗಬೇಕು. ಆ ನಿಟ್ಟಿನಲ್ಲಿ ರಾಜ್ಯಾದ್ಯಂತ ಕಾವ್ಯ ಸಂಸ್ಕೃತಿ ಯಾನವನ್ನು ಸಂಚರಿಸಿ ಕವಿಗಳನ್ನು ಸಮಾಜದ ಮುಂಚೂಣಿಗೆ ಕರೆ ತರಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕವನ ಸಂಕಲನ, ಕಥೆಗಳು, ಕಾವ್ಯ ರಚನೆಗಳನ್ನು ಓದುಗರಿಗೆ ಮೆಚ್ಚಿಸುವಂತಿಲ್ಲ. ಕೇವಲ ಸಾಮಾಜಿಕ ಜಾಲತಾಣದಲ್ಲಿ ಅಂಟಿಸಿ ಮೆಚ್ಚುಗೆ ಹಾಗೂ ಕಾಮೆಂಟ್‌ಗಳಿಗೆ ಮಾತ್ರ ಸೀಮಿತವಾಗುತ್ತಿದೆ. ಇದರಿಂದ ಮೊದಲು ಹೊರಬಂದು ಓದುಗರರು ಮೆಚ್ಚಿಸುವಂತ ರೀತಿಯಲ್ಲಿ ಕಾವ್ಯಗಳನ್ನು ರಚಿಸಬೇಕು ಎಂದು ಕಿವಿಮಾತು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಕುವೆಂಪು ಜನ್ಮವಿತ್ತ ಪುಣ್ಯಭೂಮಿಯಲ್ಲಿ ಎಲೆಮರೆ ಕಾಯಿಯಂತೆ ಬಿಂಬಿತಗೊಳ್ಳುವ ಯುವಕವಿಗಳಿದ್ದು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾವ್ಯ ಕಮ್ಮಟ, ಸಮ್ಮೇಳನ ಆಯೋಜಿಸಲಾಗಿದೆ.ಸದ್ಯದಲ್ಲೇ ನಾಲ್ಕು ಜಿಲ್ಲೆಗಳನ್ನು ಒಟ್ಟುಗೂಡಿಸಿ ಕವಿಯಾನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾವ್ಯ ಸಂಸ್ಕೃತಿ ಯಾನದ ಪ್ರಧಾನ ಸಂಚಾಲಕ ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ ಮಾತನಾಡಿ, ಮನುಕುಲದ ನೋವು, ಭಾವನೆಗಳಿಗೆ ಸ್ಪಂದಿಸುವುದೇ ಕಾವ್ಯ ಸಂಸ್ಕೃತಿ. ಪರಿಸರದ ವಾತಾವರಣದಲ್ಲಿ ಬದುಕು ಕಟ್ಟಿಕೊಡುವಲ್ಲಿ ಕಾವ್ಯ ಸಂಸ್ಕೃತಿ ಅದ್ಬುತವಾಗಿ ನಿರ್ವಹಿಸಿ ಕಾವ್ಯದ ಬೆಳಕನ್ನು ನಾಡು ಹಾಗೂ ದೇಶಾದೆಲ್ಲೆಡೆ ಪ್ರಜ್ವಲಿಸುವಂತೆ ಮಾಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾವ್ಯ ಸಂಸ್ಕೃತಿ ಯಾನದ ರಾಜ್ಯ ಸಂಚಾಲಕ ಆರ್.ಜೆ.ಹಳ್ಳಿ ನಾಗರಾಜ್, ಸದಸ್ಯ ಗುಂಡಣ್ಣ, ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ತಾಲ್ಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ, ಹೋಬಳಿ ಅಧ್ಯಕ್ಷೆ ವೀಣಾ ಮಲ್ಲಿಕಾರ್ಜುನ್, ನಗರಾಧ್ಯಕ್ಷ ಸಚಿನ್‌ಸಿಂಗ್, ಸುಮಾ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
—-ಸುರೇಶ್