ಚಿಕ್ಕಮಗಳೂರು-ಸಹಕಾರ ಸಂಘದಲ್ಲಿ ಅಕ್ರಮವಾಗಿ ಮತಪಟ್ಟಿ ತಯಾರಿಸಿ ಷೇರುದಾರರರಿಗೆ ವಂಚಿಸಿರುವ ಲಕ್ಯಾ ಸಹಕಾರ ಸಂಘದ ಕಾರ್ಯದರ್ಶಿಯ ಅಮಾನತ್ತಿಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಮುಖಂಡರುಗಳು ಮಂಗಳವಾರ ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ದಸಂಸ ಜಿಲ್ಲಾ ವಿಭಾಗೀಯ ಸಂಚಾಲಕ ಮರ್ಲೆ ಅಣ್ಣಯ್ಯ, ಲಕ್ಯಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪ.ಜಾತಿ, ಪಂಗಡದ ಹಾಗೂ ಇತರೆ ಸದಸ್ಯರುಗಳ ಷೇರುಗಳಿದ್ದು ಯಾವುದೇ ಮಾಹಿತಿ ಹಾಗೂ ನೋಟೀಸ್ ನೀಡದೇ ಮತದಾನ ಹಕ್ಕಿನಿಂದ ವಂಚಿತಗೊಳಿಸಿದ್ದಾರೆ ಎಂದು ದೂರಿದರು.
ಪ್ರಸ್ತುತ ಸಹಕಾರ ಸಂಘದ ಚುನಾವಣೆಗಳಿರುವ ಕಾರಣ ಕಾರ್ಯದರ್ಶಿ ಬೇಕಾದ ಸದಸ್ಯರಿಗೆ ಮತದಾನದ ಹಕ್ಕು ನೀಡಿದ್ದಾರೆ. ಹಾಗೂ ಪ.ಜಾತಿ ಮತ್ತು ಪಂಗಡಕ್ಕೆ ಸರ್ಕಾರದಿಂದ ಬರುವ ಸಹಾಯಧನ, ಷೇರುಗಳನ್ನು ದುರುಪಯೋಗ ಮಾಡಿಕೊಂಡು ದ್ರೋಹವೆಸಗಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಮಾಹಿತಿಗಾಗಿ ಸಂಘದ ಕಚೇರಿಗೆ ತೆರಳಿ ವಿಚಾರಿಸಿದರೆ ಸಂಘದ ಕಾರ್ಯದರ್ಶಿ ಉಡಾಫೆ ನೀಡಿ ಬೇಜ ವಾಬ್ದಾರಿತನ ತೋರುವ ಜೊತೆಗೆ ಪರಿಶಿಷ್ಟ ಸದಸ್ಯರಿಗೆ ಅಗೌರವದಿಂದ ನಡೆದುಕೊಂಡು ಅವಮಾನಿಸಿದ ಕಾರಣ ಕಾರ್ಯದರ್ಶಿ ವಿರುದ್ಧ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಲಾಗಿದೆ ಎಂದರು.
ಮತದಾನಕ್ಕೆ ಅರ್ಹರಾಗಿರುವ ಸದಸ್ಯರಗಳಲ್ಲಿ ಕೆಲವರು ವಾರ್ಷಿಕ ಮಹಾಸಭೆಗೆ ಹಾಜರಾಗಿಲ್ಲ. ಅವರ ಸಹಿಯನ್ನು ಮೂಲ ರಿಜಿಸ್ಟರ್‌ನಲ್ಲಿ ಕಾರ್ಯದರ್ಶಿಯೇ ಸಹಿ ಮಾಡಿದ್ದಾರೆ. ಹೀಗಾಗಿ ಸದಸ್ಯರ ಸಹಿಯನ್ನು ಪುನಃ ಪಡೆದುಕೊಂಡು, ವಾರ್ಷಿಕ ಸಭೆಯ ಸಹಿಗಳಿಗೆ ತಾಳೆ ಮಾಡಬೇಕು ಎಂದು ಹೇಳಿದರು.
ಸದಸ್ಯರುಗಳ ಮಾಹಿತಿ ಹಾಗೂ ನೋಟೀಸ್ ನೀಡದೇ ಅನರ್ಹಗೊಂಡಿರುವ ಸದಸ್ಯರಿಗೆ ನೋಟೀಸ್ ತಲುಪದಿದ್ದಲ್ಲಿ ನಿಯಮದ ಪ್ರಕಾರ ನೋಟೀಸ್ ನೀಡಿ ಷೇರು ಮತ್ತು ಸಾಲ ಕಟ್ಟಲು ಅವಕಾಶ ಜೊತೆಗೆ ಮತದಾನದ ಹಕ್ಕನ್ನು ನೀಡಬೇಕು. ಅಕ್ರಮ ಮತಪಟ್ಟಿ ತಯಾರಿಸಿರುವ ಕಾರ್ಯದರ್ಶಿ ವಿರುದ್ಧ ತನಿಖೆ ನಡೆಸುವ ತನಕ ಚುನಾವಣೆ ಮುಂದೂಡದಿದ್ದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮಂಜಯ್ಯ, ಸಂಘಟನಾ ಸಂಚಾಲಕರಾದ ಸಣ್ಣಪ್ಪ, ರಮೇಶ್ ಉದ್ದೇಬೋರನಹಳ್ಳಿ, ಆಶಾ ಸಂತೋಷ್ ತಾಲ್ಲೂಕು ಸಂಚಾಲಕ ಮಂಜುನಾಥ್ ನಂಬಿಯಾರ್ ಮತ್ತಿತರರಿದ್ದರು.
————ಸುರೇಶ್