ಚಿಕ್ಕಮಗಳೂರು-ಪ್ರವಾಸಿಗರಿಗೆ ಶಿಸ್ತು ನಿಯಮ ರೂಪಿಸದಿದ್ದಲ್ಲಿ ಮಲೆನಾಡು ಕಲುಷಿತಗೊಳ್ಳುವುದರಲ್ಲಿ ಸಂಶಯವಿಲ್ಲ-ರಾಧಾ ಸುಂದ್ರೇಶ್

ಚಿಕ್ಕಮಗಳೂರು-ರಾಜಮಹಾರಾಜರ ಸಂಸ್ಥಾನ, ಶಿಲ್ಪಾಕಲೆಗಳು ಹಾಗೂ ಪುರಾತನ ಶಾಸನಗಳ ಇತಿಹಾಸವನ್ನು ಜಗತ್ತಿನಾದ್ಯಂತ ಪಸರಿಸುವಲ್ಲಿ ಪ್ರವಾಸಿಗರ ಪಾತ್ರ ಬಹಳಷ್ಟಿದೆ ಎಂದು ಎಂ.ಇ.ಎಸ್ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಪ್ರೋ.ಹಸೀನಾ ಬಾನು ಹೇಳಿದರು.

ನಗರದ ಬೈಪಾಸ್ ಸಮೀಪ ಮಲೆನಾಡು ವಿದ್ಯಾಸಂಸ್ಥೆಯ ಸೀತಮ್ಮ ಸರಾಫ್ ರಾಮಚಂದ್ರರಾವ್ ಪ್ರಾಯೋಗಿಕ ಪ್ರೌಡಶಾಲೆಯಲ್ಲಿ ಶ್ರೀಮತಿ ಶಾಂತಕುಮಾರಿರಾಜು ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ಧ ನಗರ ಮಟ್ಟದ ಅಂತರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರವಾಸೋದ್ಯಮ ಕುರಿತ ಚರ್ಚಾಸ್ಪರ್ಧೆ ಸಮಾರಂಭವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಬೆಳವಣಿಗೆ, ಸಾಮಾಜಿಕ ಕಳಕಳಿ ಹಾಗೂ ಪ್ರಜ್ಞೆ ಮೂಡಿಸುವ ಸಲುವಾಗಿ ಚರ್ಚಾ ಸ್ಫರ್ಧೆ ಆಯೋಜಿಸಿದೆ. ಪ್ರವಾಸೋದ್ಯಮ ಒಳಿತು ಅಥವಾ ಮಾರಕ ಎಂಬುವುದರ ವಿಷಯದಡಿ ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಶಾಲೆ ಮುಂದಾಗುವ ಮೂಲಕ ಸಾಮಾಜಿಕ ಅರಿವು ಮೂಡಿಸುವಲ್ಲಿ ಸಫಲಾಗಿದೆ ಎಂದರು.

ಇಡೀ ವಿಶ್ವಾದ್ಯಂತ ಪ್ರವಾಸೋದ್ಯಮ ಎಂಬುದು ಅತಿದೊಡ್ಡ ಉದ್ಯಮವಾಗಿ ಬೆಳೆದಿದೆ.ಈ ಪ್ರಕ್ರಿಯೆ ಈಚೆಗೆ ಆರಂಭಗೊoಡಿದ್ದಲ್ಲ, ಅನಾದಿ ಕಾಲದಿಂದ ಅಲೆಮಾರಿ ಸಮಾಜ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜೀವನ ಪದ್ಧತಿ ಅಳವಡಿಸಿಕೊಳ್ಳುವ ಸಲುವಾಗಿ ಪ್ರವಾಸ ಕೈಗೊಂಡು ನೆಮ್ಮದಿ, ಹಿತ, ಸಂತೋಷದಿoದ ಜೀವನ ಸಾಗಿಸಲು ರೂಢಿಸಿಕೊಂಡಿದ್ದರು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮ ಹೆಸರಿನಲ್ಲಿ ಅನೇಕರು ಪ್ರಕೃತಿದತ್ತ ಸಂಪನ್ಮೂಲವನ್ನು ಹಾಳುಗೆಡುವ ಕಾಯಕದಲ್ಲಿ ತೊಡಗಿದ್ದಾರೆ. ಪ್ರವಾಸಕ್ಕೆಂದು ದೇಶದ ಮೂಲೆ ಮೂಲೆಗಳಿಂದ ಪ್ರಖ್ಯಾತ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರು ಎಲ್ಲೆಂದರಲ್ಲಿ ಅಸ್ವಚ್ಚತೆ, ಕಸದ ರಾಶಿಯನ್ನು ನಿರ್ಮಿಸಿ ಪರಿಸರವನ್ನು ಕಲುಷಿತಗೊಳಿಸುವಲ್ಲಿ ನಿರತವಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತದ ಇತಿಹಾಸ,ಪಳೆಯುಳಿವಿಕೆಗೆ ಯಾವುದೇ ದೇಶ ಸರಿಸಾಟಿಯಿಲ್ಲ.ಇಂಥಹ ಮಾಹಿತಿಯನ್ನು ವಿಶಾದ್ಯಂತ ಪಸರಿಸಲು ಕಾರಣಕರ್ತರು ಪ್ರವಾಸಿಗರೇ ಎಂದ ಅವರು ಪಠ್ಯದಲ್ಲಿ ಓದಿ ಗ್ರಹಿಸುವುದಕ್ಕಿಂತ ನೇರವಾಗಿ ಪ್ರವಾಸಿ ತಾಣಗಳಿಗೆ ತೆರಳಿ ಸಮಗ್ರ ಮಾಹಿತಿ ಕಲೆಹಾಕುವ ಮುಖಾಂತರ ಪುರಾತನ ಸಂಸ್ಕೃತಿ ಪರಿಚಯಕ್ಕೆ ಕಾರಣೀಭೂತರು ಎಂದರು.

ಜಿಲ್ಲೆ ಪರಿಶುದ್ಧ ಆಮ್ಲಜನಕ ಉತ್ಪಾದಿಸುವ ನಿಟ್ಟಿನಲ್ಲಿ ಎರಡನೇ ಸ್ಥಾನ ಪಡೆದ ಹಿನ್ನೆಲೆ ವಾರಗಟ್ಟಲೇ ಸಾವಿರಾರು ಪ್ರವಾಸಿಗರು ಆಗಮಿಸಿ ಪ್ರಕೃತಿ ಸೌಂದರ್ಯ ಸವಿಯುವರು. ಆದರೆ ವಿಪರೀತ ವಾಹನದಿಂದ ವಾಯು ಮಾಲಿನ್ಯ, ತ್ಯಾಜ್ಯ ವಸ್ತುಗಳು ಗಿರಿಶ್ರೇಣಿಯಲ್ಲಿ ಎಸೆದು ಸ್ವಚ್ಚಂಧ ಪರಿಸರಕ್ಕೆ ಧಕ್ಕೆಯುಂಟು ಮಾಡುತ್ತಿರುವುದು ಶೋಚನೀಯ ಎಂದು ವಿಷಾಧಿಸಿದರು.

ಎಂ.ಇ.ಎಸ್ ಉಪಾಧ್ಯಕ್ಷೆ ರಾಧಾ ಸುಂದ್ರೇಶ್ ಮಾತನಾಡಿ,ಪ್ರಸ್ತುತ ಕಾಲಮಾಲಕ್ಕೆ ಪ್ರವಾಸೋದ್ಯಮ ಕುರಿತ ಚರ್ಚಾ ಸ್ಪರ್ಧೆ ಪೂರಕವಾಗಿದೆ.ಯಾವುದೇ ವ್ಯವಸ್ಥೆ ಸಮಗ್ರವಾಗಿರಲು ಆಡಳಿತ ಹಾಗೂ ಜನಭಾಗಿತ್ವದ ಅವಶ್ಯಕತೆಯಿದೆ ಎಂದ ಅವರು ಪ್ರವಾಸೋದ್ಯಮ ಹೆಸರಿನಲ್ಲಿ ಶಿಸ್ತು ನಿಯಮ ರೂಪಿಸದಿದ್ದಲ್ಲಿ ಭವಿಷ್ಯದಲ್ಲಿ ಮಲೆನಾಡು ಕಲುಷಿತಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಸ್ಪರ್ಧೆಯ ತೀರ್ಪುಗಾರ ಜಗದೀಶ್ ಮಾತನಾಡಿ, ಪ್ರಬಂಧ ಸ್ಪರ್ಧೆಗೆ ನೀಡಿರುವ ವಿಷಯನ್ನು ಇನ್ನಷ್ಟು ಪರಿಪೂರ್ಣವಾಗಿ ಅರ್ಥೈಸಿಕೊಳ್ಳಬೇಕು. ಸಮಾಜಕ್ಕೆ ಪ್ರವಾಸೋದ್ಯಮ ಒಳಿತೇ ಅಥವಾ ಕೆಡುಕೇ ಎಂಬುದನ್ನು ಅರಿಯಬೇಕು.ವ್ಯಾಪಾರ ದೃಷ್ಟಿಯಿಂದ ಪ್ರವಾಸೋದ್ಯಮ ಪೂರಕವಾದರೆ,ಇನ್ನೊಂದೆಡೆ ಪ್ರಕೃತಿ ಸಂಪತ್ತಿನ ನಾಶಕ್ಕೆ ಮುನ್ನುಡಿ ಬರೆದಿದೆ ಎಂದು ಹೇಳಿದರು.

ಇದೇ ವೇಳೆ ಚರ್ಚಾಸ್ಪರ್ಧೆಯಲ್ಲಿ ವಿವಿಧ ಶಾಲೆಗಳಿಂದ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ಎಂಇಎಸ್ ಅಧ್ಯಕ್ಷ ಎನ್.ಕೇಶವಮೂರ್ತಿ ವಹಿಸಿದ್ದರು.ಕಾರ್ಯಕ್ರಮದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಎಂ.ವಿ.ಷಡಾಕ್ಷರಿ, ಕಚೇರಿ ವ್ಯವಸ್ಥಾಪಕಿ ಶ್ರೀಲಕ್ಷ್ಮಿ , ಶಿಕ್ಷಕ ಸದಾಶಿವ,ತೀರ್ಪುಗಾರ ಗಂಗಾಧರಪ್ಪ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

————-ಸುರೇಶ್

Leave a Reply

Your email address will not be published. Required fields are marked *

× How can I help you?