ಚಿಕ್ಕಮಗಳೂರು-ವಿದ್ಯೆ,ವಿನಯ ಹಾಗೂ ವಿದೇಯತೆ ವಿದ್ಯಾರ್ಥಿಗಳಿಗೆ ಭೂಷಣ-ಶಿವಾನಂದಸ್ವಾಮಿ

ಚಿಕ್ಕಮಗಳೂರು-ವಿದ್ಯೆ,ವಿನಯ ಹಾಗೂ ವಿದೇಯತೆ ವಿದ್ಯಾರ್ಥಿಗಳಿಗೆ ಭೂಷಣ.ಪಠ್ಯದ ಚಟುವಟಿಕೆ ಜೊತೆಗೆ ಸಾಂಸ್ಕೃತಿಕ ಕಲೆಗಳಲ್ಲಿ ಹೆಚ್ಚು ತೊಡಗಿಸಿಕೊಂಡು ಸಮಾಜದಲ್ಲಿ ಗೌರವದಿಂದ ಬದುಕು ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನoದಸ್ವಾಮಿ ಕರೆ ನೀಡಿದರು.

ಜ್ಯೋತಿನಗರ ಸಮೀಪ ಮಲೆನಾಡು ವಿದ್ಯಾಸಂಸ್ಥೆಯ ಎಸ್.ಎಸ್.ಆರ್. ಪ್ರಾಯೋಗಿಕ ಪ್ರೌಢಶಾಲೆಯ 31ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶುಕ್ರವಾರ ಸಂಜೆ ಭಾಗವಹಿಸಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಪಾಲಕರ ಆಕಾಂಕ್ಷೆ ಮತ್ತು ಶಿಕ್ಷಕರ ಪರಿಶ್ರಮಕ್ಕೆ ಗೌರವ ಕೊಟ್ಟು ಮಕ್ಕಳು ವ್ಯಾಸಂಗದ ಕಡೆ ಹೆಚ್ಚು ಗಮನಹರಿಸಬೇಕು. ಜ್ಞಾನವೃದ್ದಿ ಎಂಬುದು ಸಾಮಾನ್ಯವಲ್ಲ, ವಿದ್ಯಾದೇವತೆ ಒಲಿದುಕೊಳ್ಳಲು ಶ್ರದ್ದೆ, ವಿನಯ ಬಹಳಷ್ಟು ಅವಶ್ಯಕವಾಗಿದೆ. ಹೀಗಾಗಿ ಓದುವ ವಯಸ್ಸಿನಲ್ಲಿ ಬೇರೆ ಆಲೋಚನೆಗಳಿಗೆ ತಲೆಕೆಡಿಸಿಕೊಳ್ಳದೇ ಪಾಠ-ಪ್ರವಚನದತ್ತ ಮುತುವರ್ಜಿ ವಹಿಸಬೇಕು ಎಂದರು.

ಇತಿಹಾಸ ಸೃಷ್ಟಿಸುವ ವ್ಯಕ್ತಿ, ಇತಿಹಾಸ ಬರೆಯಬಲ್ಲ ಎಂಬ ಅಂಬೇಡ್ಕರ್ ತತ್ವದಂತೆ, ವಿದ್ಯಾರ್ಥಿಗಳು ಇತಿಹಾಸ ನಿರ್ಮಿಸುವ ಸಾಮರ್ಥ್ಯ ಬೆಳೆಸಿಕೊಳ್ಳಲು ಶಿಕ್ಷಣ ಬಹುದೊಡ್ಡ ಅಸ್ತ್ರ. ಪರಿಶ್ರಮದಿಂದ ಕರಗತ ಮಾಡಿಕೊಂಡಲ್ಲ್ಲಿ ಇತಿಹಾಸ ಸೃಷ್ಟಿಸಿ ನಾಡಿನ ಹೆಗ್ಗಳಿಕೆಗೆ ಪಾತ್ರರಾಗಬಹುದು ಎಂದು ಹೇಳಿದರು.

ಎಂ.ಇ.ಎಸ್. ಗೌರವ ಕಾರ್ಯದರ್ಶಿ ಡಾ|| ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ, ಎಂಇಎಸ್ ಸಂಸ್ಥೆ ಪರಿಣಿತ ಶಿಕ್ಷಕ ವರ್ಗವನ್ನು ಒಂದುಗೂಡಿಸಿ ಬಡವರು, ಮಧ್ಯಮ ವರ್ಗ ಸೇರಿದಂತೆ ಎಲ್ಲಾ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಿರುವ ಕಾರಣ ಜಿಲ್ಲೆಯಲ್ಲಿ ಶಾಲೆ ಪ್ರಗತಿ ಹೊಂದುತ್ತಿದೆ ಎಂದರು.

ಶಾಲಾ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಕನ್ನಡಪ್ರೇಮ,ಕ್ರೀಡಾಸಕ್ತಿ,ಕಲೆಗಳ ಅನಾವರಣ ಸೇರಿದಂತೆ ಆಸಕ್ತಿ ಹೊಂದಿರುವ ವಿಷಯದಲ್ಲಿ ಹೆಚ್ಚು ಪ್ರೋತ್ಸಾಹಿಸುತ್ತಿದೆ. ಇಲ್ಲಿ ವ್ಯಾಸಂಗ ಪೂರೈಸಿದ ಅನೇಕ ವಿದ್ಯಾರ್ಥಿಗಳು ಉನ್ನತ ಉದ್ಯೋಗದಲ್ಲಿ ತೊಡಗಿಸಿಕೊಂಡು ಬದುಕು ರೂಪಿಸಿಕೊಂಡಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಶಾಲೆಯ ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎಂ.ಇ.ಎಸ್. ಅಧ್ಯಕ್ಷ ಎನ್.ಕೇಶವಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಎಂ.ವಿ.ಷಡಕ್ಷರಿ, ಶಾಲಾ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ಸತ್ಯನಾರಾಯಣ, ಪ್ರೌಢಶಾಲೆ ಶಿಕ್ಷಕ ಜಗದೀಶ್, ಶಿಕ್ಷಕರಾದ ಸದಾಶಿವಮೂರ್ತಿ, ಪ್ರತಿಮಾ, ಶ್ರೀಲಕ್ಷ್ಮಿ,ಮಂಜುನಾಥ್ ಭಟ್ ಇದ್ದರು.

—–ಸುರೇಶ್

Leave a Reply

Your email address will not be published. Required fields are marked *

× How can I help you?