
ಚಿಕ್ಕಮಗಳೂರು-ರೈತರ ಆದಾಯ ಹೆಚ್ಚಿಸಲು ಮತ್ತು ಅವರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಪ್ರಾರಂಭಿಸಿದ್ದು ಗ್ರಾಮೀಣ ಮಟ್ಟದಲ್ಲಿ ಅರಿವು ಮೂಡಿಸಲು ಮುಖಂಡರುಗಳು ಮುಂದಾಗಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಸೂಚಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸರ್ಕಾರದ ರೈತಪರ ಯೋಜನೆಗಳ ಕುರಿತು ರೈತ ಮೋರ್ಚಾ ಪದಾಧಿಕಾರಿಗಳಿಗೆ ಏರ್ಪಡಿಸಿದ್ಧ ಸಭೆಯಲ್ಲಿ ಮಂಗಳವಾರ ಅವರು ಮಾತನಾಡಿದರು.
ಬೆಳೆ ನಷ್ಟವಾಗಿರುವ ರೈತರಿಗೆ ಆರ್ಥಿಕವಾಗಿ ಸಹಾಯ ಮಾಡಲು ಕೇಂದ್ರ ಸರ್ಕಾರವು ಬೆಳೆ ವಿಮಾ ಯೋಜನೆಯನ್ನು ಪ್ರಾರಂಭಿಸಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರನ್ನು ಒಂದೇ ಸೂರಿನಡಿ ತರುವ ಪ್ರಯತ್ನ ನಡೆದಿದೆ. ಈ ಯೋಜನೆಗಾಗಿ ಸರ್ಕಾರವು ದೂರದೃಷ್ಟಿ ಮತ್ತು ಧ್ಯೇಯ ಹೊಂದಿದೆ. ವಿಪತ್ತು, ಕೀಟ ಅಥವಾ ಅನಾವೃಷ್ಟಿಯಿಂದ ಬೆಳೆ ಹಾನಿಯಾದರೆ ವಿಮಾ ಯೋಜನೆಯಡಿ ಆರ್ಥಿಕ ನೆರವು ನೀಡಲಾಗುತ್ತದೆ ಎಂದರು.
ನೀರಾವರಿಗೆ ಸಂಬoಧಿಸಿದ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಪ್ರಾರಂಭಿಸಿದೆ. ಈ ಯೋಜನೆಯಡಿ ಪ್ರತಿ ಜಮೀನಿಗೆ ನೀರು ಒದಗಿಸುವ ಉದ್ದೇಶ ಹೊಂದಿದೆ. ಹೆಚ್ಚಿನ ಬೆಳೆ ಇಳುವರಿ ಪಡೆಯಲು ಕೃಷಿ ಭೂಮಿಗೆ ನೀರಾವರಿ ಒದಗಿಸಲು ರೈತರಿಗೆ ಸಮಗ್ರ ನೆರವು ಒದಗಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ದೇಶದ ಯಾವುದೇ ರೈತರು ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು. ಈ ಮೊತ್ತವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತಿದ್ದು ಈ ಯೋಜನೆಗೆ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ರೈತರು ತಮ್ಮ ಉತ್ಪನ್ನಗಳನ್ನು ದೀರ್ಘ ಕಾಲದವರೆಗೆ ಶೇಖರಿಸಿ ಸೂಕ್ತ ಸಮಯದಲ್ಲಿ ಮಾರಾಟ ಮಾಡಲು ಕೊಲ್ಡ್ ಸ್ಟೋರೇಜ್ಗಳ ಸೌಲಭ್ಯಕ್ಕೆ ವಿಶೇಷ ಅನುದಾನ ನೀಡುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ್ಶೆಟ್ಟಿ, ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿಗಳಾದ ಹೆಚ್.ಸಿ.ಕಲ್ಮರು ಡಪ್ಪ, ನವೀನ್ಕುಮಾರ್, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ದೇವ ವೃಂದ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಎಂ.ಎಸ್.ನಾಗರಾಜ್, ಪ್ರಧಾನ ಕಾರ್ಯದರ್ಶಿ ದಿನೇಶ್ ಪಾದಮನೆ, ರೈತ ಪ್ರಭಾರಿ ರಾಮಸ್ವಾಮಿ ಶೆಟ್ಟಿಗದ್ದೆ, ಮುಖಂಡರುಗಳಾದ ಕೋಟೆ ರಂಗನಾಥ್, ಪುಣ್ಯ ಪಾ ಲ್, ದೀಪಕ್ದೊಡ್ಡಯ್ಯ, ಶ್ರೀಲಾ ಪ್ರಸನ್ನ ಮತ್ತಿತರರಿದ್ದರು.
————ಸುರೇಶ್