ಚಿಕ್ಕಮಗಳೂರು-ಸಿರವಾಸೆ ಗ್ರಾಮ ಪಂಚಾಯಿತಿ ಕಳೆದ ಎರಡೂವರೆ ದಶಕಗಳಿಂದ ನಿವೇಶನ ರಹಿತರಿಗೆ ನಿವೇಶನ ಹಂಚಿಕೆಗೊಳಿಸದೇ ಸತಾಯಿಸುತ್ತಿರುವುದನ್ನು ಖಂಡಿಸಿ ಗ್ರಾಮಸ್ಥರು ಭಾರತ ಕಮ್ಯೂಸ್ಟ್ ಪಕ್ಷ ನೇತೃತ್ವದಲ್ಲಿ ಪಂಚಾಯಿತಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಸಂತೆಮೈದಾನದಿoದ ಗ್ರಾಮ ಪಂಚಾಯಿತಿವರೆಗೆ ಕಾಲ್ನಾಡಿಗೆ ಜಾಥಾ ನಡೆಸಿದ ಗ್ರಾಮಸ್ಥರು ಹಾಗೂ ಮುಖಂಡರುಗಳು ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಗ್ರಾ.ಪಂ. ಅಧ್ಯಕ್ಷರು ಹಾಗೂ ಪಿ.ಡಿ.ಓ ರವರಿಗೆ ಮನವಿ ಸಲ್ಲಿಸಿ ಕೂಡಲೇ ನಿವೇಶನ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಕೆರೆಮಕ್ಕಿ ರಮೇಶ್, ಸಿರವಾಸೆ ವ್ಯಾಪ್ತಿಯ ಜನತೆಯು ನಿವೇಶನ, ರಸ್ತೆ ಹಾಗೂ ಆರೋಗ್ಯದಂತಹ ಮೂಲಭೂತ ಸೌಕರ್ಯಗಳಿಂದ ವಂಚಿತಗೊoಡಿದ್ದಾರೆ. ಈ ಬಗ್ಗೆ ಹಲವಾರು ವರ್ಷಗಳಿಂದ ಆಳುವ ಸರ್ಕಾರಗಳ ಗಮನ ಸೆಳೆದರೂ ಕೂಡಾ ನಿವೇಶನ ರಹಿತರ ಸಮಸ್ಯೆಗಳನ್ನು ಆಲಿಸುತ್ತಿಲ್ಲ ಎಂದು ದೂರಿದರು.
ನಿವೇಶನ ರಹಿತರಿಗೆ ನಿವೇಶನ ಹಂಚಿಕೆಯಾಗದ ಕಾರಣ ಒಂದೇ ಮನೆಯಲ್ಲಿ ಎರಡ್ಮೂರು ಕುಟುಂಗಳು ಒಟ್ಟಿಗೆ ವಾಸಿಸುವಂತಾಗಿದೆ.ಇದರಿಂದ ಇವರ ಪಾಡು ಹೇಳತೀರದಾಗಿದೆ.ಆದುದರಿಂದ ಶೀಘ್ರದಲ್ಲೇ ನಿವೇಶನಕ್ಕೆ ಜಾಗ ಗುರುತಿಸಿ ನಿವೇಶನ ಹಂಚಿಕೆ ಮಾಡಿ ವಸತಿ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದರು.
ತಾಲ್ಲೂಕಿನ ಮಲ್ಲಂದೂರು,ಸಿರವಾಸೆ ಮೂಲಕ ಹಾದು ಹೋಗುವ ಕಡಬಗೆರೆ ರಸ್ತೆ ಸಂಪೂರ್ಣ ಹಾಳಾಗಿದ್ದು ಕೂಡಲೇ ದುರಸ್ತಿಗೊಳಿಸಬೇಕು.ಸಿದ್ದರಬಾನಿನಿಂದ ಹೊನ್ನಾಳದವರೆಗೆ ರಸ್ತೆ ಅತ್ಯಂತ ಕಿರಿದಾಗಿದ್ದು ಮಳೆಗಾಲದಲ್ಲಿ ಎದುರು ಬದುರಾಗಿ ಸಂಚಾರದಿoದ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ.ಕೂಡಲೇ ರಸ್ತೆ ಅಗಲೀಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಸಿರವಾಸೆ ಸುತ್ತಮುತ್ತಲ ಗ್ರಾಮದಲ್ಲಿ ಅತಿಹೆಚ್ಚು ಕೂಲಿಕಾರ್ಮಿಕರಿದ್ದು ಆರೋಗ್ಯ ಸಮಸ್ಯೆಯಿದ್ದರೆ ನಗರಕ್ಕೆ ಹೋಗಬೇಕಾಗಿದೆ. ಹೀಗಾಗಿ ಸಿರವಾಸೆಯಲ್ಲಿರುವ ಕಿರಿಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸೇರಿ ಆರೇಳು ಸಿಬ್ಬಂದಿಗಳಿದ್ದು ಕೆಲವರನ್ನು ಬೇರೆಡೆಗೆ ನಿಯೋಜಿಸಲಾಗಿದೆ.ಇದರಿಂದ ಸ್ಥಳೀಯ ಗ್ರಾಮಸ್ಥರಿಗೆ ಆರೋಗ್ಯ ಸಮಸ್ಯೆ ಅಥವಾ ಸಣ್ಣಪುಟ್ಟ ಗಾಯಗೊಂಡರೆ ತೀವ್ರ ಸಮಸ್ಯೆ ಉಂಟಾಗುತ್ತಿದೆ ಎಂದರು.
ಸರ್ಕಾರಿ ಭೂಮಿಯಲ್ಲಿ ಹತ್ತಾರು ವರ್ಷಗಳಿಂದ ಮನೆ ನಿರ್ಮಿಸಿಕೊಂಡು ವಾಸವಾಗಿದ್ದು ೯೪ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು ಎಲ್ಲಾ ಅರ್ಜಿದಾರರಿಗೆ ಹಕ್ಕುಪತ್ರ ನೀಡಬೇಕು. ಇತ್ತೀಚೆಗೆ ಭಾರಿ ಮಳೆಯಿಂದಾಗಿ ಕಾಫಿ, ಮೆಣಸು ಮತ್ತು ಅಡಿಕೆ ಬೆಳೆ ನಾಶವಾಗಿದ್ದು ರೈತರಿಗೆ ಸೂಕ್ತ ಬೆಳೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿಪಿಐ ತಾ. ಸಹ ಕಾರ್ಯದರ್ಶಿ ದೇಜು, ವಲಯ ಕಾರ್ಯದರ್ಶಿಗಳಾದ ಜಿ. ಎಸ್.ತಾರಾನಾಥ್, ರಾಜು,ನಿತಿನ್, ಖಜಾಂಚಿ ರೇವಣ್ಣ, ಸದಸ್ಯೆ ಜಾರ್ಜ್ ಆಸ್ಟಿನ್, ಗ್ರಾ.ಪಂ. ಅಧ್ಯಕ್ಷ ಗಂ ಗಯ್ಯ, ಮುಖಂಡರುಗಳಾದ ಕೃಷ್ಣಪ್ಪ, ಪೂರ್ಣೇಶ್, ಮಂಜುನಾಥ್, ವಸಂತಿ, ಪ್ರೇಮಲತಾ ಮತ್ತಿತರರು ಹಾಜರಿದ್ದರು.
——–ಸುರೇಶ್