ಚಿಕ್ಕಮಗಳೂರು-ಕನ್ನಡ ರಾಜ್ಯೋತ್ಸವದ ವೇಳೆ ಕಪ್ಪುಬಟ್ಟೆಯಿಂದ ಧ್ವಜಕಟ್ಟೆ ಶೃಂಗರಿಸಿದ್ದ ನರಸಿಂಹರಾಜಪುರ ತಾಲೂಕು ಆಡಳಿತದ ವಿರುದ್ಧ ಜಿಲ್ಲಾಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುವಂತೆ ಕರವೇ ಜಿಲ್ಲಾಧ್ಯಕ್ಷ ಕೆಂಪನಹಳ್ಳಿ ಅಶೋಕ್ ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು,ಕನ್ನಡ ರಾಜ್ಯೋತ್ಸವ ಆಚರಣೆ ವೇಳೆಯಲ್ಲಿ ಧ್ವಜಕಟ್ಟೆಯನ್ನು ಶೃಂಗರಿಸುವುದಕ್ಕೆ ಹಲವು ನಿಯಮಗಳಿವೆ.ಆದರೆ ಅಲ್ಲಿನ ತಾಲೂಕು ಆಡಳಿತ ಧ್ವಜ ಕಟ್ಟೆಯನ್ನು ಕಪ್ಪುವಸ್ತ್ರದಿಂದ ಶೃಂಗರಿಸಿ ತಾಯಿ ಭುವನೇಶ್ವರಿಗೆ ಅಪಮಾನಗೈದಿದೆ.ಸಂಭ್ರಮದ ದಿನವನ್ನು ಅತ್ಯಂತ ಕರಾಳ ದಿನದಂತೆ ಆಚರಿಸಿ ಕನ್ನಡ ನಾಡಿಗೆ ದ್ರೋಹ ಎಸಗಲಾಗಿದೆ ಎಂದು ಕಿಡಿಕಾರಿದ್ದಾರೆ.
ನಾಡಿನ ಇತಿಹಾಸ, ಕವಿಸಂತರ ಕನ್ನಡ ಪ್ರೀತಿಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಅತ್ಯಂತ ಹೆಮ್ಮೆಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲು ಮುಂದಾಗುತ್ತೇವೆ.ನಾಡಿನ ಪರಂಪರೆ ಪರಿಚಯಿಸುವ ನಿಟ್ಟಿನಲ್ಲಿ ವಚನಕಾರರು, ಸಂತರು, ದಾರ್ಶನಿಕರು ಹಾಗೂ ಜ್ಞಾನ ಪೀಠ ಕವಿಗಳು ಅನೇಕ ವರ್ಷಗಳಿಂದ ಸಾಧನೆಗೈದು ಕನ್ನಡಕಂಪನ್ನು ತಮ್ಮದೇ ಶೈಲಿಯಲ್ಲಿ ದೇಶಾದ್ಯಂತ ಪಸರಿಸಿದ್ದಾರೆ. ಆದರೆ ನ.ರಾ.ಪುರ ಆಡಳಿತವು ಈ ಎಲ್ಲಾ ಸಾಧಕರಿಗೂ ಅವಮಾನಿಸುವ ರೀತಿಯಲ್ಲಿ ಆಚರಣೆ ಮಾಡಿರುವುದು ಸರಿಯಲ್ಲ ಎಂದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಹಲವಾರು ಕವಿಗಳಿಗೆ ಜನ್ಮವಿತ್ತ ಪುಣ್ಯಭೂಮಿ. ಮಲೆನಾಡು ಹಾಗೂ ಬಯಲು ಸೀಮೆ ತನ್ನದೇ ವಿಭಿನ್ನ ಬರವಣಿಗೆ ಮುಖಾಂತರ ಛಾಪು ಮೂಡಿಸಿರುವ ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಕಪ್ಪುಬಟ್ಟೆ ಬಳಸಿರುವುದು ಅತ್ಯಂತ ನಾಚಿಕೇಡಿನ ಸಂಗತಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ನ.ರಾ.ಪುರ ಕರವೇ ಅಧ್ಯಕ್ಷರು ಆಗಿರುವ ಪ್ರಮಾದದ ಬಗ್ಗೆ ತಹಶೀಲ್ದಾರರ ಗಮನಕ್ಕೆ ತಂದ ತದನಂತರವೇ ಧ್ವಜಕಟ್ಟೆಯ ಕಪ್ಪುವಸ್ತ್ರವನ್ನು ತೆರವುಗೊಳಿಸಲಾಗಿದೆ.ಒಂದು ವೇಳೆ ಗಮನಹರಿಸದೇ ಇದ್ದಲ್ಲಿ ಕಪ್ಪುವಸ್ತ್ರದಲ್ಲೇ ಕಾರ್ಯಕ್ರಮ ಮುಂದುವರೆಯುತ್ತಿತ್ತು.ಇದು ತಾಲೂಕು ಆಡಳಿತದ ಮುಖ್ಯಸ್ಥರಾದ ತಹಶೀಲ್ದಾರರ ಅತೀ ದೊಡ್ಡ ಪ್ರಮಾದ ಎಂದಿರುವ ಅವರು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನಿರ್ಲಕ್ಷಿತರ ವಿರುದ್ಧ ತೀವ್ರ ಕ್ರಮ ಕೈಗೊಳ್ಳಬೇಕು.
ಪ್ರತಿ ತಾಲ್ಲೂಕಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ನಿಗಾವಹಿಸುವ ಜಿಲ್ಲಾಡಳಿತ, ರಾಜ್ಯೋತ್ಸವದಲ್ಲಿ ಬೇಜವಾಬ್ದಾರಿ ಕರ್ತವ್ಯ ನಿರ್ವಹಿಸಿರುವ ನರಸಿಂಹರಾಜಪುರ ತಹಶೀಲ್ದಾರ್, ಸಂಬoಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
ವಿಳಂಭ ಧೋರಣೆ ಅನುಸರಿಸಿದರೆ ಕರವೇ ಜಿಲ್ಲಾದ್ಯಂತ ಉಗ್ರವಾದ ಹೋರಾಟ ರೂಪಿಸಲಿದೆ ಎಂದು ಎಚ್ಚರಿಸಿದ್ದಾರೆ.