ಚಿಕ್ಕಮಗಳೂರು-ಮಕ್ಕಳಿಗೆ ಕಲಿಕೆ ಜೊತೆಗೆ ಸಾಂಸ್ಕೃತಿಕ, ಸಾಹಿತ್ಯಕ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಿಸಬೇಕು. ಲವಲವಿಕೆಯಿಂದ ಇದ್ದರೆ ಕಲಿಕೆಯಲ್ಲೂ ಹೆಚ್ಚು ಮುತುವರ್ಜಿಯಿಂದ ತೊಡಗಲು ಸಾಧ್ಯ ಎಂದು ಬೊಗಸೆ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಬಿ.ಇ.ನಾಗೇಶ್ ಹೇಳಿದರು.
ಜಿ.ಪಂ., ತಾ.ಪಂ., ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ತಾಲ್ಲೂಕಿನ ಬೊಗಸೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ಧ ಕಡವಂತಿ ಕ್ಲಸ್ಟರ್ ಮಟ್ಟದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರ ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ, ಮಕ್ಕಳ ಮೇಳ, ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಮಕ್ಕಳು ತಮ್ಮಲ್ಲಿರುವ ಕಲೆ, ಸಾಹಿತ್ಯ, ಜಾನಪದ ಪ್ರಾಕಾರದ ಪ್ರತಿಭೆಯನ್ನು ತೋರಿ ಸಾಂಸ್ಕೃತಿಕವಾಗಿ ಮುಂದೆ ಬರಬೇಕು ಎಂದು ಕಿವಿಮಾತು ಹೇಳಿದರು.
ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ಸಾಂಸ್ಕೃತಿಕ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಅನಾವರಣ ಮಾಡುವ ಮೂಲಕ ಮಕ್ಕಳು ಸರ್ವಾಂಗೀಣ ಬೆಳವಣಿಗೆ ಸಾಧಿಸಲು ಅವಕಾಶ ಕಲ್ಪಿಸಬೇಕು. ಸೋಲು, ಗೆಲುವಿನ ಬಗ್ಗೆ ಯೋಚಿಸದೆ ಸ್ಪರ್ಧೆಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದರು.
ದೇಶಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಮಕ್ಕಳಿಗೆ ತಿಳಿಸಿ ಪ್ರೋತ್ಸಾಹಿಸಬೇಕು. ಪ್ರತಿಭಾ ಕಾರಂಜಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲೆಗಳು ಸಾಕ್ಷಾತ್ಕಾರಗೊಳ್ಳಲು ಸಹಕಾರಿಯಾಗಿದ್ದು ಹಳ್ಳಿ ಬದುಕು, ಕಲೆಯನ್ನು ಪರಿಚಯಿಸಲು ಸೂಕ್ತ ವೇದಿಕೆ ಪ್ರತಿಭಾ ಕಾರಂಜಿ ಎಂದು ತಿಳಿಸಿದರು.
ಕಡವಂತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮೀ ಮಾತನಾಡಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣ ಹಾಗೂ ಉತ್ತೇಜನ ನೀಡುವುದು ಪ್ರತಿಭಾ ಕಾರಂಜಿ ಕಾರ್ಯಕ್ರಮ ಆಯೋಜನೆಯ ಪ್ರಮುಖ ಆಶಯವಾಗಿದೆ. ಶಿಕ್ಷಣ ಮಕ್ಕಳ ವಿದ್ಯಾರ್ಜನೆಗೆ ಮಾತ್ರ ಸೀಮಿತವಾಗಿರದೆ ಅವರಲ್ಲಿನ ಪ್ರತಿಭೆ ಹೊರಹಾಕಿ ವಿಕಾಸ ಹೊಂದಲು ಸಹಾಯ ಮಾಡುವುದು ಎಂದು ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯ ಎನ್.ಎಸ್.ಗುರುಸಿದ್ದಪ್ಪ ಮಾತನಾಡಿ ಪ್ರಸಕ್ತ ಸಾಲಿನಲ್ಲಿ ಪ್ರತಿಭಾ ಕಾರ0ಜಿಯಲ್ಲಿ ಸುಮಾರು 14 ಶಾಲೆಯಿಂದ 200ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು ಛದ್ಮವೇಷ, ಆಶುಭಾಷಣ, ಕಂಠಪಾಠ, ದೇಶ-ಭಕ್ತಿಗೀತೆ ಸ್ಪರ್ಧೆ, ನೃತ್ಯ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ ಎಂದರು.
ಇದೇ ವೇಳೆ ವಿವಿಧ ಸ್ಪರ್ಧೆಯಲ್ಲಿ ಕಿರಿಯ-ಹಿರಿಯರ ವಿಭಾಗದಲ್ಲಿ ಬೊಗಸೆ ಶಾಲೆಯ 18 ಮಕ್ಕಳು ಪ್ರಶಸ್ತಿಯನ್ನು ಗಳಿಸಿದವು. ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕಿ ಪ್ರೀತಿ, ಇಸಿಓ ಜಗದೀಶ್, ಕಡವಂತಿ ಗ್ರಾ.ಪಂ. ಸದಸ್ಯರಾದ ವಿನೋ ದ್, ರಂಜಿತ, ಶಿಕ್ಷಕರಾದ ಶಾಂತಮ್ಮ, ಸಾವಿತ್ರ ಉಪಸ್ಥಿತರಿದ್ದರು.
———–——–ಸುರೇಶ್