ಚಿಕ್ಕಮಗಳೂರು-ಶಿಕ್ಷಣದ ಜೊತೆಯಲ್ಲಿ ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಲು ಹಾಗೂ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪ್ರತಿಭಾ ಕಾರಂಜಿ ಸಹಕಾರಿಯಾಗಲಿದೆ ಎಂದು ಶಿಕ್ಷಣ ಇಲಾಖೆಯ ಶೈಕ್ಷಣಿಕ ಸಂಯೋಜಕರಾದ ಶ್ರೀಮತಿ ಜಾನಕಮ್ಮ ನವರು ಅಭಿಪ್ರಾಯಿಸಿದರು.
ನಗರದ ಹೊರವಲಯದಲ್ಲಿರುವ ಬೀಕನಹಳ್ಳಿಯಲ್ಲಿನ ಸೆಂಟ್ ಝೇವಿಯರ್ ಶಾಲೆಯಲ್ಲಿ ನಡೆದ ಇಂದಾವರ ಗ್ರಾಮ ಪಂಚಾಯಿತಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳು ಅವಶ್ಯಕವಾಗಿದ್ದು ಪ್ರತಿ ವಿದ್ಯಾರ್ಥಿ ಗಳಲ್ಲಿ ಪ್ರತ್ಯೇಕ ಪ್ರತಿಭೆಗಳು ಅಡಗಿಕೊಂಡಿರುತ್ತದೆ. ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಅವರನ್ನು ಉತ್ತಮರನ್ನಾಗಿ ಮಾಡಲು ಈ ಪ್ರತಿಭಾ ಕಾರಂಜಿಯು ಸಹಕಾರಿಯಾಗಿದ್ದು ಇದರ ಸದುಪಯೋಗವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಕ್ಷಕರು ಹಾಗೂ ಪೋಷಕರು ಸಹ ವಿದ್ಯಾರ್ಥಿಗಳ ಪ್ರತಿಭೆಯನ್ನು ಉತ್ತೇಜಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ತಾಲೂಕು ಮಟ್ಟದ ರೀತಿಯಲ್ಲಿ ಅದ್ದೂರಿಯಾಗಿ ಆಯೋಜಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಸೆಂಟ್ ಝೇವಿಯರ್ ಶಾಲೆಯ ಬದ್ಧತೆಗೆ ಅಭಿನಂದಿಸಿದರು.
ಶಾಲೆಯ ಕಾರ್ಯದರ್ಶಿ ರೋಷನ್ ಸಿಕ್ವೇರಾ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳು ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಪ್ರತಿಭೆಗಳೊಂದಿಗೆ ರಾಜ್ಯಮಟ್ಟದವರೆಗೆ ಸ್ಪರ್ಧಿಸುತ್ತಿದ್ದು ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೇಜಿಸುವ ಸಲುವಾಗಿ ಕಾರ್ಯಕ್ರಮವನ್ನು ವಿಶೇಷ ಕಾಳಜಿ ವಹಿಸಿ ಅದ್ದೂರಿಯಾಗಿ ನಡೆಸಲಾಗುತ್ತಿದೆ.ಸಿಕ್ಕ ಸಮಯವನ್ನು ವ್ಯರ್ಥ ಮಾಡದೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಕ್ರೀಡಾ ಮನೋಭಾವನೆಗಳನ್ನು ಖಾಸಗಿ ಶಾಲೆಯ ವಿದ್ಯಾರ್ಥಿಗಳು ಅಳವಡಿಸಿಕೊಂಡಾಗ ಉತ್ತಮ ಸಾಧನೆ ಸಾಧ್ಯ ಎಂದು ಹೇಳಿದರು.
ತಾಲೂಕು ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಅಣ್ಣನಾಯ್ಕ್ ಮಾತನಾಡಿ ದೇವರ ಮೂರ್ತಿಯಿಂದಿರುವ ಪ್ರಭಾವಳಿಯಂತೆ ವ್ಯಕ್ತಿಗಳ ಹಿಂದೆ ಪ್ರಭಾ ವಲಯವಿರುತ್ತದೆ. ಅದು ಗುರುತಿಸಿಕೊಂಡಾಗ ಮಾತ್ರ ಅವರ ವ್ಯಕ್ತಿತ್ವಕ್ಕೆ ಮೆರಗು ನೀಡುತ್ತದೆ. ಇದೇ ಪ್ರಭಾವಳಿಯನ್ನು ವಿದ್ಯಾರ್ಥಿಗಳಲ್ಲಿ ಗುರುತಿಸಿ ಹೊರ ತರುವಂತೆ ಮಾಡುವುದು ಶಿಕ್ಷಣ ಮತ್ತು ಪ್ರತಿಭಾ ಕಾರಂಜಿ ಯಾಗಿದೆ ಎಂದರು.
ಬೀಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುಳ ಶಿವಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಸದಸ್ಯರಾದ ವಿಜಯ್ ಕುಮಾರ್, ಮಂಜೇಗೌಡ, ಯೋಗೇಶ್, ಸಂಸ್ಥೆಯ ಅಧ್ಯಕ್ಷರಾದ ಮೋಕ್ಷನಾಥ್ ಶಾಲಾ ಆಡಳಿತ ಮಂಡಳಿಯ ಸೌಮ್ಯಶ್ರೀ ಮತ್ತು ರೇಷ್ಮಾ ಕ್ಯಾಸ್ಟೋಲೀನ, ಸಂಪನ್ಮೂಲ ವ್ಯಕ್ತಿಗಳಾಗಿ ಅನಿತಾ ಸಿ.ಆರ್, ತಾಲೂಕು ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ರವಿ, ನಿರ್ದೇಶಕರಾದ ವಿಜಯಲಕ್ಷ್ಮಿ, ಪುಟ್ಟಸ್ವಾಮಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಯಶೋಧ ಹಾಗೂ ಶಾಲೆಯ ಪ್ರಾಂಶುಪಾಲರಾದ ರಾಕೇಶ್ ಡಿಸೋಜಾ ಇದ್ದರು.