ಚಿಕ್ಕಮಗಳೂರು-ಪ್ರವಾಸೋದ್ಯಮ ಅಭಿವೃಧ್ದಿಪಡಿಸುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತವು ಪ್ರವಾಸಿಗರಿಗೆ ಸಕಲ ಸೌಲಭ್ಯಗಳ ವ್ಯವಸ್ಥೆ ಕಲ್ಪಿಸಿದಾಗ ಮಾತ್ರ ರಾಜ್ಯ ಹಾಗೂ ದೇಶದಲ್ಲೇ ಪ್ರಕೃತಿದತ್ತ ಮಲೆನಾಡು ಮನ್ನಣೆಗಳಿಸಲು ಸಾದ್ಯ ಎಂದು ಖ್ಯಾತ ಪ್ರವಾಸೋದ್ಯಮ ಉಪನ್ಯಾಸಕ ಇ|| ಸಾ.ನಾ.ರಮೇಶ್ ಹೇಳಿದರು.
ನಗರದ ಬೈಪಾಸ್ ಸಮೀಪ ಜಿಲ್ಲಾ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್‌ನಿಂದ ಕಾರ್ತಿಕ ಸಂಭ್ರಮದಂದು ಹಮ್ಮಿಕೊಂಡಿದ್ಧ ‘ನಮ್ಮೂರು-ನಮ್ಮ ಪ್ರವಾಸೋದ್ಯಮ’ ಕುರಿತ ಚಿಂತನ ಮಂಥನ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದ ಬ್ಯಾಂಕಾoಕ್,ಥೈಲ್ಯಾಂಡ್ ದೇಶಗಳಲ್ಲಿ ಮಾನವ ನಿರ್ಮಿತದಿಂದ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಭೂಸ್ವರ್ಗದಂತೆ ನಿರ್ಮಾಣಗೊಂಡಿರುವ ಚಿಕ್ಕಮಗಳೂರಿಗೆ ಪ್ರಕೃತಿ ತಾನಾಗಿಯೇ ಒಲಿದು ಬಂದಿದ್ದು,ವರ್ಷದಲ್ಲಿ ಹಲವಾರು ದಿನಗಳ ಕಾಲ ಗಿರಿಪರ್ವತ ಶ್ರೇಣಿಗಳಲ್ಲಿ ನಿಷೇಧ ಹೇರಿ ಪ್ರವಾಸಿಗರ ಸಂಖ್ಯೆ ಕ್ಷೀಣಿಸುವಂತೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಲೆನಾಡಿನಲ್ಲಿ ಪ್ರವಾಸಿಗರು ಹೆಚ್ಚಾದರೆ ನಗರ ಸೇರಿದಂತೆ ಗಿರಿಶ್ರೇಣಿಯಲ್ಲಿ ವಿಪರೀತ ವಾಹನಗಳ ದಟ್ಟಣೆ ಹಾಗೂ ಕಸದ ರಾಶಿ ಹೆಚ್ಚಾಗಲಿದೆ ಎಂಬ ಮಾತುಗಳು ಸ್ಥಳೀಯರಲ್ಲಿದೆ.ಈ ಬಗ್ಗೆ ಸ್ಥಳೀಯ ಆಡಳಿತವು ಪ್ರವಾಸಿಗರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದರೆ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ.ಜೊತೆಗೆ ಪ್ರವಾಸಿಗರನ್ನೆ ನಂಬಿ ಬದುಕು ಕಟ್ಟಿಕೊಂಡಿರುವ ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಜಿಲ್ಲೆ ಅಭಿವೃದ್ದಿ ವಿಚಾರದಲ್ಲಿ ಬಹಳಷ್ಟು ಹಿಂದೆ ಬಿದ್ದಿದೆ. ಶಿವಮೊಗ್ಗದಲ್ಲಿ ಈಗಾಗಲೇ ಎರಡ್ಮೂರು ಮೆಡಿಕಲ್ ಕಾಲೇಜು ಕಾರ್ಯನಿರ್ವಹಿಸುತ್ತಿದೆ. ಹಾಸನ ಬೃಹಾಧಾಕರವಾಗಿ ಬೆಳೆದು ಅಭಿವೃದ್ದಿ ಪಥದತ್ತ ಸಾಗುತ್ತಿದೆ ಎಂದ ಅವರು ಚಿಕ್ಕಮಗಳೂರು ನಗರಾಭಿವೃದ್ದಿ ಹಾಗೂ ಪ್ರವಾಸೋದ್ಯಮದಲ್ಲಿ ಹಲವು ತೊಡಕು ಗಳ ನಡುವೆ ಪುಟ್ಟಹೆಜ್ಜೆ ಇಡುತ್ತಿದೆ ಎಂದು ತಿಳಿಸಿದರು.
ಪ್ರಸ್ತುತ ಪ್ರವಾಸಿಗರು ಚಿಕ್ಕಮಗಳೂರಿನ ಸೌಂದರ್ಯ ಸವಿಯಲು ಅನೇಕ ನಿಯಮಗಳನ್ನು ರೂಪಿಸುತ್ತಿರುವ ಹಿನ್ನೆಲೆ ಮಡಿಕೇರಿ ಅಥವಾ ಕೇರಳ ರಾಜ್ಯದತ್ತ ಮುಖಮಾಡುತ್ತಿರುವ ಪರಿಣಾಮ ಪ್ರವಾಸಿಗರನ್ನು ನಂಬಿರುವ ಹೋಂಸ್ಟೆ ಹಾಗೂ ರೆಸಾರ್ಟ್ಗಳ ಬದುಕಿಗೆ ಕೊಡಲಿಪೆಟ್ಟು ಬೀಳುತ್ತಿದೆ. ಹೀಗಾಗಿ ಜಿಲ್ಲಾಡಳಿತ ಸುಲಲಿತ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಬೇಕಿದೆ ಎಂದರು.
ಜಿಲ್ಲೆಗಾಗಮಿಸುವ ಪ್ರವಾಸಿಗರಿಗೆ ಮಲೆನಾಡು ಪ್ರದೇಶ ಕಲುಷಿತಗೊಳಿಸದಂತೆ ಕಟ್ಟುನಿಟ್ಟಿನ ಕ್ರಮ ಹಾಗೂ ಪ್ರವಾಸಿಗರಿಗೂ ಅನುಕೂಲವಾಗುವ ನಿಯಮ ರೂಪಿಸಬೇಕು. ಪ್ಲಾಸ್ಟಿಕ್ ತ್ಯಜಿಸಬೇಕು. ಗಾಜಿನ ಬಾಟಲ್‌ಗ ಳಲ್ಲಿ ನೀರು ಬಳಸಲು ಸೂಚಿಸಬೇಕು ಹಾಗೂ ಬಾಟಲ್ ಹಿಂತಿರುಗಿಸಿದರೆ ಬಹುಮಾನ ವಿತರಿಸುತ್ತೇವೆಂದು ಘೋಷಿಸಬೇಕು ಎಂದು ಹೇಳಿದರು.
ಅಸೋಸಿಯೇಷನ್ ಅಧ್ಯಕ್ಷ ಜಿ.ರಮೇಶ್ ಮಾತನಾಡಿ, ಅನೇಕ ವರ್ಷಗಳಿಂದ ನಿರಂತರ ಚಟುವಟಿಕೆ ಯಲ್ಲಿ ಇಂಜಿನಿಯರ್‌ಗಳು ತೊಡಗಿಸಿಕೊಂಡಿದ್ದಾರೆ. ಸಮಾಜದ ಚಿಂತಕರಾಗಿ, ಸಾಮಾನ್ಯ ವರ್ಗದ ಜನರೊoದಿಗೆ ಉತ್ತಮವಾಗಿ ಬೆರೆಯುವ ಗುಣವನ್ನು ಇಂಜಿನಿಯರ್‌ಗಳು ಬೆಳೆಸಿಕೊಂಡಿದ್ದಾರೆ ಎಂದು ಹೇಳಿದರು.
ಇಂಜಿನಿಯರ್ ವೃತ್ತಿಯಲ್ಲಿ ಪರಸ್ಪರ ಪರಿಚಯಿಸುವ ನಿಟ್ಟಿನಲ್ಲಿ ಅಸೋಸಿಯೇಷನ್ ಜಾಲತಾಣವನ್ನು ಬಿಡುಗಡೆಗೊಳಿಸಿದೆ. 100 ಸದಸ್ಯರ ಸಂಖ್ಯಾಬಲವನ್ನು ಹೊಂದಿರುವ ಅಸೋಸಿಯೇಷನಲ್ಲಿ ಪದಾಧಿಕಾರಿಗಳು, ಸದಸ್ಯರುಗಳು ಸಂಪೂರ್ಣ ಮಾಹಿತಿ ಅಡಕಗೊಳಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತರೀಕೆರೆ ಜಿ.ಪಂ. ಇಂಜಿನಿಯರ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಹೆಚ್.ದಯಾಶಂಕರ್, ಯು.ಎಸ್. ಕಮ್ಯೂನಿಕೇಷನ್ ಎಸ್.ಎಂ.ಕೆ.ಉಮಾಪತಿ, ನಗರಸಭೆ ಸಹಾಯಕ ಅಭಿಯಂತರ ಎಂ.ವಿ.ಲೋಕೇಶ್, ಅಸೋಸಿಯೇಷನ್ ಕಾರ್ಯದರ್ಶಿ ಅಬ್ದುಲ್ ಕಬೀರ್, ಸಂ ಯೋಜಕ ಕೆ.ಜಿ.ವೆಂಕಟೇಶ್ ಮತ್ತಿತರರಿದ್ದರು.
——————ಸುರೇಶ್