ಚಿಕ್ಕಮಗಳೂರು-ಆತಂಕವಾದ,ಹಲಾಲ್,ಲವ್‌ಜಿಹಾದಿಯಂತಹ ಅನರ್ಥಗಳಿಗೆ ಅಸಹಾಯಕತೆ ನಮ್ಮ ಪ್ರತಿಕ್ರಿಯೆ ಆಗಬಾರದು-ಸಿ.ಟಿ.ರವಿ

ಚಿಕ್ಕಮಗಳೂರು-ಆತಂಕವಾದ,ಹಲಾಲ್,ಲವ್‌ಜಿಹಾದಿಯಂತಹ ಅನರ್ಥಗಳಿಗೆ ಅಸಹಾಯಕತೆ ನಮ್ಮ ಪ್ರತಿಕ್ರಿಯೆ ಆಗಬಾರದು.ರಾಷ್ಟ್ರ ಮತ್ತು ಸಮಾಜರಕ್ಷಣೆ ಸದಾ ಸನ್ನದ್ಧರಾದ ಸಮಾಜ ನಮ್ಮದಾಗಬೇಕು ಎಂದು ಸಿ.ಟಿ.ರವಿ ತಿಳಿಸಿದರು.

ಜಿಲ್ಲಾ ರಜಪೂತ ಮಂಡಳಿ ನಗರದ ಎಂ.ಎಲ್.ವಿ.ರೋಟರಿ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ‘ರಾಷ್ಟ್ರವೀರ ಮಹಾರಾಣಾ ಪ್ರತಾಪಸಿಂಗ್‌ಜೀ ರವರ 485ನೆಯ ಜಯಂತಿ’ ಮತ್ತು ‘ಸಂಘದ ವಾರ್ಷಿಕೋತ್ಸವದ ಸಮಾರಂಭದ’ ಮುಖ್ಯಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಮಹಾರಾಣಾನಂತಹ ಧೀರ-ಶೂರರ ವ್ಯಕ್ತಿತ್ವದ ಗುಣಗಾನ ಪ್ರೇರಣೆ ಪ್ರತಿ ಮಕ್ಕಳಿಗೆ ಸಿಗದಿದ್ದರೆ ನಮ್ಮದು ದುರ್ಬಲ ಸಮಾಜವಾಗುತ್ತದೆ.ಸoಘರ್ಷ ಕ್ಷಾತ್ರ ಹೋರಾಟದ ಅರಿವಿಲ್ಲದ ಮಂದಿ ಭಾರತದ ಇತಿಹಾಸವನ್ನು ಸೋಲಿನ ಇತಿಹಾಸವೆಂದು ಬಿಂಬಿಸುವ ಯತ್ನ ನಡೆಸಿದ್ದಾರೆ. ವಾಸ್ತವವಾಗಿ ನಮ್ಮದು ಸಂಘರ್ಷ, ಭಕ್ತಿ, ತ್ಯಾಗ, ಪರಾಕ್ರಮ, ಧೈರ್ಯ-ಶೌರ್ಯದ ಇತಿಹಾಸ.ನಿರಂತರ ಸಂಗ್ರಾಮ ಮತ್ತು ಸಂಘರ್ಷದ ಹೋರಾಟ ನಡೆದಿರದಿದ್ದರೆ ನಮ್ಮ ಸ್ಮಿತೆ-ಅಸ್ಥಿತ್ವ ಕಳೆದುಕೊಳ್ಳುತ್ತಿದ್ದೇವೆನೊ ಎಂದು ರವಿ ಬಣ್ಣಿಸಿದರು.

ರಾಷ್ಟ್ರಭಕ್ತಿ, ಸ್ವಾಭಿಮಾನಕ್ಕೆ ಮತ್ತೊಂದು ಹೆಸರೆ ರಾಣಾಪ್ರತಾಪ್.ಕ್ಷಾತ್ರಬಲವಿಲ್ಲದೆ ರಾಷ್ಟ್ರರಕ್ಷಣೆ ಕಷ್ಟಕರ.ಸರಿಸುಮಾರು ಐದು ಶತಮಾನಗಳ ಹಿಂದೆ ಉತ್ತರಭಾರತದ ಅತಿರಥ-ಮಹಾರಥರೆನಿಸಿದ ವೀರರೆಲ್ಲ ಅಕ್ಬರ್ ಸಂಬoಧ ಹೊಂದಲು ತವಕಿಸುತ್ತಿದ್ದ ಸಂದರ್ಭದಲ್ಲಿ ಪುಟ್ಟ ಮೇವಾಡ ರಾಜ್ಯದ ದೊರೆ ರಾಣಾ ದೇಶ ಮತ್ತು ಧರ್ಮದ ಪರನಿಂತು ಹೋರಾಡಿದ ವೀರ ಇತಿಹಾಸ ಇದೆ.ಆತನ ಕುದುರೆ ‘ಚೇತಕ್’ ಪ್ರತಿಕೃತಿ ಯೂರೋಪ್‌ನ ಸೊರೋಕ್ಕೊ ಮ್ಯೂಸಿಯಂನಲ್ಲಿ ಸ್ವಾಭಿಮಾನ ಸ್ವಾಮಿನಿಷ್ಠೆ ಸಾರುತ್ತಿದೆ ಎಂದರು.

ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ ಟಿ.ಜಿ.ಸಂಗ್ರಾಮಸಿoಗ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಧೈರ್ಯ-ಸ್ಥೈರ್ಯಗಳಿಗೆ ಹೆಸರಾದ ಮಹಾರಾಣಾ ಯುವಜನಾಂಗಕ್ಕೆ ಪ್ರೇರಕ. ಮಹಾರಾಣಾ 117 ಯುದ್ಧಗಳನ್ನು ಮಾಡಿದ ಇತಿಹಾಸವಿದೆ.ಬಾದಶ:ಅಕ್ಬರ್ ವಿರುದ್ಧ ಪುಟ್ಟರಾಜ್ಯದ ರಾಜನಾಗಿ ಹೋರಾಡಿದ ಧೈರ್ಯಶಾಲಿ.ಅವನಂತೆಯೆ ನಮ್ಮ ಕನ್ನಡನಾಡಿನ ರಾಣಿಚೆನ್ನಮ್ಮ, ಅಬ್ಬಕ್ಕದೇವಿ, ಕೃಷ್ಣದೇವರಾಯ ಮತ್ತಿತರ ಹತ್ತಾರು ರಾಜರು ಮೊಘಲರ ವಿರುದ್ಧ, ಬ್ರಿಟಿಷರ ವಿರುದ್ಧ ಹೋರಾಡಿ ಆದರ್ಶರಾಗಿ ಮೆರೆದಿದ್ದಾರೆ ಎಂದರು.

ಸoಜೀವಿನಿ ವಿದ್ಯಾಸಂಸ್ಥೆಯ ಅಧ್ಯಕ್ಷೆ ಎಸ್.ಶಾಂತಕುಮಾರಿ ಮುಖ್ಯಅತಿಥಿಗಳಾಗಿ ಮಾತನಾಡಿ ಶಿಕ್ಷಣದಿಂದ ಶೋಷಣೆ ಮುಕ್ತಿ.ಯಾವುದೇ ಸಮಾಜ ಅಭಿವೃದ್ಧಿ ಹೊಂದಲು ಶಿಕ್ಷಣವಂತರಾಗಬೇಕು ಎಂದು ಹೇಳಿದರು.

ರಜಪೂತ ಮಂಡಳಿಯ ಅಧ್ಯಕ್ಷ ಎಸ್.ಎ.ಶಂಕರಸಿoಗ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಕೇವಲ 75ಕುಟುಂಬಗಳಿರುವ ರಜಪೂತರ ಸಂಘಟನೆ ನಾಲ್ಕು ದಶಕಗಳಿಂದ ನಡೆದಿದೆ.ಸ್ವಂತಕಟ್ಟಡ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ ನಿವೇಶನ ಕೊಡಿಸಬೇಕೆಂದು ಮನವಿ ಮಾಡಿದರು.

ಜಿಲ್ಲಾ ಕಾರ್ಯಧರ್ಶಿ ಹರೀಶಸಿಂಗ್ ವಾರ್ಷಿಕ ವರದಿ ಮಂಡಿಸಿ ಕಳೆದ ಹತ್ತು ವರ್ಷಗಳಿಂದ ರಾಣಾಪ್ರತಾಪ್ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸಲಾಗುತ್ತಿದೆ. ದುರ್ಗಾಪೂಜೆ, ಪ್ರತಿಭಾ ಪುರಸ್ಕಾರ, ಆಟೋಟ ಸ್ಪರ್ಧೆಗಳು ಹಿರಿಯರಿಗೆ ಗೌರವ ಸಮರ್ಪಣೆಯಂತಹ ಚಟುವಟಿಕೆಗಳನ್ನು ಪ್ರತಿವರ್ಷ ನಡೆಸಲಾಗುತ್ತಿದೆ ಎಂದರು.

ಸoಘದ ಹಿರಿಯ ಸದಸ್ಯ ಸಿಂದಿಗೆರೆಯ ಅಣ್ಣಪ್ಪಸಿಂಗ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಜಿಲ್ಲಾ ಕೋಶಾಧ್ಯಕ್ಷ ಬಿ.ಹರಿಸಿಂಗ್ ಸ್ವಾಗತಿಸಿ, ಉಪಾಧ್ಯಕ್ಷೆ ಹೇಮಾವತಿ ರಾಜುಸಿಂಗ್ ವಂದಿಸಿದರು.

ಸಹಕಾರ್ಯದರ್ಶಿ ರೇಖಾ ಪುಷ್ಪಾರಾಜಸಿಂಗ್ ಕಾರ್ಯಕ್ರಮ ನಿರೂಪಿಸಿದ್ದು, ಸಂಘಟನಾ ಕಾರ್ಯದರ್ಶಿ ಗೀತಾಪ್ರಕಾಶಸಿಂಗ್ ಪ್ರಾರ್ಥಿಸಿದರು.

ನಿರ್ದೇಶಕರುಗಳಾದ ಧರ್ಮಸಿಂಗ್, ಭೀಮಸಿಂಗ್, ನೇಮಸಿಂಗ್, ಕುಮಾರಸಿಂಗ್, ಗೋವಿಂದಸಿoಗ್, ಶೇಖರಸಿಂಗ್ ಮತ್ತು ಪ್ರೇಮಸಿಂಗ್ ಮುಖ್ಯಅತಿಥಿಗಳನ್ನು ಸನ್ಮಾನಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಂದ್ರಕಲಾ, ಕ್ರೀಡಾ ವಿಜೇತರಿಗೆ ಪ್ರಕಾಶಸಿಂಗ್ ಸಾಧಕರಿಗೆ ಹೇಮಾವತಿ ಗೌರವ ಸಮರ್ಪಿಸಿದರು.

Leave a Reply

Your email address will not be published. Required fields are marked *

× How can I help you?