ಚಿಕ್ಕಮಗಳೂರು-ರೋಟರಿ ‘ಯುವಚೇತನ’ ಪ್ರತಿಭಾ ಸಂಭ್ರಮ ಆರಂಭ-ಯುವಜನರೇ ದೇಶದ ನಿಜಸಂಪತ್ತು:ಸಿ.ಎ.ದೇವಾನಂದ

ಚಿಕ್ಕಮಗಳೂರು-ಯುವಜನರೆ ದೇಶದ ನಿಜವಾದ ಸಂಪತ್ತು.ಅವರಿಗೆ ಪ್ರಾಮುಖ್ಯತೆ ಕೊಟ್ಟರೆ ಸಾಮರ್ಥ್ಯ ಉಪಯುಕ್ತವಾಗುತ್ತದೆ ಎಂದು ರೋಟರಿ 3182 ರ ಜಿಲ್ಲಾ ರಾಜ್ಯಪಾಲ ಉಡುಪಿಯ ಸಿ.ಎ.ದೇವಾನಂದ ನುಡಿದರು.

ಚಿಕ್ಕಮಗಳೂರು ರೋಟರಿಕ್ಲಬ್ ನಗರದ ಎಂ.ಎಲ್.ವಿ ರೋಟರಿ ಸಭಾಂಗಣದಲ್ಲಿ ಆಯೋಜಿ ಸಿರುವ ಪ್ರತಿಭೆಯ ಸಂಭ್ರಮ ‘ಯುವಚೇತನ 2024-25’ ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಷ್ಠಿತ ಚಿಕ್ಕಮಗಳೂರು ರೋಟರಿಕ್ಲಬ್ ಕಳೆದ 30ವರ್ಷಗಳಿಂದ ಯುವ ಸಪ್ತಾಹವನ್ನು ಆಯೋಜಿಸುವ ಮೂಲಕ ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸುತ್ತಿದೆ.ಪ್ರತಿ ಯುವಕರಲ್ಲೂ ಒಂದಿಲ್ಲೊoದು ಪ್ರತಿಭೆ ಇರುತ್ತದೆ.ನಿಜಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಬೆಂಬಲಿಸಿದರೆ ಅದರಿಂದ ಸಮಾಜಕ್ಕೆ ಉಪಯೋಗವಾಗುತ್ತದೆ ಎಂದರು.

ಸ್ವಾಮಿವಿವೇಕಾನoದರಿಗೆ ಯುವಶಕ್ತಿಯ ಮೇಲೆ ಅಪಾರ ವಿಶ್ವಾಸವಿತ್ತು. ಯುವಕರಲ್ಲಿರುವ ಸಂಪನ್ಮೂಲ ಸಮರ್ಪಕ ಬಳಕೆಯಾಗಬೇಕೆಂದು ಬಯಸಿದ್ದರು. ತರುಣರಲ್ಲಿ ಉತ್ತಮವಾದ ದೊಡ್ಡ ಗುರಿಯನ್ನು ಕಣ್ಮುಂದೆ ಇರಿಸಿಕೊಳ್ಳುವಂತಹ ವಾತಾವರಣ ಸೃಷ್ಟಿಯಾಗಬೇಕು. ಅವರಿಗೆ ಸರಿಯಾದ ತರಬೇತಿ, ಮಾರ್ಗದರ್ಶನ, ಆಪ್ತಸಲಹೆ-ಸೂಚನೆಗಳು ಸಕಾಲದಲ್ಲಿ ಸಿಗುವಂತಾದರೆ ಅದರಿಂದ ದೇಶಕ್ಕೆ ಒಳಿತಿದೆ ಎಂಬುದು ವಿವೇಕರ ಆಶಯವಾಗಿತ್ತೆಂದರು.

ಅವಿರತವಾದ ಪರಿಶ್ರಮದಿಂದ ಮಾತ್ರ ಗುರಿ ತಲುಪಲು ಸಾಧ್ಯ. ಗುರಿಯತ್ತ ಸಾಗಲು ಸಿದ್ಧತೆಯೂ ಮುಖ್ಯ. ನಮ್ಮಲ್ಲಿರುವ ಶಕ್ತಿ ಮತ್ತು ದೌರ್ಬಲ್ಯಗಳನ್ನು ಅರ್ಥಮಾಡಿಕೊಳ್ಳಬೇಕು. ಶಿಕ್ಷಕರು, ಕುಟುಂಬದ ಹಿರಿಯರು, ಸೇವಾಸಂಸ್ಥೆಗಳನ್ನು ಬಳಕೆ ಮಾಡಿಕೊಳ್ಳುವುದು ಒಳಿತು ಎಂದು ಯುವಕರಿಗೆ ಕರೆ ನೀಡಿದ ದೇವಾನಂದ್, ಒಳಿತಿನೆಡೆ ಹೆಜ್ಜೆ ಹಾಕಿದರೆ ರಾಜ್ಯ, ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲೂ ಬೆಳಗಿ, ಕೀರ್ತಿಸಂಪಾದಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸಿ.ರವೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿವೆ. ಅಕ್ಟೋಬರ್‌ನಿಂದ ನವೆಂಬರ್‌ನವರೆಗೆ ಪಠ್ಯೇತರ ಚಟುವಟಿಕೆಗಳಿಗೆ ಶಾಲೆಗಳಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ.ಪ್ರತಿಭಾಕಾರಂಜಿ, ಕ್ರೀಡಾಕೂಟ, ಶೈಕ್ಷಣಿಕ ಪ್ರವಾಸ, ವಾರ್ಷಿಕೋತ್ಸವಗಳು ಈ ಎರಡು ತಿಂಗಳುಗಳಲ್ಲಿ ನಡೆಯಬೇಕೆಂಬುದು ಇಲಾಖೆಯ ಅಪೇಕ್ಷೆ. ಜನವರಿ ನಂತರ ಸಂಪೂರ್ಣ ಶೈಕ್ಷಣಿಕ ವಿಷಯಗಳಿಗೆ ನೆರವಾದ ಪ್ರಯತ್ನಗಳು ನಡೆಯುತ್ತವೆ. ಐದು ದಿನಗಳಲ್ಲಿ ಎಂಟು ವಿಧದ ಸ್ಪರ್ಧೆಗಳನ್ನೊಳಗೊಂಡ ಪ್ರತಿಭಾ ಸಪ್ತಾಹ ನಡೆಸುವ ಮೂಲಕ ರೋಟರಿ ಸಂಸ್ಥೆ ಉತ್ತಮ ವೇದಿಕೆ ಕಲ್ಪಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ಅಭಿಪ್ರಾಯಿಸಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಿಕ್ಕಮಗಳೂರು ರೋಟರಿಕ್ಲಬ್ ಅಧ್ಯಕ್ಷ ಎಂ.ಎಲ್.ಸುಜಿತ್ ಮಾತನಾಡಿ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವೈವಿಧ್ಯಮಯವಾದ ಸ್ಪರ್ಧೆಗಳನ್ನು ಸಪ್ತಾಹದ ಅವಧಿಯಲ್ಲಿ ಆಯೋಜಿಸಲಾಗಿದೆ. ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದ್ದು ಹರ್ಷ ತಂದಿದೆ. ಪ್ರತಿವರ್ಷ ಜನವರಿ ತಿಂಗಳಿನಲ್ಲಿ ಸಪ್ತಾಹ ಆಚರಿಸುತ್ತಿದ್ದು ಪರೀಕ್ಷೆಗಳು ಸಮೀಪಿಸುವುದರಿಂದ ವಿದ್ಯಾರ್ಥಿಗಳಿಗೆ ಭಾಗವಹಿಸಲು ಕಷ್ಟವಾಗುತ್ತದೆ ಎಂಬ ಕಾರಣದಿಂದ ಇಲಾಖೆಯ ಸಲಹೆ ಮೇರೆಗೆ ನವೆಂಬರ್‌ನಲ್ಲಿ ನಡೆಸಲಾಗುತ್ತಿದೆ ಎಂದರು.

ರೋಟರಿ ಖಜಾಂಚಿ ಕೆ.ಎಸ್.ಆದರ್ಶ್, ಸಹಾಯಕ ರಾಜ್ಯಪಾಲ ನಾಸಿರ್‌ಹುಸೇನ್, ಇನ್ನರ್‌ವ್ಹೀಲ್ ಅಧ್ಯಕ್ಷೆ ಶಾಲಿನಿ, ಜೀವನಸಂಧ್ಯಾ ಟ್ರಸ್ಟ್ ಅಧ್ಯಕ್ಷ ಶ್ರೀಕಾಂತಶೆಟ್ಟಿ, ಮಾಜಿಅಧ್ಯಕ್ಷರುಗಳಾದ ಅನಂತೇಗೌಡ, ಡಿ,ಎಚ್.ನಟರಾಜ್, ಎಂ.ಆರ್.ಕಿರಣ್ ಮತ್ತಿತರರು ಪಾಲ್ಗೊಂಡಿದ್ದರು.

ರೋಟರಿ ಕಾರ್ಯದರ್ಶಿ ಎನ್.ಪಿ.ಲಿಖಿತ್ ಅತಿಥಿ ಪರಿಚಯಿಸಿದ್ದು, ಸಪ್ತಾಹದ ಸಂಯೋಜಕ ಎನ್.ಚಿದಾನಂದ ಪ್ರಾಸ್ತಾವಿಸಿದ್ದು, ಸಹಸಂಯೋಜಕ ಹರ್ಷಿತ್‌ವಸಿಷ್ಠ ವಂದಿಸಿದರು.

ಸೌರಭ ಮತ್ತು ಶೃತಿ ಸಂಮೃದ್ಧ್ಪೈ ಮೊದಲ ದಿನದ ಸಮೂಹನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

× How can I help you?