ಚಿಕ್ಕಮಗಳೂರು-ದಲಿತ-ಶೋಷಿತರಿಗೆ ಅಕ್ಷರದೂಟ ಬಡಿಸಿದವರು ಸಾವಿತ್ರಿಬಾಯಿ ಪುಲೆ-ಕೆ.ಟಿ.ರಾಧಾಕೃಷ್ಣ

ಚಿಕ್ಕಮಗಳೂರು-ಸ್ವಾತಂತ್ರ್ಯ ಪೂರ್ವದಲ್ಲಿ ದಲಿತ, ಹಿಂದುಳಿದ ಶೋಷಿತ ಸಮಾಜದ ಮಹಿಳೆಯರಿಗೆ ಅಕ್ಷರ ಜ್ಞಾನ ನೀಡಿ ಶಿಕ್ಷಣದ ಬೀಜ ಬಿತ್ತಿದ ಸಾವಿತ್ರಿಬಾಯಿ ಪುಲೆ ರಾಷ್ಟ್ರದ ಪ್ರಪ್ರಥಮ ಶಿಕ್ಷಕಿ ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಹೇಳಿದರು.

ನಗರದ ಜಿಲ್ಲಾ ಬಿ.ಎಸ್.ಪಿ. ಕಚೇರಿಯಲ್ಲಿ ಏರ್ಪಡಿಸಿದ್ಧ 194ನೇ ಸಾವಿತ್ರಿಬಾಯಿ ಪುಲೆಯವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಕೆಳವರ್ಗದ ಸಮುದಾಯದವರು ವಿದ್ಯಾಭ್ಯಾಸ ಪಡೆದು ಶಿಕ್ಷಕಿತರಾಗಬೇಕು. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಖ್ಯವಾಹಿನಿಗೆ ಬರಬೇಕೆಂಬ ನಿಟ್ಟಿನಲ್ಲಿ ಸಾವಿತ್ರಿಬಾಯಿ ಪುಲೆ ನೀಡಿದ ಕೊಡುಗೆ ಸ್ಮರಣೀಯ ಎಂದ ಅವರು ದೇಶದ ಮಹಿಳೆಯರ ಏಳಿಗೆಗಾಗಿ ದುಡಿದ ಪುಲೆ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರು ಅರಿಯಬೇಕು ಎಂದರು.

ಆಧುನಿಕ ಭಾರತದ ಮೊದಲ ಶಿಕ್ಷಕಿ, ಜಾತಿ, ಧರ್ಮ, ವರ್ಗ, ಬೇಧಭಾವ ಮಾಡದೇ ಸಮಾನ ಅಕ್ಷರ ದೂಟ ಉಣಬಡಿಸಿದ ಸಾವಿತ್ರಿಬಾಯಿ ಅವರ ಆದರ್ಶ ಎಲ್ಲರಿಗೂ ಮಾದರಿ. ಶಿಕ್ಷಕಿಯಾಗಿ ಸಾಕಷ್ಟು ಅವಮಾನಗಳನ್ನು ಮೆಟ್ಟಿ ನಿಂತವರು ಸಾವಿತ್ರಿಬಾಯಿ. ಅವರ ಜೀವನಗಾಥೆ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಎಂದು ಹೇಳಿದರು.

ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ, ಸಾವಿತ್ರಿಬಾಯಿ ಪುಲೆ ಅವರು ಬಾಲ್ಯದಲ್ಲೇ ವಿವಾಹವಾದರೂ ಅವರ ಪತಿ ಜ್ಯೋತಿಬಾಪುರವರ ಮಾರ್ಗದರ್ಶನದಲ್ಲಿ ಮನೆಯಲ್ಲಿ ಶಿಕ್ಷಣ ಪಡೆದು ಇಡೀ ದೇಶಕ್ಕೆ ಮೊದಲ ಶಿಕ್ಷಕಿಯಾಗಿ ರೂಪುಗೊಂಡು ಅಕ್ಷರದವ್ವ ಎಂಬ ನಾಮಾಂಕಿತಕ್ಕೆ ಭಾಜನರಾಗಿ ಅನೇಕ ಶಾಲೆಗಳನ್ನು ತೆರೆದು ಹಣ್ಣುಮಕ್ಕಳ ಶಿಕ್ಷಣಕ್ಕೆ ಬುನಾದಿ ಹಾಕಿದವರು ಎಂದರು.

ಬಿಎಸ್ಪಿ ಜಿಲ್ಲಾಧ್ಯಕ್ಷ ಪಿ.ಪರಮೇಶ್ವರ್ ಮಾತನಾಡಿ,ಸಾವಿತ್ರಿ ಬಾಯಿ ಪುಲೆ, ಸ್ವಾತಂತ್ರ್ಯ ಪೂರ್ವಕ್ಕೂ ಮುನ್ನ ಅಪಮಾನ, ಅವಮಾನದಿಂದ ಕಲಿತಿರುವ ವಿದ್ಯೆ ನಶಿಸಬಾರದೆಂಬ ದೃಷ್ಟಿಯಿಂದ ಸಮಾಜದ ಶೋಷಿತರು, ಹಿಂದುಳಿದ ಹೆಣ್ಣುಮಕ್ಕಳಿಗೆ ಧಾರೆ ಎರೆದು ಸಮಾಜದ ಮುಖ್ಯವಾಹಿನಿಗೆ ಕರೆತಂದವರು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ಪುಟ್ಟಸ್ವಾಮಿ ವಹಿಸಿದ್ದರು. ಈ ಸಂದರ್ಭದಲ್ಲಿ ಬಿಎಸ್ಪಿ ಲೋಕಸಭಾ ಸಂಯೋಜಕ ಕೆ.ಆರ್.ಗಂಗಾಧರ್, ಜಿಲ್ಲಾ ಉಪಾಧ್ಯಕ್ಷ ಕೆ.ಎಸ್.ಮಂಜುಳಾ, ಅಸ್ಲೆಂಬಿ ಪ್ರಧಾನ ಕಾರ್ಯದರ್ಶಿ ಆರ್.ವಸಂತ್, ಉಪಾಧ್ಯಕ್ಷ ಸಿದ್ದಯ್ಯ, ಮುಖಂಡರುಗಳಾದ ರವಿ, ತಮ್ಮೇಗೌಡ ಮತ್ತಿತರರಿದ್ದರು.

———-ಸುರೇಶ್

Leave a Reply

Your email address will not be published. Required fields are marked *

× How can I help you?