ಚಿಕ್ಕಮಗಳೂರು-ಕನ್ನಡ ಚಲನಚಿತ್ರದ ಮೇರುನಟ ಡಾ||ಶಿವರಾಜ್‌ಕುಮಾರ್ ಶೀಘ್ರವೇ ಗುಣಮುಖರಾಗಿ ತಾಯ್ನಾಡಿಗೆ ವಾಪಾಸಾಗಲಿ ಎಂದು ಆಶಿಸಿ ಜಿಲ್ಲಾ ಡಾ|| ರಾಜ್‌ಕುಮಾರ್ ಅಭಿಮಾನಿಗಳ ಸಂಘ, ಅಪ್ಪು ಯೂತ್ ಬ್ರಿಗೇಡ್ ಹಾಗೂ ಅಭಿಮಾನಿಗಳು ತಾಲ್ಲೂಕಿನ ಶ್ರೀ ಬಿಂಡಿಗ ದೇವೀರಮ್ಮ ದೇವಾಲಯದಲ್ಲಿ ಮಂಗಳವಾರ ವಿಶೇಷ ಪೂಜೆ,ಪ್ರಾರ್ಥನೆ ಸಲ್ಲಿಸಿದರು.
ಬಳೀಕ ಮಾತನಾಡಿದ ಡಾ|| ರಾಜ್‌ಕುಮಾರ್ ಸಂಘದ ಅಧ್ಯಕ್ಷ ಐ.ಕೆ.ಓಂಕಾರೇಗೌಡ, ರಾಜ್ ಕುಟುಂಬದ ಕುಡಿ ಶಿವಣ್ಣನವರು ನಟನೆಯ ಹಾದಿಯಲ್ಲಿ ಅತ್ಯಧಿಕ ಚಿತ್ರಗಳಲ್ಲಿ ನಟಿಸಿ ರಾಜ್ಯದಲ್ಲಿ ಮನೆ ಮಾತಾಗಿರುವ ಜೊತೆಗೆ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿರುವ ಕೀರ್ತಿ ಅವರಿಗಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಯಿಂದ ವಿದೇಶಕ್ಕೆ ಚಿಕಿತ್ಸೆಗೆಂದು ತೆರಳಿರುವ ನಟ ಶಿವರಾಜ್‌ಕುಮಾರ್ ಶೀಘ್ರವೇ ಸಂಪೂರ್ಣ ಗುಣಮುಖರಾಗಿ ತಾಯ್ನಾಡಿಗೆ ವಾಪಸಾಗಿ ಇನ್ನಷ್ಟು ಹೆಚ್ಚು ಚಿತ್ರ ಗಳಲ್ಲಿ ನಟಿಸುವ ಮುಖಾಂತರ ಅಭಿಮಾನಿಗಳನ್ನು ರಂಜಿಸುವ ಕಾರ್ಯ ಮಾಡಬೇಕು ಎಂದು ಆಶಿಸಿದರು.
60ರ ವಸಂತದ ಕಾಲದಲ್ಲಿರುವ ಶಿವಣ್ಣ ಇಂದಿಗೂ ಮಹಿಳೆಯರು, ಮಕ್ಕಳು, ಯುವಕ-ಯುವತಿಯರು ಹಾಗೂ ವೃದ್ದರ ಅಚ್ಚುಮೆಚ್ಚಿನ ನಟರು.ತಂದೆಯoತೆ ನಟನೆಯ ಹಾದಿಯಲ್ಲಿ ಸಿನಿಮಾರಂಗಕ್ಕೆ ಕಾಲಿಟ್ಟು ವಿಶೇಷ ಚಿತ್ರಗಳಲ್ಲಿ ನಟಿಸಿ ಮನಸೂರೆಗೊಳಿಸಿದವರು.ಇತ್ತೀಚೆಗೆ ತೆರೆಕಂಡ ಜೈಲರ್ ಚಿತ್ರದ ನಟನೆಗೆ ದೇಶಾದ್ಯಂತ ಅಭಿಮಾನಿಗಳ ಬಣ ಹೊಂದಿದ್ದಾರೆ ಎಂದರು.
ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್ ಮಾತನಾಡಿ, ಅತ್ಯುತ್ತಮ ನಟನೆ, ಸಾಹಸ, ಸ್ನೇಹಮಯಿ ಹೃದಯ ಹೊಂದಿರುವ ಶಿವರಾಜ್‌ಕುಮಾರ್ ಪ್ರತಿಯೊಬ್ಬರ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದೇ ನೆಲೆಸಿದ್ದಾರೆ. ಇಡೀ ರಾಜ್‌ಕುಮಾರ್ ಕುಟುಂಬವೇ ಕಲಾದೇವಿಗೆ ಅರ್ಪಿಸಿ ಆರಾಧಿಸುವ ಗುಣ ಹೊಂದಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಆ ನಿಟ್ಟಿನಲ್ಲಿ ವಿದೇಶಕ್ಕೆ ತೆರಳಿರುವ ಶಿವರಾಜ್‌ಕುಮಾರ್ ಅತ್ಯಂತ ಶೀಘ್ರಗತಿಯಲ್ಲೇ ಸಂಪೂರ್ಣ ಆರೋಗ್ಯವಂತರಾಗಿ ಮರಳಿ ಆಗಮಿಸುವ ಕ್ಷಣಗಳನ್ನು ಕಾತುರದಿಂದ ಕಾಯುತ್ತಿದ್ದೇವೆ. ಹೀಗಾಗಿ ಕನ್ನಡಿಗರ ನೆಚ್ಚಿನ ನಟ ಮರಳಿ ಚಿತ್ರಗಳಲ್ಲಿ ನಟಿಸಿ 200ರ ಚಿತ್ರಗಳ ಗಡಿ ತಲುಪುವಂತಾಗಬೇಕು ಎಂಬುವುದೇ ಅಭಿಮಾನಿಗಳ ಆಸೆ ಎಂದರು.
ಈ ಸಂದರ್ಭದಲ್ಲಿ ನಗರಸಭಾ ಉಪಾಧ್ಯಕ್ಷೆ ಅನು ಮಧುಕರ್,ರಾಜ್‌ಕುಮಾರ್ ಸಂಘದ ಗೌರವಾಧ್ಯಕ್ಷ ಬಿ.ಎಂ.ಕುಮಾರ್, ಉಪಾಧ್ಯಕ್ಷ ವಿನಯ್‌ಕುಮಾರ್ ಪ್ರಧಾನ ಕರ‍್ಯದರ್ಶಿ ಬಸವರಾಜ್, ಗೃಹನಿರ್ಮಾಣ ಸಂಘದ ಅಧ್ಯಕ್ಷ ನಾರಾಯಣ್, ನಗರಸಭೆ ಸದಸ್ಯ ರೂಪಕುಮಾರ್, ದೇವಾಲಯ ಟ್ರಸ್ಟಿ ಎಂ.ಎಸ್.ಪುನೀತ್, ಕಿರಣ್, ಅಭಿಮಾನಿಗಳಾದ ಸುನೀತ್, ಕುಮಾರ್, ಶಿವು, ಶಂಕರೇಗೌಡ, ಯಶೋಧ, ಕೋಟೆ ಶಿವು ಕುಮಾರ್, ಪುಷ್ಪರಾಜ್ ಮತ್ತಿತರರಿದ್ದರು.
————––ಸುರೇಶ್