ಚಿಕ್ಕಮಗಳೂರು-ತಾಲ್ಲೂಕಿನ ಮಾವಿನಕೆರೆ ಗ್ರಾಮದ ಪುರಾತನ ಇತಿಹಾಸವುಳ್ಳ ಶ್ರೀ ಕಲ್ಲೇಶ್ವರ ಸ್ವಾಮಿಯ ತಿರುಗುಣಿ ಕಾರ್ತೀಕ ದೀಪೋತ್ಸವ ಪ್ರಯುಕ್ತ ಸೋಮವಾರ ರಾತ್ರಿಯಿಂದ ಮುಂಜಾನೆ ತನಕ ಅತ್ಯಂತ ಶ್ರದ್ದಾಭಕ್ತಿಯಿಂದ ಪೂಜಾ ಕೈಂಕಾರ್ಯಗಳು ಜರುಗಿದವು.
ತಿರುಗುಣಿ ಕಾರ್ತೀಕೋತ್ಸವ ತಯಾರಿ ಕಳೆದೆರಡು ದಿನಗಳಿಂದ ಬಹುಜೋರಾಗಿ ಸಾಗುತ್ತಿತ್ತು. ಸೋಮವಾರದಂದು ಶ್ರೀ ಕಲ್ಲೇಶ್ವರಸ್ವಾಮಿ,ಮಾರಮ್ಮದೇವಿ,ನೋರೊಂದಪ್ಪ ಸ್ವಾಮಿ ದೇವಾಲಯಗಳು ಸೇರಿದಂತೆ ಗ್ರಾಮದ ಮುಖ್ಯರಸ್ತೆ ಗಳನ್ನೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.
ಶ್ರೀ ಕಲ್ಲೇಶ್ವರ ಸ್ವಾಮಿ ವಿಗ್ರಹ ಮೂರ್ತಿಯನ್ನು ಬಾಳೆದಿಂಡಿನಿಂದ ಚೌಕಕಾರದಲ್ಲಿ ಶೃಂಗರಿಸಲಾಗಿತ್ತು. ವಿಶೇಷ ವೆಂದರೆ ಈ ಚೌಕಕಾರದ ಮಂಪಟವನ್ನು ತಿರುಗಿಸಬಹುದಿತ್ತು. ಅಲ್ಲದೇ ಗರ್ಭಗುಡಿ ಮುಂಭಾಗದಿoದ ವೀಕ್ಷಿಸಿದರೆ ನಾಲ್ಕು ದಿಕ್ಕಿನಿಂದ ಶ್ರೀ ಕಲ್ಲೇಶ್ವರ ಸ್ವಾಮಿ ದರ್ಶನವಾಗಲಿದ್ದು,ಕಳಶೇಶ್ವರದ ವಿಗ್ರಹ ಹೊರತಾಗಿ ಮಾವಿನಕೆರೆ ಗ್ರಾಮದಲ್ಲಿ ಈ ವಿಶೇಷ ಮೂರ್ತಿ ಹೊಂದಿರುವ ಪ್ರತೀತಿಯಿದೆ.
ರಾತ್ರಿ ಸುಮಾರು 9.30ಕ್ಕೆ ಶ್ರೀ ಕಲ್ಲೇಶ್ವರಸ್ವಾಮಿ ವಿಗ್ರಹಮೂರ್ತಿಯನ್ನು ಗ್ರಾಮಸ್ಥರು ಪಲ್ಲಕ್ಕಿಯಲ್ಲಿ ಹೊತ್ತು ದೇವಾಲಯ ಹಾಗೂ ಗ್ರಾಮದ ಸುತ್ತಮುತ್ತಲು ಮೆರವಣಿಗೆ ನಡೆಸಿದರು.ರಾತ್ರಿ 11 ಗಂಟೆಗೆ ಗ್ರಾಮದ ಕಟ್ಟೆಯ ಸಮೀಪ ಶ್ರೀಯವರನ್ನು ಕುಳ್ಳರಿಸಿ ಮುಂಜಾನೆತನಕ ಗ್ರಾಮಸ್ಥರು ಹಾಗೂ ಪಟೇಲರು ಜಾಗರಣೆ ನಡೆಸಿ ಮುಂಜಾನೆ ದೇವಾಲಯಕ್ಕೆ ಕರೆತಂದು ವಿಶೇಷ ಪೂಜೆ ಜರುಗಿಸಿದರು.
ಗ್ರಾಮಸ್ಥ ಸೋಮಶೇಖರ್ ಮಾತನಾಡಿ, ಕಾರ್ತೀಕೋತ್ಸವ ವಿಶೇಷ ಪೂಜಾ ವಿಧಿ ವಿಧಾನದ ಅಂಗವಾಗಿ ಹೊರ ಊರಿಗೆ ತೆರಳಿರುವ ಗ್ರಾಮಸ್ಥರು ಮೂರ್ನಾಲ್ಕು ದಿನಗಳ ಮುಂಚೆಯೇ ಗ್ರಾಮಕ್ಕೆ ಆಗಮಿಸಿ ದೇವಾಲಯದ ಪೂಜಾ ಹಾಗೂ ಇನ್ನಿತರೆ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.
ವಿಶೇಷವಾಗಿ ನೂರೊಂದಪ್ಪ ಸ್ವಾಮಿಯು ಗ್ರಾಮಸ್ಥರ ರಕ್ಷಣೆಗಾಗಿ ದ್ವಾರಪಾಲಕನಾಗಿ ನೆಲೆಸಿದ್ದಾನೆ.ಗ್ರಾಮದಲ್ಲಿ ನೂರಾರು ಜಾನುವಾರುಗಳಿರುವ ಕಾರಣ ಸಣ್ಣಪುಟ್ಟ ಆರೋಗ್ಯದಲ್ಲಿ ಏರುಪೇರು ಅಥವಾ ಕಾಲು ಬಾಯಿ ಸೇರಿದಂತೆ ಇನ್ನಿತರೆ ರೋಗರುಜಿನಿಗಳಿಗೆ ಒಳಗಾದರೆ ನೂರೋಂದಪ್ಪ ಸ್ವಾಮಿಯ ಕೃಪಾಕಟಾಕ್ಷದಿಂದ ಗುಣಮುಖವಾಗುವ ಪ್ರತೀತಿಯನ್ನು ಹೊಂದಿದೆ ಎಂದು ತಿಳಿಸಿದರು.
ಗ್ರಾಮದಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಯ ಒಕ್ಕಲಿನವರು ಕಾರ್ತೀಕೋತ್ಸವ ದೀಪೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಜಾತಿ ತಾರತಮ್ಯವಿಲ್ಲದೇ ಎಲ್ಲರೂ ಒಂದೇ ಎಂಬ ಮನೋಭಾವನೆಯನ್ನು ಕಾರ್ತೀಕ ವಿಶೇಷ ಪೂಜೆಯಲ್ಲಿ ಪಾಲಿಸಿಕೊಂಡು ಬರಲಾಗುತ್ತಿದೆ ಎಂದರು.
————-——ಸುರೇಶ್