ಚಿಕ್ಕಮಗಳೂರು-ತೃಪ್ತಿ ಮತ್ತು ಮಾನವೀಯತೆ ಎಂಬೆರಡು ಮೌಲ್ಯಗಳನ್ನು ಬದುಕಿನಲ್ಲಿ ಎಲ್ಲರೂ ಅನುಸರಿಸಿದರೆ ಸಮಾಜದಲ್ಲಿ ಶಾಂತಿ-ನೆಮ್ಮದಿ-ಸೌಹಾರ್ದತೆ ಮೂಡುತ್ತದೆ ಎಂದು ಕರ್ನಾಟಕ ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅಭಿಪ್ರಾಯಿಸಿದರು.
ಶಿರವಾಸೆಯ ವಿವೇಕಾನಂದ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭವನ್ನು ಶೆಖರ್‌ಶೆಟ್ಟಿ ಸಭಾಮಂಟಪದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು,ಸಮಾಜದ ಬಹುತೇಕ ಅವ್ಯವಸ್ಥೆಗಳಿಗೆ ಲಂಚ ಮತ್ತು ಸ್ವಾರ್ಥತೆ ಕಾರಣವೆಂದು ಬೊಟ್ಟು ಮಾಡಿದರು.
ಜೀವನ ಪಥದಲ್ಲಿ ಮಾನವೀಯತೆ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು.ಲಂಚ ತೆಗೆದುಕೊಳ್ಳುವುದರ ಜೊತೆಗೆ ಲಂಚ ಕೊಡುವುದು ಅಪರಾಧ ಎಂಬುದನ್ನು ಅರಿಯಬೇಕು.ಸರಿ ದಾರಿಯಲ್ಲಿ ನಡೆಯುವ ಸಂಕಲ್ಪವನ್ನು ವಿದ್ಯಾರ್ಥಿ ಯುವಜನತೆ ಮಾಡಿದರೆ ಮಾತ್ರ ದೇಶಕ್ಕೆ ಭವಿಷ್ಯವಿದೆ ಎಂದರು.
ಹಲವಾರು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದರೂ ಸಮಾಜದ ಆಗು-ಹೋಗುಗಳ ಬಗ್ಗೆ ಗೊತ್ತಿರದ ಕೂಪಮಂಡೂಕದoತೆ ಇದ್ದ ತಾವು ಲೋಕಾಯುಕ್ತಕ್ಕೆ ಬಂದಮೇಲೆ ಸಮಾಜದಲ್ಲಿ ನಡೆಯುವ ಅನ್ಯಾಯ ಗೊತ್ತಾಯಿತು.ಸಂವಿಧಾನದ ಸಂಸ್ಥೆಗಳಿoದಲೂ ವಂಚನೆ ನೋಡುವಂತಾಯಿತು.ಇದೆಲ್ಲ ವ್ಯಕ್ತಿಗಳ ತಪ್ಪಲ್ಲ. ಸಮಾಜದ ತಪ್ಪು ಎಂದು ವಿಶ್ಲೇಷಿಸಿದ ಸಂತೋಷ ಹೆಗ್ಡೆ,ಅಧಿಕಾರ ಮತ್ತು ಶ್ರೀಮಂತಿಕೆ ಪೂಜಿಸುವ ಸಮಾಜ ನಮ್ಮದೆಂದರು.
ಒಳ್ಳೆಯ ಕೆಲಸ ಮಾಡಿದವರನ್ನು ಗೌರವಿಸಿ ಕೆಟ್ಟ ಕೆಲಸ ಮಾಡಿದವರನ್ನು ದೂರವಿಡುವ ಸಮಾಜ ಹಿಂದೆ ಇತ್ತು.ಜೈಲಿಗೆ ಹೋಗಿ ಬಂದವರ ಕುಟುಂಬದಿoದಲೇ ಅಂತರ ಕಾಪಾಡುವ ವ್ಯವಸ್ಥೆ ಇತ್ತು.ತಪ್ಪು ಮಾಡಿದವರಿಗೆ ಶಿಕ್ಷೆಯ ಜೊತೆಗೆ ಕುಟುಂಬವೂ ತೊಂದರೆಗೊಳಗಾಗುತ್ತಿತ್ತು. ಆದ್ದರಿಂದ ತಪ್ಪು ಮಾಡಲು ಜನ ಹಿಂಜರಿಯುತ್ತಿದ್ದರು.ಆದರೆ ಈಗ ಅಧಿಕಾರ ಮತ್ತು ಶ್ರೀಮಂತಿಕೆಯ ಓಲೈಕೆ ಹೆಚ್ಚಾಗಿದೆ.ದೊಡ್ಡಹುದ್ದೆ ಮತ್ತು ಸಂಪತ್ತಿನ ಕ್ರೋಢೀಕರಣದಲ್ಲಿ ಪೈಪೋಟಿ.ತೃಪ್ತಿ ಎಂಬುದೇ ಇಲ್ಲ. ಮತ್ತಷ್ಟು ಬೇಕೆಂಬ ದಾಹ. ದೇಶದಲ್ಲಿ ಸಾಕಷ್ಟು ಅಭಿವೃದ್ಧಿಕಾರ್ಯಗಳು ಆದರೂ ಜನರ ದಾಹದಿಂದಾಗಿ ದೇಶ ಹಿಂದುಳಿದಿದೆ ಎಂದರು.
ನೂರಾರು ಹಗರಣಗಳು ಕೋಟಿ ಕೋಟಿ ಹಣದ ಲೂಟಿ ನಿರಂತರವಾಗಿ ನಡೆದಿದೆ.50ರ ದಶಕದಲ್ಲಿ 52ಲಕ್ಷರೂ.ಗಳ ಜೀಪ್ ಹಗರಣ ಗಮನ ಸೆಳೆದಿತ್ತು.ನಂತರ 64ಕೋಟಿರೂ.ಗಳ ಬೋಪೋರ್ಸ್ ಹಗರಣ, ತದನಂತರ 700000ಕೋಟಿರೂ.ಗಳ ಕಾಮನ್‌ವೆಲ್ತ್ ಹಗರಣ, 1.76ಲಕ್ಷಕೋಟಿಯ 2೨ಜಿ ಹಗರಣ, ರೆಫೆಲ್ ಹಗರಣದಲ್ಲಿ 2ಲಕ್ಷಕೋಟಿಯ ಲೂಟಿ ನಡೆದಿದೆ.ಹಿಂದೆ ಪ್ರಧಾನಿಯಾಗಿದ್ದ ರಾಜೀವಗಾಂಧಿ ಮೈಸೂರಿನ ಸಮಾರಂಭವೊoದರಲ್ಲಿ ಅಭಿವೃದ್ಧಿ ಕಾರ್ಯಕ್ಕಾಗಿ ಸರ್ಕಾರ 1ರೂ.ವ್ಯಯಿಸಿದರೆ 15ಪೈಸೆ ಮಾತ್ರ ಜನರಿಗೆ ತಲುಪುತ್ತದೆ ಎಂದಿದ್ದರು ಎಂದು ಸ್ಮರಿಸಿದ ನ್ಯಾ.ಸಂತೋಷಹೆಗ್ಡೆ ದುರಾಸೆಗೆ ಮದ್ದಿಲ್ಲ, ಕಾನೂನಿಗೆ ಹೆದರುವುದಿಲ್ಲ ಎಂದು ವಿಷಾದಿಸಿದರು.
ವಿದ್ಯಾಸಂಸ್ಥೆಯ ರೂವಾರಿ ‘ಸಿರಿವಾಸೆಯ ಸಿರಿಗಂಧ ಎಸ್.ಬಿ.ಮುಳ್ಳೇಗೌಡ’ ಮಲೆನಾಡು ಐಸಿರಿಯ ವಿಶೇಷ ಸಂಚಿಕೆಯನ್ನು ಇದೇ ಸಂದಭದಲ್ಲಿ ಲೋಕಾರ್ಪಣೆಗೊಳಿಸಿದ ಸಂತೋಷಹೆಗ್ಡೆ, ಮಕ್ಕಳಿಗೆ ನೀತಿ ಪಾಠವನ್ನು ಹೇಳಬೇಕು. ತೃಪ್ತಿ ಪರೋಪಕಾರದಂತಹ ಮೌಲ್ಯಗಳನ್ನು ಪರಿಚಯಿಸಬೇಕೆಂದರು.
ರಾಜ್ಯಸಭಾಸದಸ್ಯ ಜಯರಾoರಮೇಶ್ ಶುಭಹಾರೈಸಿ ಸುವರ್ಣಮಹೋತ್ಸವ ಸ್ಮರಣಸಂಚಿಕೆ ಲೋಕಾರ್ಪಣೆ ಗೊಳಿಸಿದರು. ಸಮಾರಂಭದ ಅಧ್ಯಕ್ಷತೆವಹಿಸಿದ್ದ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಎಂ.ಭೋಜೇಗೌಡ 50ವರ್ಷ ಶಾಲೆ ಕ್ರಮಿಸಿದ ಹಾದಿ ಪರಿಚಯಿಸಿದರು.
ಶಿರಿವಾಸೆ ಮಂಡಲಪoಚಾಯಿತಿ ಪ್ರಥಮ ಅಧ್ಯಕ್ಷರಾಗಿದ್ದ ಎಂ.ಎಲ್.ಮೂರ್ತಿ ಮಾತನಾಡಿ ಈ ಭಾಗದ ಶೈಕ್ಷಣಿಕ ಕ್ರಾಂತಿಗೆ ವಿವೇಕಾನಂದ ವಿದ್ಯಾಸಂಸ್ಥೆಯ ಕೊಡುಗೆ ಅಪಾರ ಎಂದರು.
ಹೊರನಾಡು ಕ್ಷೇತ್ರ ಧರ್ಮಕರ್ತ ಡಾ.ಭೀಮೇಶ್ವರಜೋಷಿ ಎಸ್.ಬಿ.ಮುಳ್ಳೇಗೌಡರ ಕಂಚಿನ ಪುತ್ಥಳಿಯನ್ನು ಅನಾವರಣಗೋಳಿಸಿ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಆಚಾರಕ್ಕೆ ಅರಸಾಗಿ, ನೀತಿಗೆ ಪ್ರಭುವಾಗಿ, ಮಾತಿನಲ್ಲಿ ಚೂಡಾಮಣಿಯಾಗಿ, ಲೋಕಕ್ಕೆ ಬೆಳಕಾಗಿ ಬಾಳಿ ಬದುಕಿದವರ ಸ್ಮರಣೆ ಬೆಳೆಯುವ ಯುವಜನರಿಗೆ ಆದರ್ಶಪ್ರಾಯ ಎಂದು ಹೇಳಿದರು.
ಶಿಕ್ಷಣದ ಜೊತೆಗೆ ಆರೋಗ್ಯ, ಸಾರಿಗೆ, ದೂರಸಂಪರ್ಕ, ಸಹಕಾರ, ವಿದ್ಯುಚ್ಛಕ್ತಿ, ರಸ್ತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸಿ ಬದಲಾವಣೆಯ ಹರಿಕಾರರಾಗಿ ಜನಮಾನಸದಲ್ಲಿ ಉಳಿದಿರುವ ಮುಳ್ಳೇಗೌಡರು, ಯೋಗ ಮತ್ತು ಯೋಗ್ಯತೆ ಎರಡನ್ನೂ ಸಂಪಾದಿಸಿ ವ್ಯಕ್ತಿ ಶಕ್ತಿಯಾಗಿ ರೂಪುಗೊಂಡವರು.ಯಶೋಗಾಥೆ ಸಾಕ್ಷೀಕರಿಸುವ ವ್ಯವಸ್ಥೆಯಿಂದ ಸಮಾಜದಲ್ಲಿ ಸಂಸ್ಕಾರ ಪ್ರೇರೇಪಣೆಗೊಳ್ಳುತ್ತದೆ. ಅಂತರoಗ ಮೆಚ್ಚಿಸುವ ಬದುಕಿಗೆ ಮಾದರಿಯಾಗುತ್ತದೆ ಎಂದು ಡಾ.ಭೀಮೇಶ್ವರಜೋಷಿ ನುಡಿದರು.
ಸಾಧಕರಾದ ಶಾರದಮ್ಮ ಮುಳ್ಳೇಗೌಡ, ಮಹಾಚಂದ್ರ ಪ್ರತಿಷ್ಠಾನದ ರವಿಶಂಕರ್ ದಂಪತಿಗಳು, ಕೆ.ವಿ.ಬಸವನಗೌಡ, ಸoಸ್ಥೆಯ ನಿರ್ದೇಶಕ ಅಣ್ಣೆಗೌಡ,ವೈಶ್ಯಾಹಾಸ್ಟೆಲ್ ಮುಖ್ಯಸ್ಥ ಕೆ.ಎಸ್.ರಮೇಶ್, ಬಿ.ಎಂ.ಭೋಜೇಗೌಡ, ನಿಕಟಪೂರ್ವ ಮುಖ್ಯಶಿಕ್ಷಕಿ ಅನುಸೂಯ ವಿಶ್ವನಾಥ್‌ರನ್ನು ಸನ್ಮಾನಿಸಲಾಯಿತು.
ಎಸ್.ಎಂ.ಪ್ರಸನ್ನಕುಮಾರ್ ಸ್ವಾಗತಿಸಿ, ಬಸವರಾಜು ವಂದಿಸಿದರು.ನಿರ್ದೇಶಕ ಬಿ.ಎ.ಶಿವಶಂಕರ್ ಕಾರ್ಯಕ್ರಮ ನಿರೂಪಿಸಿದರು. ಖ್ಯಾತ ಹಿನ್ನಲೆಗಾಯಕ ರಾಜೇಶ್‌ಕೃಷ್ಣನ್, ಡಾ.ಶಮಿತಾ ಮಲೆನಾಡು, ಗಿಚ್ಚಿ ಗಿಲಿ ಗಿಲಿಯ ರಾಘವೇಂದ್ರ ತಂಡದಿoದ ಸಂಗೀತ ಸoಜೆ ಆಕರ್ಷಕವಾಗಿತ್ತು.
ಸ್ವಾಗತ ಸಮಿತಿ ಸಂಚಾಲಕ ಬಿ.ನೀ.ವಿಶ್ವನಾಥ್ ಸಾಂಸ್ಕೃತಿಕ ಸಂಜೆ ನಿರೂಪಿಸಿದರು.