
ಚಿಕ್ಕಮಗಳೂರು-ಸುತ್ತೂರಿನ ಶ್ರೀ ವೀರಸಿಂಹಾಸನ ಮಹಾಸಂಸ್ಥಾನದ ಮಠದ ಜಾತ್ರಾ ಮಹೋತ್ಸವದ ಸಂಚಾರಿ ರಥವು ಜಿಲ್ಲೆಯ ಆಗಮಿಸಿದ ವೇಳೆ ವಿವಿಧ ಸಮುದಾಯ ಹಾಗೂ ಪ್ರಗತಿ ಪರ ಮುಖಂಡರುಗಳು ಸೋಮವಾರ ನಗರದ ಗಾಂಧಿ ಪ್ರತಿಮೆ ಎದುರು ರಥಕ್ಕೆ ಪುಷ್ಪನಮನ ಸಲ್ಲಿಸಿ ಅದ್ಧೂರಿಯಾಗಿ ಸ್ವಾಗತಿಸಿದರು.
ಬಳಿಕ ಮಾತನಾಡಿದ ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು, ಸುತ್ತೂರಿನಲ್ಲಿ ಪ್ರತಿವರ್ಷದ ಜಾತ್ರಾ ಮಹೋತ್ಸವವು ರೈತರ ಬದುಕು, ಜೀವನಕ್ರಮ, ಕೃಷಿ ಸುಧಾರಣೆ, ಪಶು ಸಂಗೋಪನೆ ಕುರಿತು ವಿಶೇಷವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರೈತರ ಜೀವನಾಡಿಯಾಗಿ ಸ್ಪಂದಿಸುತ್ತಿದೆ ಎಂದರು.
ಜಾತ್ರಾ ಮಹೋತ್ಸವದ ರಥವನ್ನು ನಾಡಿನಾದ್ಯಂತ ಸಂಚರಿಸುವ ಮೂಲಕ ಜನತೆಯನ್ನು ಸಂಘಟಿಸಿ ಜಾಗೃತಿ ಮೂಡಿಸಲು ಸುತ್ತೂರು ಮಠವು ಶ್ರಮಿಸುತ್ತಿದೆ. ಆ ನಿಟ್ಟಿನಲ್ಲಿ ಇಂದು ಚಿಕ್ಕಮಗಳೂರಿಗೆ ರಥವು ಆಗಮಿಸಿರುವುದು ಜಿಲ್ಲೆಯ ಜನತೆಗೆ ಸೌಭಾಗ್ಯ ಲಭಿಸಿದೆ ಎಂದು ಹೇಳಿದರು.
ಜಾತ್ರೆಯ ಪ್ರಯುಕ್ತ ಆಗಮಿಸಿರುವ ರಥವನ್ನು ಬೀಳ್ಕೊಡುವ ಸಲುವಾಗಿ ಸ್ಥಳೀಯ ಜನಪ್ರತಿನಿಧಿಗಳು, ಮಠದ ಭಕ್ತರು, ವಿವಿಧ ರಾಜಕೀಯ ಹಾಗೂ ದಲಿತರ ಸಂಘಟನೆಗಳು ಮುಖಂಡರುಗಳು ಸ್ವಯಂಪ್ರೇರಿತರಾಗಿ ಭಾಗವಹಿಸಿ ಸಂಚಾರಿ ರಥವನ್ನು ಗೌರವಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಇದೇ ಜನವರಿ 26 ರಿಂದ 31 ರವರೆಗೆ ಜಾತ್ರಾ ಮಹೋತ್ಸವ ಹಮ್ಮಿಕೊಂಡಿದ್ದು 26 ರಂದು ಉತ್ಸವ ಮೂರ್ತಿ ಗದ್ದುಗೆಗೆ ಬಿಜಯಂಗೇಸುವುದು, 27 ಸಾಮೂಹಿಕ ವಿವಾಹ, 28 ರಥೋತ್ಸವ, ಕೆಂಡೋತ್ಸವ, 29 ಲಕ್ಷದೀಪೋತ್ಸವ, ಪಲ್ಲಕ್ಕಿಉತ್ಸವ, 30 ತೆಪ್ಪೋತ್ಸವ ಹಾಗೂ 31 ರಂದು ಅನ್ನಬ್ರಹ್ಮೋತ್ಸವ ಹಮ್ಮಿಕೊಂಡಿದೆ ಎಂದರು.

ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್ ಮಾತನಾಡಿ, ನಾಡಿನಲ್ಲೇ ವಿಶೇಷತೆ ಹೊಂದಿರುವ ಸುತ್ತೂರು ಮಠದ ಸಂಚಾರಿ ರಥ ಆಗಮಿಸಿರುವುದು ಹೆಮ್ಮೆಯ ಸಂಗತಿ ಎಂದ ಅವರು ರೈತರ ಬದುಕಿಗೆ ಸುತ್ತೂರು ಶ್ರೀಗಳು ನಿರಂತರವಾಗಿ ಬೆನ್ನೆಲುಬಾಗಿ ನಿಂತಿರುವುದು ಸಂತಸದ ವಿಷಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ನಯಾಜ್, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನoದ ಸ್ವಾಮಿ, ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಹೆಚ್.ಸಿ.ಕಲ್ಮರುಡಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಹಿರಿಯ ಪತ್ರಕರ್ತ ಬಿ.ತಿಪ್ಪೇರುದ್ರಪ್ಪ, ರೈತ ಸಂಘದ ಮುಖಂಡ ಗುರುಶಾಂತಪ್ಪ, ಮುಖಂಡರಾದ ಮರ್ಲೆ ಅಣ್ಣಯ್ಯ, ಮುಗುಳುವಳ್ಳಿ ನಿರಂಜನ್, ತನೋಜ್‌ನಾಯ್ಡು, ಸಂತೋಷ್ ಲಕ್ಯಾ,ಈಶ್ವರಪ್ಪ ಮತ್ತಿತರರಿದ್ದರು.
———ಸುರೇಶ್