ಚಿಕ್ಕಮಗಳೂರು-ದೇಶದಲ್ಲಿ ಹೆಣ್ಣಿಗೆ ವಿಶಿಷ್ಟ ಸ್ಥಾನಮಾನವಿದೆ.ಅಕ್ಕ,ತಂಗಿ,ಪತ್ನಿ ಈ ಎಲ್ಲ ಸಂಬoಧಕ್ಕಿoತ ತಾಯಿಯಾಗಿ ಹೆಣ್ಣನ್ನು ಗೌರವಿಸುವುದು ಮಿಗಿಲು ಎಂದು ಪ್ರಸಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹೇಳಿದರು.
ಅವರು ನಗರದ ಕುವೆಂಪು ಕಲಾಮಂದಿರದಲ್ಲಿ ಟೌನ್ ಮಹಿಳಾ ಸಮಾಜ ಸಂಸ್ಥೆಯ 99ನೇ ಸಂಸ್ಥಾಪನ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ತಾಯಿ, ತಂಗಿ, ಅಕ್ಕ, ಪತ್ನಿ, ಅಜ್ಜಿ ಹೀಗೆ ವಿವಿಧ ಸ್ವರೂಪದಲ್ಲಿ ತನ್ನ ಜವಾಬ್ದಾರಿ ನಿರ್ವಹಿಸುವ ಹೆಣ್ಣು ದೈವ ಸ್ವರೂಪಿಯೇ ಸರಿ. ಹೆಣ್ಣಿಗೆ ಸಮಾಜದಲ್ಲಿ ಗೌರವ ನೀಡುವ ಕೆಲಸ ಆಗಬೇಕು.ಇಚ್ಛೆಗೆ ಅನುಗುಣವಾಗಿ ನಡೆದುಕೊಂಡು ಬರುವಂತಹ ಸ್ವಾತಂತ್ರ್ಯವನ್ನು ಅವರಿಗೆ ನೀಡಬೇಕು. ತಾರತಮ್ಯ ಸಲ್ಲದು ಎಂದು ಹೇಳಿದರು.
ಟೌನ್ ಮಹಿಳಾ ಸಮಾಜ 99ವರ್ಷ ನಡೆದು ಬಂದಿರುವ ಹಾದಿ ಸುಲಭವಾದುದಲ್ಲ.ಸಾಕಷ್ಟು ಮಹಿಳೆಯರ ಶ್ರಮದ ಫಲವಾಗಿ ಇಂದು ಈ ಸಂಸ್ಥೆ ಬೆಳೆದಿದೆ.ಚಿಕ್ಕಮಗಳೂರಿಗೂ ನನಗೂ ಅವಿನಾಭಾವ ಸಂಬoಧವಿದೆ.ರಕ್ತ ಸಂಬoಧ ಅಲ್ಲದಿದ್ದರೂ ನನಗೆ ಮೇಜರ್ ಕೆ.ಪಿ. ಪೂವಯ್ಯ ಅಂದರೆ ಗೀತಾ ಎಂ.ಎಲ್. ಮೂರ್ತಿ ಅವರ ತಂದೆ ತಾತ ಆಗಿದ್ದರು.
ನಮ್ಮ ಕುಟುಂಬದ ಕ್ಲಿಷ್ಟಕರ ಸಂದರ್ಭದಲ್ಲಿ ನಮ್ಮ ಜತೆ ನಿಂತಿದ್ದರು. ನಮಗೆ ಬೆಂಬಲ ಇಲ್ಲದಾಗ ಮಾರ್ಗದರ್ಶನ ನೀಡಿ ದಾರಿಗೆ ತಂದಿದ್ದು ಮೇ. ಪೂವಯ್ಯ ಅವರು.ಇದಕ್ಕೆ ಗೀತಾ ಎಂ.ಎಲ್.ಮೂರ್ತಿ ಬೆಂಬಲಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ, 99 ವರ್ಷದಲ್ಲಿ ಟೌನ್ ಮಹಿಳಾ ಸಮಾಜ ಉತ್ತಮವಾಗಿ ನಡೆದುಬಂದಿದೆ. 99 ವರ್ಷದ ಹಿಂದೆ ಮಹಿಳೆಯರು ಮನೆಯಿಂದ ಹೊರಬರುವುದು ಕಷ್ಟದ ದಿನಗಳಾಗಿದ್ದವು. ಆಗಲೇ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಶಿಕ್ಷಣಕ್ಕೆ ಒತ್ತು ಕೊಟ್ಟಿರುವುದು ಸಾಧನೆಯೇ ಸರಿ. 2 ದಶಕದ ಹಿಂದೆ ಇದ್ದಂತಹ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಟಿಎಂಎಸ್ ಕೂಡ ಒಂದಾಗಿತ್ತು ಎಂಬುದು ಹೆಮ್ಮೆಯ ಸಂಗತಿ. ಇನ್ನೂ ಹಲವು ದಶಕಗಳ ಕಾಲ ಉತ್ತಮವಾಗಿ ಸೇವೆ ಸಲ್ಲಿಸಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಟಿಎಂಎಸ್ ಸಂಸ್ಥೆ ಅಧ್ಯಕ್ಷೆ ಗೀತಾ ಎಂ.ಎಲ್. ಮೂರ್ತಿ, ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್, ಸಂಸ್ಥೆಯ ನಿರ್ದೇಶಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಹಿರಿಯ ಸದಸ್ಯರನ್ನು ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಅಮ್ಮಾ.. ಲವ್ ಯೂ ಅಮ್ಮಾ .. ಎಂಬ ಸ್ವರಚಿತ ಗೀತೆಯನ್ನು ಅರ್ಜುನ್ ಜನ್ಯ ಹಾಡಿ ರಂಜಿಸಿದರು.