ಚಿಕ್ಕಮಗಳೂರು-ಗರ್ಭಿಣಿ ಸಾವಿಗೆ ಕಾರಣರಾದ ಸರ್ಕಾರಿ ಹೆರಿಗೆ ಆಸ್ಪತ್ರೆ ವೈದ್ಯರನ್ನು ಕೂಡಲೇ ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರುಗಳು ಶುಕ್ರವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಒಕ್ಕೂಟದ ಮುಖಂಡ ಮರ್ಲೆ ಅಣ್ಣಯ್ಯ, ಇತ್ತೀಚೆಗೆ ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಗರ್ಭೀಣಿ ಸವಿತಾ ಎಂಬಾಕೆ ದಾಖಲಾಗಿದ್ದರು.ಸ್ವಲ್ಪ ಸಮಯದ ನಂತರ ಆಸ್ಪತ್ರೆಯ ವೈದ್ಯ ಸೀಸರಿನ್‌ಗೆ ಸೂಚಿಸಿದ್ದು ಹೆರಿಗೆ ಮಾಡಿಸುವ ವೇಳೆಯಲ್ಲಿ ಹೃದಯಘಾತದಲ್ಲಿ ಮೃತರಾಗಿರುವುದಾಗಿ ಸುಳ್ಳು ಮಾಹಿತಿ ನೀಡಿ ಖಾಸಗೀ ಆಸ್ಪತ್ರೆಗೆ ದಾಖಲಿಸಲು ಸಂಬoಧಿಕರಿಗೆ ಹೇಳಿದ್ದಾರೆ ಎಂದರು.
ಹೆರಿಗೆ ಸಮಯದಲ್ಲಿ ಮೃತ ಗರ್ಭೀಣಿಯ ಸಾವು ವೈದ್ಯರ ನಿರ್ಲಕ್ಷ್ಯದಿಂದ ಆಗಿದೆ ಎಂದು ಅರಿತ ಮೇಲೆ ದೂರು ಬರಲಿದೆ ಎಂಬುದನ್ನು ಮನಗಂಡು ಆಸ್ಪತ್ರೆ ವೈದ್ಯರು ಉದ್ದೇಶಪೂರ್ವಕವಾಗಿ ಖಾಸಗೀ ಆಸ್ಪತ್ರೆಗೆ ದಾಖಲಿಸಲು ಸಂಬoಧಿಕರಿಗೆ ಹೇಳಿದ್ದು ತರಾತುರಿಯಲ್ಲಿ ಸಂಬoಧಿಕರು ಖಾಸಗೀ ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಗರ್ಭೀಣಿ ಮೃತರಾಗಿದ್ದಾರೆ ಎಂದರು.
ಇದಾದ ಬಳಿಕ ಖಾಸಗೀ ಆಸ್ಪತ್ರೆಯು ಒಂದು ದಿನದ ಚಿಕಿತ್ಸೆ ಕೊಡುವುದಾಗಿ ಸುಳ್ಳು ಹೇಳಿ ರಾತ್ರಿ ವೇಳೆ ಆಸ್ಪತ್ರೆಯಲ್ಲಿ ಯಾವುದೇ ಹಣ ಪಾವತಿಸಿಕೊಳ್ಳದೇ ತರಾತುರಿಯಲ್ಲಿ ಶವವನ್ನು ಮನೆಗೆ ಕಳುಹಿಸಿದ್ದಾರೆ. ಹೀಗಾಗಿ ಮೃತ ಗರ್ಭೀಣಿ ಸಾವು ಅನೇಕ ಅನುಮಾನ ಮೂಡಿಸುತ್ತಿದೆ ಎಂದು ಹೇಳಿದರು.
ಅಲ್ಲದೇ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರ ವಿರುದ್ಧ ಈ ಹಿಂದೆ ಹಲವಾರು ದೂರುಗಳಿದ್ದು ಈ ರೀತಿಯ ಪ್ರಕರಣಗಳನ್ನು ಮುಚ್ಚಿಹಾಕಿದ್ದಾರೆ.ಎಲ್ಲಾ ಚಟುವಟಿಕೆಗೆ ಜಿಲ್ಲಾಸ್ಪತ್ರೆ ಸರ್ಜನ್ ನೇರ ಕಾರಣವಾಗಿರುವ ಹಿನ್ನೆಲೆ ಇಬ್ಬರ ಮೇಲೂ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಮುಖಂಡರುಗಳಾದ ಹರೀಶ್ ಮಿತ್ರ, ಮಂಜುನಾಥ್ ನಂಬಿಯಾರ್, ಜಗದೀಶ್ ಕೋಟೆ, ಬಿಳೇಕಲ್ಲು ಬಾಲಕೃಷ್ಣ, ರಮೇಶ್, ಸಂತೋಷ್, ಆರ್.ಶೇಖರ್, ಧರ್ಮರಾಜ್, ಸುಜೇಂದ್ರ , ಪ್ರದೀಪ್‌ಗೌಡ ಮತ್ತಿತರ ರಿದ್ದರು.
————-–ಸುರೇಶ್