ಚಿಕ್ಕಮಗಳೂರು-ಸಮಾಜದ ಮುಖ್ಯವಾಹಿನಿಯಲ್ಲಿ ಕರ್ತವ್ಯ ನಿರ್ವಹಿಸುವ ವಕೀಲರು ಬಿಡುವಿನ ಸಮಯವನ್ನು ಕ್ರೀಡಾಚಟುವಟಿಕೆಗೆ ಮುಡಿಪಿಡುವ ಮೂಲಕ ಆರೋಗ್ಯಯುತ ಸಮಾಜ ಸೃಷ್ಟಿಸುವಲ್ಲಿ ಕೈಜೋಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಹೇಳಿದರು.
ನಗರದ ಜಿಲ್ಲಾ ಆಟದ ಮೈದಾನದಲ್ಲಿ ವಕೀಲರ ದಿನಾಚರಣೆ ಅಂಗವಾಗಿ ಚಿಕ್ಕಮಗಳೂರು ವಕೀಲರ ಸಂಘದಿoದ ಸೋಮವಾರ ಏರ್ಪಡಿಸಿದ್ಧ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರತಿನಿತ್ಯವು ನ್ಯಾಯಾಲಯದಲ್ಲಿ ಕಕ್ಷಿಗಾರರ ವಾದ-ಪ್ರತಿವಾದದಲ್ಲಿ ತೊಡಗಿರುವ ವಕೀಲರು ಒತ್ತಡದ ಬದುಕು ಹೊಂದುವ ಮೂಲಕ ದೈನಂದಿನ ವೃತ್ತಿಯಲ್ಲಿ ಹೆಚ್ಚು ಕೆಲಸದಲ್ಲಿ ನಿರತರಾಗಿರುತ್ತಾರೆ. ಈ ವೇಳೆಯಲ್ಲಿ ಮಾನಸಿಕ ಸದೃಢತೆಯ ಅವಕಶ್ಯಕತೆ ಬಹಳಷ್ಟಿದೆ ಎಂದು ತಿಳಿಸಿದರು.
ಶರೀರದ ಆರೋಗ್ಯ ಹಾಗೂ ಮನಸ್ಸಿನ ಸ್ಥಿತಿ ಉತ್ತಮವಾಗಿದ್ದರೆ ನೆಮ್ಮದಿಯಿಂದ ಕೆಲಸ ಕಾರ್ಯಗಳನ್ನು ಸರಾಗವಾಗಿ ಕೈಗೊಳ್ಳಬಹು ದು.ಜೊತೆಗೆ ಮಾನಸಿಕ ಸದೃಡತೆ ಹೊಂದುವುದು ಮುಖ್ಯ ಎಂದ ಅವರು ವಕೀಲರು ಕ್ರೀಡಾ ಮನೋಭಾವನೆ ರೂಢಿಸಿಕೊಂಡು ಮುನ್ನೆಡೆಯಬೇಕು ಎಂದು ಸಲಹೆ ಮಾಡಿದರು.
ಹಳ್ಳಿಗಾಡಿನ ರೈತಾಪಿ ಕುಟುಂಬದಿoದ ಬಂದoಥ ಹಲವಾರು ನ್ಯಾಯಾಧೀಶರು, ವಕೀಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಹಿಂದಿನ ನೆನಪುಗಳನ್ನು ಒಮ್ಮೆ ಮನಗಾಣಬೇಕು. ಅಂದಿನ ಸಮಯದಲ್ಲಿ ಚಿಲ್ಲಿ ದಾಂಡು, ಮರಕೋತಿ, ಬುಗುರಿ, ಲಗೋರಿ ಆಟಗಳು ಇಂದು ಮರೆಯಾಗಿದ್ದು ಪರಿಚಯಿಸುವ ಕೆಲಸವಾಗಬೇಕು ಎಂದರು.
ಸಮಾಜದ ಸ್ವಾಸ್ತ್ಯ ಕಾಪಾಡುವ ನಿಟ್ಟಿನಲ್ಲಿ ವಕೀಲರ ಪಾತ್ರ ಪ್ರಮುಖವಾದುದು. ಆ ನಿಟ್ಟಿನಲ್ಲಿ ಪೂರ್ವಿಕರು ಕಟ್ಟಿಕೊಟ್ಟಿರುವ ಜಾನಪದ ಸೊಗಡು, ತತ್ವಪದ ಹಾಗೂ ಸಂಪ್ರದಾಯವನ್ನು ಮರೆಯಬಾರದು. ಭವಿಷ್ಯದಲ್ಲಿ ಪರಂಪರೆ ಕೊಂಡೊಯ್ಯಲು ಯುವವಕೀಲರು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ಪ್ರಭಾರಿ ನ್ಯಾಯಾಧೀಶೆ ಭಾನುಮತಿ, ಕ್ರೀಡೆಗಳು ಮನುಷ್ಯನ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಸಹಕಾರಿ. ಹೀಗಾಗಿ ವಕೀಲರು ದೈನಂದಿನ ವೃತ್ತಿ ಬದುಕಿನ ನಡುವೆಯು ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ತೊಡಗಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ಮಾತನಾಡಿ ವಕೀಲರಿಗೆ ಕ್ರೀಡಾ ಮನೋಭಾವನೆ ಮೂಡಿಸುವ ಸಲುವಾಗಿ ಕ್ರಿಕೇಟ್, ವಾಲಿಬಾಲ್, ಓಟದ ಸ್ಪರ್ಧೆ, ಥ್ರೋಬಾಲ್, ಹಗ್ಗಾಜಗ್ಗಾಟ, ಕಬ್ಬಡ್ಡಿ ಕ್ರೀಡೆಗಳನ್ನು ಆಯೋಜಿಸಿ ಶಾರೀರಿಕ ಸದೃಢವಾಗಿಸಲು ಸಹಕರಿಸುತ್ತಿದೆ ಎಂದರು.
ಕ್ರೀಡಾಕೂಟದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಶರತ್‌ಚಂದ್ರ,ನಿಕಟಪೂರ್ವ ಅಧ್ಯಕ್ಷರಾದ ಸುಧಾಕರ್ ಹಳಿಯೂರು, ಕಾರ್ಯದರ್ಶಿ ಅನಿಲ್‌ಕುಮಾರ್, ಸಹ ಕಾರ್ಯದರ್ಶಿ ಪ್ರಿಯದರ್ಶಿನಿ, ಖಜಾಂಚಿ ದೀಪಕ್, ನ್ಯಾಯಾಧೀಶರುಗಳಾದ ಪ್ರಕಾಶ್, ಮಂಜು ನಾಥ್, ವೀರಭದ್ರಯ್ಯ,ದ್ಯಾವಪ್ಪ, ಕೃಷ್ಣ, ಮಂಜು, ಹರೀಶ್, ನಂದಿನಿ,ಹನುಮಂತಪ್ಪ, ವಕೀಲರುಗಳಾದ ಲಕ್ಷ್ಮಣಗೌಡ,ಪಿ.ಪರಮೇಶ್ವರ್, ಟಿ.ಕೆ.ವಿಶ್ವನಾಥ್ ಮತ್ತಿತರರಿದ್ದರು.
————–ಸುರೇಶ್