ಚಿಕ್ಕಮಗಳೂರು-ಇತರೆ ಪ್ರದೇಶಗಳಿಂದ ಉದ್ಯೋಗ ಅರಸಿ ಜಿಲ್ಲೆಗೆ ಬರುವ ಪ್ರತಿಯೊಬ್ಬ ವಲಸೆ ಕಾರ್ಮಿಕರ ಸ್ಪಷ್ಟ ಮಾಹಿತಿಯನ್ನು ಕಲೆ ಹಾಕಿ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿರುವವರ ವಿರುದ್ಧ ಕಾನೂನು ಕ್ರಮ ವಹಿಸಬೇಕು.ಕಾರ್ಖಾನೆ ಹಾಗೂ ಇತರೆ ಕಾಫಿ ಎಸ್ಟೇಟ್ಗಳಲ್ಲಿ ಕೆಲಸ ನಿರ್ವಹಿಸುವ ಹೊರ ರಾಜ್ಯದ ಕಾರ್ಮಿಕರ ಮಾಹಿತಿಯಲ್ಲಿ ಗೊಂದಲವಿದ್ದಲ್ಲಿ ನಿರ್ಲಕ್ಷಿಸದೆ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸಿ ಟಿ ರವಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಾಸನದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದುದನ್ನು ಪತ್ತೆ ಹಚ್ಚಲಾಗಿದೆ.ಇಲ್ಲಿಯೂ ಅಂತಹದ್ದೇ ದಂದೆ ನಡೆಯುತ್ತಿರುವ ಸಾಧ್ಯತೆಗಳಿವೆ.ಯಾವುದೇ ಕಾರಣಕ್ಕೂ ಕಾರ್ಮಿಕ ಇಲಾಖೆ ನಿರ್ಲಕ್ಷ್ಯ ವಹಿಸದೆ ಮಾಹಿತಿ ಸಂಗ್ರಹಕ್ಕೆ ಮುಂದಾ ಗಬೇಕು.ಅಗತ್ಯವಿದ್ದಲ್ಲಿ ಪೊಲೀಸ್ ಇಲಾಖೆಯ ಸಹಕಾರ ಪಡೆಯುವಂತೆ ಸೂಚಿಸಿದರು.
ಕಾರ್ಮಿಕ ಇಲಾಖೆ ಅಧಿಕಾರಿ ಮಾತನಾಡಿ ಕಾಫಿ ಎಸ್ಟೇಟ್ಗಳಿಗೆ ಬರುವ ಕಾರ್ಮಿಕರ ಮಾಹಿತಿಯನ್ನು ಕಲೆ ಹಾಕಿ ಇಲಾಖೆಗೆ ಸಲ್ಲಿಸಲು ಎಸ್ಟೇಟ್ ಮಾಲೀಕರಿಗೆ ಸೂಚಿಸಲಾಗಿದೆ. ಯಾವುದೇ ಕಾರ್ಮಿಕನ ವಿಳಾಸ, ಮಾಹಿತಿಯಲ್ಲಿ ಗೊಂದಲವಿದ್ದಲ್ಲಿ ಪೊಲೀಸ್ ಇಲಾಖೆ ಸಹಕಾರದೊಂದಿಗೆ ಕ್ರಮ ವಹಿಸಲಾಗುತ್ತಿದೆ ಎಂದರು.
ಸಭೆಯಲ್ಲಿ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್ ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ, ಚಿಕ್ಕಮಗಳೂರು ಉಪವಿಭಾಗಾಧಿಕಾರಿ ದಲ್ಜಿತ್ ಕುಮಾರ್, ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕಿ ನಯನ ಮೋಟಮ್ಮ, ನಗರ ಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಬೀರೂರು ಪುರಸಭೆ ಅಧ್ಯಕ್ಷೆ ವನಿತಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.