ಚಿಕ್ಕಮಗಳೂರು-ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದಿರುವುದನ್ನು ರದ್ದು ಗೊಳಿಸಬೇಕು ಎಂದು ಒತ್ತಾಯಿಸಿ ನಗರದ ಹನುಮಂತಪ್ಪ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆಗಟ್ಟಿದ ಬಿ.ಜೆ.ಪಿ ನಗರ ಮತ್ತು ಗ್ರಾಮಾಂತರ ಕಾರ್ಯಕರ್ತರು ಮಾವನ ಸರಪಳಿ ನಿರ್ಮಿಸಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ತಾಲ್ಲೂಕು ಕಚೇರಿಯಿಂದ ಹನುಮಂತಪ್ಪ ವೃತ್ತದವರೆಗೆ ರಾಜ್ಯಸರ್ಕಾರದ ವಿರುದ್ಧ ದಿಕ್ಕಾರ ಕೂಗುತ್ತಾ ಜಾಥಾ ನಡೆಸಿದ ಬಿ.ಜೆ.ಪಿ ಕಾರ್ಯಕರ್ತರು ಪಹಣಿ ಹಾಗೂ ಪತ್ರಗಳನ್ನು ಸುಟ್ಟುಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಬಿ.ಜೆ.ಪಿ ನಗರಾಧ್ಯಕ್ಷ ಕೆ.ಎಸ್.ಪುಷ್ಪರಾಜ್ ವಿಜಯಪುರ ಜಿಲ್ಲೆಯಲ್ಲಿ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂಬುದು ನಮೂದಾಗಿರುವ ಬೆನ್ನಲ್ಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವ ಸಾಧ್ಯತೆಗಳು ಕೇಳಿ ಬರುತ್ತಿರುವ ಹಿನ್ನೆಲೆ ರೈತರು, ವಿವಿಧ ಸಂಘ-ಸoಸ್ಥೆ ಹಾಗೂ ಜನಸಾಮಾನ್ಯರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ ಎಂದರು.
ಸಾಮರಸ್ಯ ಹಾಗೂ ಸಹೋದರತೆಯ ರಾಜ್ಯವನ್ನು ಕಾಂಗ್ರೆಸ್ ಸರ್ಕಾರ ವಕ್ಫ್ ಮಂಡಳಿಯ ಮುಖಾಂತರ ಅತ್ಯಂತ ಆತಂಕ ಸ್ಥಿತಿಗೆ ತಳ್ಳುತ್ತಿದೆ.ಇದನ್ನರಿತು ಪ್ರಧಾನ ಮಂತ್ರಿಗಳು ದೇಶದ ಜನತೆಯ ಹಿತದೃಷ್ಟಿಯಿoದ ಹಾಗೂ ವಕ್ಫ್ ಮಂಡಳಿಯಲ್ಲಿ ಜರುಗುತ್ತಿರುವ ಅಕ್ರಮಗಳನ್ನು ಬಗೆಹರಿಸುವ ಸಲುವಾಗಿ ವಕ್ಫ್ ಕಾಯ್ದೆಗೆ ತಿದ್ದುಪಡಿಗೆ ವಿಧೇಯಕವನ್ನು ಮಂಡಿಸಿದ್ದಾರೆ ಎಂದರು.
ಕೇoದ್ರದ ತಿದ್ದುಪಡಿ ಕಾಯ್ದೆ ಬಹುತೇಕ ಜಾರಿಯಾಗುವುದು ನಿಖರವಾಗುವ ವೇಳೆ ವಕ್ಫ್ ಬೋರ್ಡ್ ಕರಾಳ ಕೈಚಳಕವನ್ನು ಮಾಡುವ ಮೂಲಕ ಇಡೀ ದೇಶದಲ್ಲಿ ಸಾರ್ವಜನಿಕ ಆಸ್ತಿಯನ್ನು ಕಬಳಿಸುವ ಹುನ್ನಾರಕ್ಕೆ ಕೈಹಾಕಿದೆ. ಅಲ್ಲದೇ ರಾಜ್ಯದಲ್ಲಿ ಇಂಥ ಎಲ್ಲಾ ಕೃತ್ಯಗಳಿಗೂ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ಜಮೀರ್ ಅಹ್ಮದ್ ನೇರವಾಗಿ ಕುಮ್ಮಕ್ಕು ನೀಡುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.
ಬಿ.ಜೆ.ಪಿ ರಾಜ್ಯ ರೈತಮೋರ್ಚಾ ಮುಖಂಡ ಹೆಚ್.ಸಿ.ಕಲ್ಮರುಡಪ್ಪ ಮಾತನಾಡಿ ರಾಜ್ಯದ ವಿವಿಧ ಜಿಲ್ಲೆ ಗಳಲ್ಲಿ ಸಾವಿರಾರು ಎಕರೆ ಪ್ರದೇಶ, ಇತಿಹಾಸವುಳ್ಳ ಹಲವಾರು ದೇವಾಲಯಗಳು, ಪಟ್ಟಣ ಪಂಚಾಯಿತಿ ಕಾರ್ಯಾಲಯ, ಮಠಗಳು, ಪೂರ್ವಜರ ಜಮೀನುಗಳನ್ನು ವಕ್ಫ್ ಆಸ್ತಿಯೆಂದು ಘೋಷಿಸಲು ರಾಜ್ಯಸರ್ಕಾರ ಬಹದೊಡ್ಡ ಹುನ್ನಾರವನ್ನು ನಡೆಸುತ್ತಿದೆ ಎಂದು ಆರೋಪಿಸಿದರು.
ವಕ್ಫ್ ಬೋರ್ಡ್ನ ದ್ವಂದ್ವ ನಿಲುವುಗಳಿಂದ ರಾಜ್ಯದಲ್ಲಿ ಸಾಮರಸ್ಯ ಹೆದಗೆಡುವುದಕ್ಕೆ ಕಾರಣವಾಗಿದೆ. ರಾಜ್ಯಸರ್ಕಾರ ವಿವೇಚನೆಯಿಲ್ಲದೇ ಕೈಗೊಳ್ಳುತ್ತಿರುವ ನಿರ್ಧಾರಗಳಿಗೆ ರಾಜ್ಯದ ಅನೇಕ ಆಸ್ತಿಗಳ ವ್ಯಾಜ್ಯ ಬೀದಿಗೆ ಬೀಳುತ್ತಿದೆ.ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರ ಕೇವಲ ಅಲ್ಪಸಂಖ್ಯಾತರನ್ನು ಓಲೈಸುತ್ತಿದೆ ಎಂದು ದೂರಿದರು.
ಬಿ.ಜೆ.ಪಿ ಜಿಲ್ಲಾ ವಕ್ತಾರ ಸಿ.ಹೆಚ್.ಲೋಕೇಶ್ ಮಾತನಾಡಿ ರಾಜ್ಯದಲ್ಲಿ ವಕ್ಫ್ ನಿಲುವುಗಳು ಮುಂದುವರಿದರೆ ಆಗುವ ಅನಾಹುತಗಳಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನೇರ ಹೊಣೆಯಾಗಲಿದೆ.ಹೀಗಾಗಿ ರಾಜ್ಯದ ಹಾಗೂ ರೈತರ ಹಿತಕ್ಕೆ ಧಕ್ಕೆಯಾಗುವಂಥ ಯಾವುದೇ ನಿರ್ಧಾರಗಳನ್ನು ಕಾಂಗ್ರೆಸ್ ಸರ್ಕಾರ ಕೈ ಗೊಳ್ಳಬಾರದು.ಮುಸ್ಲೀಂ ಓಲೈಕೆಯಿಂದ ಹಿಂದೂ ವಿರೋಧಿ ನಿರ್ಧಾರವನ್ನು ಕೈಗೊಳ್ಳುವ ಚಾಳಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಸುಜಾತ ಶಿವಕುಮಾರ್, ಸಿಡಿಎ ಮಾಜಿ ಅಧ್ಯಕ್ಷ ಕೋಟೆ ರಂಗ ನಾಥ್, ಬಿಜೆಪಿ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಎಸ್ಟಿ ಘಟಕದ ರಾಜ್ಯ ಕಾರ್ಯದರ್ಶಿ ಸೀತರಾಮ ಭರಣ್ಯ, ಜಿಲ್ಲಾಧ್ಯಕ್ಷ ನಂದೀಶ್ ಮದಕರಿ,ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ಮಾಧ್ಯಮ ಸಹ ಪ್ರಮುಖ್ ಹೆಚ್.ಕೆ.ಕೇಶವಮೂರ್ತಿ, ಮುಖಂಡರುಗಳಾದ ಜಸಂತಾ ಅನಿಲ್‌ಕುಮಾರ್, ದಿನೇಶ್, ರವೀಂದ್ರ, ಬೆಳವಾಡಿ, ಕಬೀರ್‌ಖಾನ್, ಸಂತೋಷ್ ಕೋಟ್ಯಾನ್ ಮತ್ತಿತರರಿದ್ದರು.
—————–ಸುರೇಶ್