ಮಂಡ್ಯ:- ಗಂಗಾರತಿ ರೀತಿ ದಕ್ಷಿಣ ಕರ್ನಾಟಕದ ಜೀವನಾಡಿ ಕಾವೇರಿ ಆರತಿ ಮಾಡುವ ಸಂಬಂಧ ಯೋಜನೆ ರೂಪಿಸಲು ಸಮಿತಿ ರಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದರು.
ಕೆ ಆರ್ ಎಸ್ ಅಣೆಕಟ್ಟೆಯ ಸುತ್ತ ಡಿ. ಕೆ. ಶಿವಕುಮಾರ್ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿ. ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ. ಕೆ. ಶಿವಕುಮಾರ್., ಸರ್ಕಾರದ ವತಿಯಿಂದ 98 ಕೋಟಿ ಹಣವನ್ನು ಕಾವೇರಿ ಆರತಿ ಮಾಡುವ ಸಲುವಾಗಿ ಈ ಬಾರಿಯ ಬಜೆಟ್ ನಲ್ಲಿ ಅನುದಾನ ಮೀಸಲಿಡಲಾಗಿದೆ. ಈ ಭಾಗದ ಪವಿತ್ರ ನದಿಯಾಗಿ ಜೀವನಾಡಿ ಯಾಗಿರುವ ಕಾವೇರಿ ಮಾತೆಗೆ ಪೂಜೆ ಸಲ್ಲಿಸುವ ಸಲುವಾಗಿ ಅನೇಕ ಸಲಹೆಯನ್ನು ಪಡೆಯಲಾಗಿದೆ ಎಂದರು.

ಕಂದಾಯ, ಮುಜರಾಯಿ, ಪ್ರವಾಸೋದ್ಯಮ, ನೀರಾವರಿ, ಚೆಸ್ಕಂ ಸೇರಿದಂತೆ ಹಲವು ಇಲಾಖೆಗಳ ಜೊತೆಗೂಡಿ ಸಮಿತಿಯನ್ನು ರಚಿಸಲಾಗಿದೆ. ಇನ್ನೆರಡು ದಿನದಲ್ಲಿ ನೀಲಿ ನಕ್ಷೆ ತಯಾರಿಸಲಾಗುವುದು ಎಂದರು.

98 ಕೋಟಿ ಸೇರಿದಂತೆ ವಿವಿಧ ಇಲಾಖೆಗಳಿಂದ ಅನುದಾನ ಪಡೆದು ವಿಶೇಷ ರೀತಿಯಲ್ಲಿ ಗಂಗಾರತಿ ಮಾಡಲಾಗುವುದು. ವಿದ್ಯುತ್ ಅಲಂಕಾರ ಸೇರಿದಂತೆ ಇದರ ಜೊತೆಗೆ ಹಲವು ಇಲಾಖೆಯಿಂದಲೂ ಹಣವನ್ನು ಬಳಸಿಕೊಳ್ಳಲಾಗುವುದು. ಸಮರ್ಪಕ ರಸ್ತೆ ನಿರ್ಮಿಸಿ ಧಾರ್ಮಿಕವಾಗಿ ಕುಟುಂಬ ಸಮೇತವಾಗಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು ಕೆ ಆರ್ ಎಸ್ ವ್ಯಾಪ್ತಿಗೆ ಬರುವ 4 ಪಂಚಾಯತಿಗಳ ಅಭಿವೃದ್ದಿಗೆ ಯೋಜನೆ ರೂಪಿಸಬೇಕು. ಯೋಜನೆ ವಿವರವನ್ನು ನೀಡಲಾಗುವುದು ಉಳಿದ ವ್ಯವಸ್ಥೆ ಆಯಾ ನಿವಾಸಿಗಳೇ ಮಾಡಿಕೊಳ್ಳಬೇಕು. ಇದರಿಂದ ಇಲ್ಲಿನ ಸ್ಥಳೀಯ ಯುವ ಜನರಿಗೆ ಹೆಚ್ಚು ಉದ್ಯೋಗವಕಾಶವನ್ನು ನೀಡಲಾಗುವುದು ಕಾವೇರಿ ಆರತಿಯನ್ನು ಒಂದೇ ಬಾರಿಗೆ 10ಸಾವಿರ ಜನರು ನೋಡುವ ವ್ಯವಸ್ಥೆಯನ್ನು ಮಾಡಲಾಗುವುದು ವಾರದಲ್ಲಿ ಎಷ್ಟು ದಿನ ಕಾವೇರಿ ಆರತಿ ಮಾಡಬೇಕು ಎಂಬುದರ ಬಗ್ಗೆ ಮುಂದಿನ ದಿನದಲ್ಲಿ ಬೆಂಗಳೂರಿನಲ್ಲೂ ಮತ್ತೊಂದು ಸಭೆ ಮಾಡಿ ತೀರ್ಮಾನ ಮಾಡಲಾಗುವುದು ಎಂದರು.

ಈ ಬಾರಿ ವಿನೂತನ ದಸರಾ; ಕಂಬಳ ಸೇರ್ಪಡೆ
“ನಾಡ ಹಬ್ಬ ದಸರಾವನ್ನು ಸಹ ವಿನೂತನವಾಗಿ ಆಚರಿಸಲು ಚರ್ಚೆ ನಡೆಸಲಾಗಿದೆ. ಹಳೆಯ ಒಂದಷ್ಟು ಪದ್ದತಿಗಳನ್ನು ಕೈಬಿಟ್ಟು ಹೊಸ ಪೀಳಿಗೆಯನ್ನು ಸೆಳೆಯುವಂತೆ ಚರ್ಚೆ ನಡೆಸಲಾಗಿದೆ. ಮುಖ್ಯಮಂತ್ರಿಗಳು ಶೀಘ್ರದಲ್ಲಿಯೇ ಸಭೆ ನಡೆಸೋಣ ಎಂದು ಹೇಳಿದ್ದಾರೆ. ಕಂಬಳ ನಮ್ಮ ರಾಜ್ಯದ ಕರಾವಳಿ ಭಾಗ ವಿಶೇಷವಾದ ಆಚರಣೆ, ಹೀಗಾಗಿ ಕಂಬಳವನ್ನು ದಸರಾದಲ್ಲಿ ಸೇರಿಸಲಾಗುವುದು. ಇದಕ್ಕೆ ಸ್ಥಳ ಹುಡುಕಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದರು.

ಈ ಸಂದರ್ಭದಲ್ಲಿ ಶಾಸಕ ರಮೇಶ್ ಬಾಬು ಬಂಡಿ ಸಿದ್ದೇಗೌಡ. ದರ್ಶನ ಪುಟ್ಟಣ್ಣಯ್ಯ. ದಿನೇಶ್ ಗೂಳಿಗೌಡ. ಮಂಡ್ಯ ಜಿಲ್ಲಾಧಿಕಾರಿ ಕುಮಾರ್, ಸಿ ಇ ಒ ನಂದಿನಿ, ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಬಿ.ಡಬ್ಲ್ಯೂ.ಎಸ್.ಎಸ್.ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್, ಕಾವೇರಿ ನೀರಾವರಿ ನಿಗಮದ ಎಂ.ಡಿ. ಮಹೇಶ್ ಮತ್ತಿತರರು ಭಾಗವಹಿಸಿದ್ದರು.