ಅರಸೀಕೆರೆ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ತೀವ್ರ ಮುಖಭಂಗವಾಗಿದ್ದು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ.
ತಾಲೂಕಿನ ಜಾವಗಲ್ ಹೋಬಳಿಯ ದೇಶಾಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.) ಯ ಆಡಳಿತ ಮಂಡಳಿ ಚುನಾವಣೆಗೆ ಭಾನುವಾರದಂದು ನಡೆದ ಆಡಳಿತ ಮಂಡಳಿಯ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 7 ಅಭ್ಯರ್ಥಿಗಳು, ಬಿಜೆಪಿ ಬೆಂಬಲಿತ 4 ಹಾಗೂ ಕಾಂಗ್ರೆಸ್ ಬೆಂಬಲಿತ ಓರ್ವ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಮಾರ್ಚ್ 09 ರಂದು ನಡೆದ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ಮುಖಂಡರು ಮೈತ್ರಿ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಶೀಲರಾಗಿದ್ದಾರೆ. ಜೆಡಿಎಸ್ ಮುಖಂಡ ನಿಂಗರಾಜು ಅವರು ಮುಂದಾಳತ್ವದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 12 ಸ್ಥಾನಗಳ ಪೈಕಿ 11 ಸ್ಥಾನವನ್ನು ಮೈತ್ರಿ ಪಕ್ಷಗಳ ಬೆಂಬಲಿತರು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ತೀವ್ರ ಮುಖಭಂಗವಾಗಿದೆ.
ಚುನಾವಣಾ ಕಣದಲ್ಲಿದ್ದ ಕಾಂಗ್ರೆಸ್ ಬೆಂಬಲಿತ 12 ಅಭ್ಯರ್ಥಿಗಳ ಪೈಕಿ ಕೇವಲ 1 ಸ್ಥಾನವನ್ನು ಗೆದ್ದು ತೀವ್ರ ಹಿನ್ನಡೆ ಅನುಭವಿಸಿದೆ. ಭಾನುವಾರ ಬೆಳಗ್ಗೆ 9 ಗಂಟೆಗೆ ಆರಂಭವಾದ ಮತದಾನ ಮಧ್ಯಾಹ್ನ ಬಿಸಿಲಿನಲ್ಲೂ ಮತದಾರರು ಮತಗಟ್ಟೆಗೆ ಬಂದು ಹಕ್ಕು ಚಲಾಯಿಸುವಲ್ಲಿ ನಿರತರಾಗಿದ್ದರು.

ಜೆಡಿಎಸ್ ಮುಖಂಡ ದೇಶಾಣಿ ನಿಂಗರಾಜು, ದೇಶಾಣಿ ದೇವರಾಜ್, ಸಿದ್ದೇಶ್ ಗುರುಮೂರ್ತಿ, ಬಸಪ್ಪನಾಯಕ, ದೇವನಾಯ್ಕ ಹಾಗೂ ಬಿಜೆಪಿ ಮುಖಂಡರಾದ ನಟರಾಜು, ರವಿಕುಮಾರ್, ಪಂಚಕ್ಷರಿ, ಗಿರೀಶ್ ಸೇರಿದಂತೆ ಇತರ ಮುಖಂಡರು ಮತಗಟ್ಟೆ ಬಳಿ ದಿನವಿಡೀ ಇದ್ದು ಮತಯಾಚಿಸಿ ಚುನಾವಣೆ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸಾಲಗಾರರಲ್ಲದ ಕ್ಷೇತ್ರದಲ್ಲಿ ಒಟ್ಟು 160 ಮತದಾರರಿದ್ದು, ಈ ಪೈಕಿ 137 ಮತದಾರರು ಮತ ಚಲಾಯಿಸಿದ್ದು, ಜೆಡಿಎಸ್ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಂಕರಪ್ಪ 74 ಮತ ಪಡೆದು ಜಯಶೀಲರಾಗಿದ್ದಾರೆ. ಸಾಲಗಾರರ ಕ್ಷೇತ್ರದ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 670 ಮತದಾರರ ಪೈಕಿ 420 ಜನ ಮತದಾರರು ಮತಚಲಾಯಿಸಿದ್ದಾರೆ.
ಸಂಘದ ಕಾರ್ಯದರ್ಶಿ ವಿಶ್ವನಾಥ್ ಹಾಗೂ ಸಿಬ್ಬಂದಿಗಳಾದ ಚೇತನ್, ರಾಜು ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದ್ದು, ಜಾವಗಲ್ ಠಾಣಾ ಪೊಲೀಸರು ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಕುಮಾರಿ, ಗುರುಮೂರ್ತಿ ಸ್ವಾಮಿ, ಚಂದ್ರಶೇಖರ್, ತಾಂಡೇಶ್ವರ, ಬಸವರಾಜು, ಬಸವರಾಜು.ಎಂ.ಎಂ, ಭಾನುಪ್ರಕಾಶ್, ಮಲ್ಲಿಕಾರ್ಜುನ್, ಮೂರ್ತಿ ಭೋವಿ, ಯಶೋದಮ್ಮ ಜಯ ಸಾಧಿಸಿದರೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ದೇಶಾಣಿ ಆನಂದ್ ಗೆಲ್ಲುವ ಮೂಲಕ ಖಾತೆ ತೆರೆಯಲು ಶಕ್ತರಾದರೆ ಉಳಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸೋತು ಮುಖಭಂಗ ಅನುಭವಿಸಿದ್ದಾರೆ.

12 ಸ್ಥಾನಗಳಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯ ಫಲಿತಾಂಶವನ್ನು ಚುನಾವಣಾಧಿಕಾರಿ ದೇವರಾಜ್ ಅವರು ಘೋಷಣೆ ಮಾಡಿದ್ದಾರೆ.